

ಬೆಳಗಾವಿ : ಕಾರಾಗೃಹದಿಂದ ಬಿಡುಗಡೆಯಾದ ಬಳಿಕ ಸಮಾಜದಲ್ಲಿ ಸಜ್ಜನರ ಸಂಗ ಮಾಡಿ ತಮ್ಮ ಕುಟುಂಬದರೊಂದಿಗೆ ಪ್ರೀತಿಯಿಂದ ಬಾಳಬೇಕು. ಮತ್ತದೇ ತಪ್ಪು ಮಾಡದೇ ಜವಾಬ್ದಾರಿಯುತ ಪ್ರಜೆಗಳಾಗಿ ದೇಶಕ್ಕೆ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಹಿಂಡಲಗಾ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಕೃಷ್ಣಕುಮಾರ ಹೇಳಿದರು.
ಹಿಂಡಲಗಾ ಕಾರಾಗೃಹದಲ್ಲಿ ಮಂಗಳವಾರ 77ನೇ ಸ್ವಾತಂತ್ರೃ ದಿನಾಚರಣೆಯಲ್ಲಿ ಇಬ್ಬರು ಖೈದಿಗಳನ್ನು ಬಿಡುಗಡೆಗೊಳಸಿ ಮಾತನಾಡಿದ ಅವರು, ‘ದೇಶ ನನಗೇನು ನೀಡಿದೆ ಎನ್ನುವದರ ಬದಲು ದೇಶಕ್ಕಾಗಿ ಏನು ಮಾಡಿದ್ದೇವೆ ಎನ್ನುವ ಉತ್ತಮ ವಿಚಾರಗಳು ನಮ್ಮಲ್ಲಿರಬೇಕು’ ಎಂದರು.
1923ರಲ್ಲಿ ಸ್ಥಾಪನೆಗೊಂಡ ಈ ಕಾರಾಗೃಹಕ್ಕೆ 100 ವರ್ಷಗಳು ಪೂರ್ಣಗೊಂಡಿದ್ದು, ಸ್ವಾತಂತ್ರೊೃೀತ್ಸವದ ಜತೆಗೆ ಶತಮಾನೋತ್ಸವದ ಸಂಭ್ರಮವೂ ಸೇರಿದ್ದು ಹೆಚ್ಚಿನ ಸಂತಸ ತಂದಿದೆ. ಓರ್ವ ಕಾರಾಗೃಹ ಅಧಿಕಾರಿಯ ಸಂತೋಷವು ‘ತಮ್ಮ ಸೇವಾ ಅವಧಿಯಲ್ಲಿ ಎಷ್ಟು ಜನ ಬಂದಿಗಳು ಬಿಡುಗಡೆಯಾಗಿರುತ್ತಾರೆ’ ಎಂಬುದರಲ್ಲಿ ಅಡಗಿರುತ್ತದೆ. ಬಿಡುಗಡೆಗೊಂಡವರು ಸಮಾಜಮುಖಿಯಾಗಿ ಜೀವನ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಇಬ್ಬರು ಅಲ್ಪಾವಧಿ ಶಿಕ್ಷಾಬಂದಿಗಳಾದ ಗೋಕಾಕ ತಾಲೂಕಿನ ಅಜ್ಜನಕಟ್ಟಿಯ ಸಿದ್ದಪ್ಪ ವೆಂಕಪ್ಪ ಪೂಜೇರಿ ಹಾಗೂ ಖಾನಾಪುರ ತಾಲೂಕಿನ ಹಿರೇಮುನವಳ್ಳಿಯ ಮಾಣಿಕ ಈರಪ್ಪ ಅಳವನಿ ಅವರಿಗೆ ಬಿಡುಗಡೆ ಪ್ರಮಾಣಪತ್ರ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ಬಂದಿಗಳಿಗೆ ಬಹುಮಾನ ವಿತರಿಸಲಾಯಿತು. ಮುಖ್ಯ ಮಂತ್ರಿ ಪದಕಕ್ಕೆ ಭಾಜನರಾಗಿರುವ ಸಹಾಯಕ ಜೈಲರ್ ಆಗಿದ್ದ ದಿ.ರಮೇಶ ಎಸ್.ಚಿಗರಿಯವರ ಪತ್ನಿ ಶೈಲಾ ಚಿಗರಿ, ಶಿರಸಿಯ ಉಪ ಕಾರಾಗೃಹ ಮುಖ್ಯ ವೀಕ್ಷಕ ಮಂಜುನಾಥ ನಾಯ್ಕ ಹಾಗೂ ಬೈಲಹೊಂಗಲದ ತಾಲೂಕು ಉಪ ಕಾರಾಗೃಹದ ಮುಖ್ಯ ವೀಕ್ಷಕಿ ಗಂಗವ್ವ ನಂದೆನ್ನವರ ಅವರಿಗೆ ಮುಖ್ಯ ಮಂತ್ರಿಯವರ ಸೇವಾ ಪದಕ ನೀಡಿ ಗೌರವಿಸಲಾಯಿತು.
ಕಾರಾಗೃಹದ ಆಡಳಿತಾಧಿಕಾರಿ ಬಿ.ಎಸ್.ಪೂಜಾರಿ, ಸಹಾಯಕ ಅಧೀಕ್ಷಕ ಶಹಾಬುದ್ದಿನ್ ಕೆ., ಜೈಲರಗಳಾದ ವೈ.ಎಸ್.ನಾಯ್ಕ, ಬಸವರಾಜ ಭಜಂತ್ರಿ, ರಮೇಶ ಕಾಂಬಳೆ, ಎಸ್.ಯಾದಗೊಡೆ ಇದ್ದರು.