

ಶೃಂಗೇರಿ: ನಾಡಿನೊಳಗೆ ಇರುವ ನಮಗೆ ಸರ್ಕಾರ ಸವಲತ್ತು ನೀಡಿದಂತೆ ಗುಡ್ಡಗಾಡು ಪ್ರದೇಶದಲ್ಲಿರುವ ಗಿರಿಜನರಿಗೂ ಅಗತ್ಯ ಮೂಲ ಸೌಕರ್ಯ ನೀಡಿ ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಕೆರೆ ಗ್ರಾಪಂನ ಬಾಳಗೆರೆ ಗ್ರಾಮದ ಮುಂಡಗಾರಿನಲ್ಲಿ ಏರ್ಪಡಿಸಿದ್ದ ಗಿರಿ ಸಂಗಮ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿ, ಪ್ರತಿಯೊಬ್ಬರಿಗೂ ಬದುಕುವ ಹಕ್ಕಿದೆ. ಹಾಗೆಯೇ ಸಮಾಜದ ಕಟ್ಟಕಡೆಯ ಗುಡ್ಡಗಾಡಿನಲ್ಲಿ ನೆಲೆಸಿರುವ ಜನಸಾಮಾನ್ಯರ ಬದುಕಿಗೆ ಸರ್ಕಾರದ ಸಹಕಾರ ಅಗತ್ಯವಿದೆ. ಹಿರಿಯರ ಪಾರಂಪರಿಕ ಕಸುಬುಗಳನ್ನು ನಿರ್ವಹಿಸಿ ಬದುಕು ಕಟ್ಟಿಕೊಂಡ ಗಿರಿಜನರಿಗೂ ಬದುಕುವ ಹಕ್ಕು ಹಾಗೂ ಮೂಲಸೌಲಭ್ಯ ಕಲ್ಪಿಸಬೇಕಿದೆ ಎಂದರು.
ಎಲ್ಲರೂ ಜೀವನದಲ್ಲಿ ನೆಮ್ಮದಿಯಿಂದ ಬಾಳಲು ಬಯಸುತ್ತಾರೆ. ನೆಮ್ಮದಿ ದೊರಕಲು ನಾವು ಸದಾ ಭಗವಂತನ ಸ್ಮರಣೆ ಮಾಡಬೇಕು.ಭಗವಂತನ ಅನುಗ್ರಹವಿದ್ದಲ್ಲಿ ಸುಖ, ಸಂತೋಷ ದೊರಕುತ್ತದೆ. ಜಗತ್ತಿಗೆ ಮಾರ್ಗದರ್ಶನ ನೀಡಿದ ಶ್ರೀಕೃಷ್ಣನ ಅನುಗ್ರಹ ಮತ್ತು ನಮ್ಮ ಪ್ರಯತ್ನವಿದ್ದರೆ ಯಾವುದೇ ಕೆಲಸವನ್ನು ಮಾಡಬಹುದು ನಮ್ಮ ಧರ್ಮವನ್ನು ನಾವು ಪಾಲಿಸಬೇಕು. ಧರ್ಮದ ತಿರುಳನ್ನು ಅರ್ಥ್ಯೆಸಿಕೊಂಡು ಸಮಾಜಕ್ಕೆ ಒಳಿತನ್ನು ಮಾಡಬೇಕು. ಸಮಾಜದ ಉನ್ನತಿಗಾಗಿ ಪ್ರಾಮಾಣಿಕ ಪ್ರಯತ್ನ ನಮ್ಮಲ್ಲಿ ಇರಬೇಕು. ಎಲ್ಲಿ ಸುಸಂಸ್ಕೃತ ಸಮಾಜ ಇರುತ್ತದೆಯೋ ಅಲ್ಲಿ ಉನ್ನತ ಆಶಯವಿರುತ್ತದೆ. ಈ ಆಶಯಗಳು ದೇಶದ ಉನ್ನತೀಕರಣಕ್ಕೆ ಪೂರಕವಾಗಿರುತ್ತದೆ ಎಂದರು.
ಗಣಪಾತ್ರಿಯಾದ ತಮ್ಮೇಗೌಡ ಮತ್ತು ಗಿಡ್ಡಮ್ಮರವರನ್ನು ಶ್ರೀಗಳು ಗೌರವಿಸಿದರು. ಗ್ರಾಮಕ್ಕೆ ಆಗಮಿಸಿದಾಗ ಶ್ರೀಗಳಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಶ್ರೀಗಳ ಆಗಮನ ಹಿನ್ನಲೆಯಲ್ಲಿ ತಳಿರು ತೋರಣ, ಬಾಳೆಕಂಬಗಳು, ರಂಗೋಲಿ ಹಾಕಿ ಶೃಂಗರಿಸಲಾಗಿತ್ತು. ಕಾರ್ಯಕ್ರಮದ ನಂತರ ಗಿರಿಜನ ಅಭಿವೃದ್ಧಿ ಜಿಲ್ಲಾ ಅಧಿಕಾರಿ ಭಾಗೀರಥಿ, ಇಒ ಸುದೀಪ್, ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಶಾಂತರಾಮ ಸಿದ್ಧಿ ಸಂವಾದ ನಡೆಸಿದರು. ಶ್ರೀ ಶಾರದಾ ಪೀಠದಿಂದ ಮಧ್ಯಾಹ್ನದ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಶಿವರಾಜ್, ಗುರುಪ್ರಸಾದ್,ಚೇತನ್ ಇತರರು ಇದ್ದರು.