

ಲಕ್ಷ್ಮೇಶ್ವರ: ಗಣಪತಿ ವಿಸರ್ಜನೆ ಮೆರವಣಿಗೆಗೆ ತರಿಸಲಾಗಿದ್ದ ಹೋರಿ (ಹಾವೇರಿ-ಬೆಟ್ಟದ ಹುಲಿ) ತಿವಿತದಿಂದ ಮಹಿಳೆಯ ತಲೆಗೆ ಬಲವಾದ ಪೆಟ್ಟುಬಿದ್ದು ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ದಾಖಲಾದ ಘಟನೆ ಬುಧವಾರ ಜರುಗಿದೆ.
ಪಟ್ಟಣದ ಕೃಷ್ಣಾ ಚಿತ್ರ ಮಂದಿರದ ಹತ್ತಿರ ಹಾದು ಹೋಗುತ್ತಿದ್ದ ಮಹಿಳೆ ನಂದಾ ಎಸ್ ಓಂಕಾರಿ (45) ಅವರಿಗೆ ರಭಸದಿಂದ ಓಡಿ ಬಂದ ಹೋರಿ ತಿವಿದಿದೆ. ನೆಲಕ್ಕೆ ಬಿದ್ದ ಮಹಿಳೆಯ ತಲೆಗೆ ತೀವ್ರ ಗಾಯವಾಗಿದ್ದು ಲಕ್ಷ್ಮೇಶ್ವರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಜಿಮ್ಸ್‌ಗೆ ದಾಖಲಿಸಲಾಗಿದೆ. ಜೊತೆಗಿದ್ದ ಮಹಿಳೆ ಗಿರಿಜಾ ಕಟಗಿ ಅವರಿಗೂ ಅಲ್ಲಲ್ಲಿ ತರಚಿದ ಗಾಯಗಳಾಗಿವೆ.
ಕಳೆದ ತಿಂಗಳು ಸಂಗೊಳ್ಳಿ ರಾಯಣ್ಣ ಜಯಂತ್ಯುತ್ಸವ ಮೆರವಣಿಗೆ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಮೆರವಣಿಗೆಗೆ ತರಿಸಲಾಗಿದ್ದ ಹೋರಿ ಶಾಸಕ ಸಿ.ಸಿ. ಪಾಟೀಲ ಅವರ ಪುತ್ರ ಉಮೇಶಗೌಡ ಪಾಟೀಲ ಮತ್ತು ನಾಗರಿಕರೊಬ್ಬರಿಗೆ ತಿವಿದು ಗಾಯಗೊಳಿಸಿತ್ತು.
ಈ ರೀತಿಯ ಘಟನೆಗಳು ಪದೇಪದೆ ನಡೆಯುತ್ತಿದ್ದರೂ ಕಾರ್ಯಕ್ರಮ ಸಂಘಟಕರು ಮತ್ತು ಪೊಲೀಸರು ಎಚ್ಚರಿಕೆವಹಿಸಬೇಕು ಎನ್ನುವ ಮಾತುಗಳು ಕೇಳಿ ಬಂದಿವೆ.