

ಮೊಳಕಾಲ್ಮೂರು: ಬಂದೂಕಿನೊಂದಿಗೆ ಅಡವಿಗೆ ತೆರಳಿದ್ದ ಬಾಲಕ ಗುಂಡು ಸಿಡಿದು ಮೃತಪಟ್ಟ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮಹೇಶ (14) ಮೃತ ಬಾಲಕ. ಮೊಳಕಾಲ್ಮೂರಿನ ಕೋಟೆ ಬಡಾವಣೆ ನಿವಾಸಿಯಾದ ಈತ ಮಾ.3ರಂದು ಸಮೀಪದ ಕೂಗೆ ಗುಡ್ಡಕ್ಕೆ ನಾಡ ಬಂದೂಕು ಸಮೇತ ತೆರಳಿದ್ದ. ಅಲ್ಲಿ ಬಂದೂಕಿನ ನಳಿಕೆಯನ್ನು ಮೇಲೆ ಮಾಡಿ ನೆಲಕ್ಕೆ ಕುಟ್ಟುತ್ತಿದ್ದಾಗ ಗುಂಡು ಸಿಡಿದಿದೆ ಎನ್ನಲಾಗಿದೆ.
ಬಾಲಕನ ಶವವನ್ನು ಅಲ್ಲಿಯೇ ಸುಟ್ಟು ಹಾಕಿದ್ದು, ಪ್ರಕರಣವನ್ನು ಮುಚ್ಚಿಡಲಾಗುತ್ತಿದೆ ಎಂದು ಗ್ರಾಮಸ್ಥರಿಂದ ಮಾಹಿತಿ ತಿಳಿದ ಪೊಲೀಸರು ವಿಚಾರಣೆ ಆರಂಭಿಸಿದಾಗ ಮೃತನ ತಾಯಿ ಮಹಾದೇವಿ ಜೂ.27 ರಂದು ದೂರು ನೀಡಿದ್ದಾರೆ.
ಘಟನೆ ವಿವರ: ಕಾಡಿನಲ್ಲಿ ಬಾಲಕನ ಮುಖಕ್ಕೆ ಗುಂಡು ತಾಗಿ ರಕ್ತಸ್ರಾವವಾಗುತ್ತಿರುವುದನ್ನು ನೋಡಿದ ಮೇಕೆ ಕಾಯುವ ಇಬ್ಬರು ಆಸ್ಪತ್ರೆಗೆ ಸಾಗಿಸಲು ಯತ್ನಿಸಿದಾಗ ಮಾರ್ಗ ಮಧ್ಯವೇ ಆತ ಕೊನೆಯುಸಿರೆಳೆದ ಎನ್ನಲಾಗಿದೆ.
ತಕ್ಷಣವೇ ಅವರು ಈ ವಿಷಯವನ್ನು ಮೃತನ ಸಂಬಂಧಿ ಹೊನ್ನೂರಸ್ವಾಮಿ ಎಂಬಾತನಿಗೆ ತಿಳಿಸಿದ್ದಾರೆ.
ಮಹಾದೇವಿ ಹಾಗೂ ಅಜ್ಜಿ ಮಾರಕ್ಕ ಹಾಗೂ ಕೆಲ ಗ್ರಾಮಸ್ಥರೊಂದಿಗೆ ಬಂದ ಹೊನ್ನೂರಸ್ವಾಮಿ, ಶವವನ್ನು ಊರಿಗೆ ಕೊಂಡೊಯ್ಯುವ ಬದಲು ಇಲ್ಲೇ ಸುಟ್ಟು ಹಾಕೋಣ ಎಂದು ಹೇಳಿದ್ದಾರೆ. ಆದರೆ ತಾಯಿ ದುಃಖದಿಂದ ಅಲ್ಲಿಂದ ಹೊರಟು ಹೋಗಿದ್ದಾಳೆ ಎಂದು ತಿಳಿದು ಬಂದಿದೆ.
ಶವವನ್ನು ಸುಟ್ಟ ನಂತರ ಅದೇ ಸ್ಥಳಕ್ಕೆ ಹೋಗಿ ಮೂರು ದಿನದ ಕಾರ್ಯಕ್ರಮ ಮುಗಿಸಲಾಗಿದೆ. ವಿಷಯವನ್ನು ಯಾರಿಗೂ ತಿಳಿಸಬೇಡ, ನಿನ್ನ ಸಹಾಯಕ್ಕೆ ನಾವಿದ್ದೀವಿ ಎಂದು ಹೊನ್ನೂರಸ್ವಾಮಿ ಹೇಳಿದ್ದ. ನನಗೆ ಬೇರಾರೂ ಸಂಬಂಧಿಕರು ಇರದ ಕಾರಣ ನಾನು ಸುಮ್ಮನಾಗಿದ್ದೆ.
ಅಪ್ರಾಪ್ತ ಬಾಲಕನ ಕೈಗೆ ಬಂದೂಕು ಸಿಗುವಂತೆ ಅಜಾಗ್ರತೆ ತೋರಿದ ಯದ್ದಲಬೊಮ್ಮಯ್ಯನಹಟ್ಟಿ ನಾಗರಾಜ ಹಾಗೂ ಯಾವುದೇ ಸುಳಿವು ಸಿಗದಂತೆ ಶವವನ್ನು ಸುಟ್ಟ ಹೊನ್ನೂರಸ್ವಾಮಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಮಹಾದೇವಿ ದೂರಿನಲ್ಲಿ ತಿಳಿಸಿದ್ದಾರೆ.
ಸಿಪಿಐ ವಸಂತ ವಿ.ಅಸೋದೆ ನೇತೃತ್ವದಲ್ಲಿ ಪಿಎಸ್‌ಐ ಪಾಂಡುರಂಗಪ್ಪ ತನಿಖೆ ಕೈಗೊಂಡಿದ್ದಾರೆ.