ಹಿನಕಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಕೆ.ಎಸ್.ಮಧುಸೂದನ್ ಗೆ ರಾಜ್ಯಮಟ್ಟದ ಪುರಸ್ಕಾರ

Madhusudan
Published on

ಮೈಸೂರು: ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲದಂತೆ ಸರ್ಕಾರಿ ಶಾಲೆಗಳಲ್ಲಿ ಯಾಕೆ ಗುಣಮಟ್ಟದ ಶಿಕ್ಷಣ ಕೊಡಬಾರದು ಎನ್ನುವ ನನ್ನ ಪ್ರಯತ್ನಕ್ಕೆ ಸರ್ಕಾರ ಬೆಂಬಲವಾಗಿ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಸಂತೋಷ ತಂದಿದೆ ಎಂದು ಹಿನಕಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಕೆ.ಎಸ್.ಮಧುಸೂದನ್ ಪ್ರತಿಕ್ರಿಯಿಸಿದರು.
ರಾಜ್ಯ ಸರ್ಕಾರ ನೀಡುವ ಉತ್ತಮ ಪ್ರಶಸ್ತಿಗೆ ಆಯ್ಕೆಯಾಗಿರುವ ಅವರು, ಪಾಲಕರು ಖಾಸಗಿ ಶಾಲೆಗಳಿಗೆ ಹೆಚ್ಚು ಮೊರೆ ಹೋಗುತ್ತಿದ್ದಾರೆ. ಆದರೆ ವಾಸ್ತವವಾಗಿ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಕರು, ಅತ್ಯಂತ ಕಡಿಮೆ ಶುಲ್ಕ, ಪುಸ್ತಕ, ಸಮವಸ್ತ್ರ ಸೇರಿದಂತೆ ಇನ್ನಿತರ ಸೌಲಭ್ಯ ನೀಡುತ್ತಾ ಬರುತ್ತಿದೆ. ಆದರೂ ಸರ್ಕಾರಿ ಶಾಲೆಗಳಲ್ಲಿ ಮಕ್ಕಳು ಕಲಿಕೆಯಲ್ಲಿ ಹಿಂದುಳಿಯುತ್ತಾರೆ ಎನ್ನುವ ಅಪವಾದ ಹೋಗಲಾಡಿಸಬೇಕಿದೆ ಎಂದರು.
ದಿಲ್ಲಿಯ ಎನ್‌ಸಿಇಆರ್‌ಟಿ ಯಲ್ಲಿ ನಾನು ಸಂಪನ್ಮೂಲ ವ್ಯಕ್ತಿಯಾಗಿಯೂ ಕಾರ್ಯ ನಿರ್ವಹಿಸಿರುವುದರಿಂದ ಅಲ್ಲಿಯ ಅನುಭವವನ್ನು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಗುಣಮಟ್ಟದ ಕಲಿಕೆಗೆ ಬಳಸಿಕೊಳ್ಳಲು ಮುಂದಾಗಿದ್ದೇನೆ. ವಿಶ್ವದಲ್ಲಿಯೇ ಗುಣಮಟ್ಟದ ಶಿಕ್ಷಣ ಎಲ್ಲಿ ನೀಡಲಾಗುತ್ತಿದೆ ಎನ್ನುವ ಶೋಧನೆ ನಡೆಸಿ ಅಲ್ಲಿಯ ಪದ್ಧತಿಯನ್ನು ಪ್ರಾಯೋಗಿಕವಾಗಿ ನಮ್ಮ ಶಾಲೆಯಲ್ಲಿ ಅಳವಡಿಸುವ ಪ್ರಯತ್ನ ನಡೆದಿದೆ ಎಂದು ಹೇಳಿದರು.
ಎನ್‌ಇಪಿ ಮಾದರಿಯಲ್ಲಿ ಅನುಭವಾತ್ಮಕ ಕಲಿಕೆಗೆ ಮುಂದಾಗಿದ್ದೇವೆ. ವಿಜ್ಞಾನ, ತಂತ್ರಜ್ಞಾನ, ಗಣಿತ, ಇಂಜಿನಿಯರಿಂಗ್ ಸಮ್ಮಿಲನದ ಕಲಿಕೆಗೆ ಒತ್ತು ನೀಡಲಾಗುತ್ತಿದೆ. ಇದಕ್ಕಾಗಿ ರೋಬಾಟಿಕ್ ಮಾದರಿ ಬೋಧನೆ, ಇಂಗ್ಲಿಷ್ ಕಲಿಕೆಗೆ ಕೆಲ ಕಂಪನಿಗಳ ಸಹಯೋಗ ಪಡೆಯಲಾಗಿದೆ. ಪ್ರಾಯೋಗಿಕವಾಗಿ ಈಗ 40ರಷ್ಟು ವಿದ್ಯಾರ್ಥಿಗಳಿಗೆ ಕಲಿಕೆ ಪ್ರಯೋಗ ನಡೆದಿದೆ. ಇದರ ಆಧಾರದ ಮೇಲೆ ಮುಂದಿನ ವರ್ಷದಲ್ಲಿ ಇತರ ವಿದ್ಯಾರ್ಥಿಗಳಿಗೂ ವಿಸ್ತರಿಸಲಾಗುವುದು. ಅಧಿಕಾರಿಗಳ ಸಹಕಾರದಿಂದ ಶಿಕ್ಷಕರಿಗೆ ಈ ಕುರಿತು ತರಬೇತಿ ಎಲ್ಲ ಶಾಲೆಗಳಲ್ಲಿಯೂ ಅನುಭವಾತ್ಮಕ ಕಲಿಕೆಗೆ ಮುಂದಾಗುವಂತೆ ಪ್ರೇರಣೆ ನೀಡುವ ಉದ್ದೇಶ ನನ್ನದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net