

ಶಿರಸಿ: ಜಿಲ್ಲೆಯ ರೈತರಿಗೆ ಸೊಪ್ಪಿನ ಬೆಟ್ಟ ಅಮೂಲ್ಯ ಆಸ್ತಿ. ಬೆಟ್ಟಗಳ ಸಂರಕ್ಷಣೆಗಾಗಿ ಜೂ. 2ರಿಂದ ಜಿಲ್ಲೆಯ ವಿವಿಧೆಡೆ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ವೃಕ್ಷ ಲಕ್ಷ ಆಂದೋಲನದ ಅಧ್ಯಕ್ಷ ಅನಂತ ಆಶೀಸರ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಪಶ್ಚಿಮ ಘಟ್ಟದ ಅರಣ್ಯ ಭಾಗವಾಗಿರುವ ಸೊಪ್ಪಿನ ಬೆಟ್ಟ ರೈತರಿಗೆ ಕೆನರಾ ಪ್ರಿವಿಲೇಜ್ ಆಕ್ಟ್ ಮೂಲಕ ರೈತರಿಗೆ ಬಂದಿದೆ. ಹೀಗಾಗಿ, ರೈತರು ಅಡಕೆ ತೋಟದೊಂದಿಗೆ ಬೆಟ್ಟ ಭೂಮಿಗೂ ತೀರ್ವೆ ತುಂಬುತ್ತಿದ್ದಾರೆ. ಆದರೆ, ರಾಜ್ಯ ಸರ್ಕಾರ ‘ಬ’ ಖರಾಬ ಪಟ್ಟಿಯಲ್ಲಿ ಬೆಟ್ಟ ಭೂಮಿಯನ್ನು ಸೇರಿಸಿದ್ದರಿಂದ ಸಮಸ್ಯೆ ಉಂಟಾಗಿದೆ.
ಬೆಟ್ಟ, ಕಾನು, ಹಾಗೂ ಸೊಪ್ಪಿನ ಮುಫತ್ತು ಮುಂತಾದ ಗ್ರಾಮ ಅರಣ್ಯ ಭೂಮಿಯನ್ನು ಅರಣ್ಯೇತರ ಉದ್ದೇಶಕ್ಕೆ ಬಳಸುವ ಸರ್ಕಾರದ ಹಿಂಬಾಗಿಲ ಯೋಜನೆಗಳೂ ಆಗಾಗ ಮುನ್ನೆಲೆಗೆ ಬರುತ್ತಿವೆ. ಬೆಟ್ಟ, ಕಾನು ಅರಣ್ಯ ನಾಶ ಪ್ರಕರಣಗಳೂ ಜರುಗುತ್ತಿವೆ. ಈ ಹಿನ್ನೆಲೆಯಲ್ಲಿ ಬೆಟ್ಟ ಭೂಮಿಯಲ್ಲಿ ರೈತರಿಗೆ ಇರುವ ಹಕ್ಕುಗಳು, ಅವುಗಳ ಸದ್ಬಳಕೆಗೆ ರೈತರು ವಹಿಸಬೇಕಾದ ಕಾಳಜಿ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಬೇಕಾದ ಅಗತ್ಯತೆ ಇದೆ. ಈ ಹಿನ್ನೆಲೆಯಲ್ಲಿ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಮಾರು 53 ಸಾವಿರ ಹೆಕ್ಟೇರ್ನಷ್ಟು ಬೆಟ್ಟ ಭೂಮಿ ಇದೆ. ಕಂದಾಯ ಇಲಾಖೆ, ಅರಣ್ಯ ಇಲಾಖೆ ಹಾಗೂ ರೈತರ ಜಂಟಿ ಅಧಿಕಾರ ಬೆಟ್ಟದ ಮೇಲಿದ್ದರೂ ಅರಣ್ಯ ಇಲಾಖೆಯ ಜವಾಬ್ದಾರಿಯೇ ಜಾಸ್ತಿ ಇದೆ. ಕಳೆದ 30 ವರ್ಷಗಳಿಂದ ಬೆಟ್ಟ ಅರಣ್ಯ ಉತ್ಪನ್ನದಲ್ಲಿ ರೈತರಿಗೆ ಶೇ. 33ರಷ್ಟು ಆದಾಯ ನೀಡುವ ನಿಯವನ್ನು ರಾಜ್ಯ ಸರ್ಕಾರ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿಸಿದೆ.
ಈಗ ಶೇ. 75ರಷ್ಟು ಬೆಟ್ಟದ ಉತ್ಪನ್ನಗಳನ್ನು ರೈತರಿಗೆ ನೀಡಲು ರಾಜ್ಯ ಸರ್ಕಾರವೂ ಕ್ರಮ ವಹಿಸಿದೆ. ಈ ಎಲ್ಲದರ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ಈ ಅಭಿಯಾನದಲ್ಲಿ ವೃಕ್ಷಾರೋಪಣ, ಜಾಗೃತಿ ಸಭೆಗಳು, ಅರಣ್ಯ ಅಧಿಕಾರಿಗಳೊಂದಿಗೆ ಮಾತುಕತೆ, ಮಾದರಿ ಬೆಟ್ಟ ವೀಕ್ಷಣೆ, ಬೆಟ್ಟದಲ್ಲಿನ ಜೀವ ವೈವಿಧ್ಯ ದಾಖಲಾತಿ, ಗಿಡಮೂಲಿಕೆಗಳ ಪರಿಚಯ, ಬೆಟ್ಟದಲ್ಲಿ ಜಲ ಸಂವರ್ಧನೆ, ಉಪ ಅರಣ್ಯ ಉತ್ಪನ್ನ ಜಾಸ್ತಿ ಮಾಡಲು ಚಿಂತನೆ ನಡೆಸಲಾಗುವುದು ಎಂದರು.
ಜೂ. 2ರಂದು ತಾಲೂಕಿನ ಯಡಳ್ಳಿಯಲ್ಲಿ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನೇತೃತ್ವದಲ್ಲಿ ವೃಕ್ಷಾರೋಪಣ ಬೆಟ್ಟ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಕೆನರಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಸಂತರೆಡ್ಡಿ ಪಾಲ್ಗೊಳ್ಳಲಿದ್ದಾರೆ. ಬೆಟ್ಟ ಸಂರಕ್ಷಣೆಯಲ್ಲಿ ಶ್ರಮಿಸಿದ ಶ್ರೀಧರ ಮಂಜುನಾಥ ಕೆರೆಕೊಪ್ಪ ಅವರನ್ನು ಸನ್ಮಾನಿಸಲಾಗುತ್ತಿದೆ ಎಂದರು.
ಜೂ. 5ರಂದು ತಾಲೂಕಿನ ಭೈರುಂಬೆಯಲ್ಲಿ ಶ್ರೀ ಶಾರದಾಂಬಾ ಶಿಕ್ಷಣ ಸಂಸ್ಥೆಯಲ್ಲಿ ವೃಕ್ಷಾರೋಪಣ ನಡೆಯಲಿದೆ. ಬಳಿಕ ನಡೆಯುವ ಜಾಗೃತಿ ಅಭಿಯಾನದಲ್ಲಿ ಡಿಸಿಎಫ್ ಡಾ. ಅಜ್ಜಯ್ಯ ಜೆ.ಆರ್., ಪೊ›. ದಂಡಿನ ಇತರರು ಪಾಲ್ಗೊಳ್ಳುತ್ತಿದ್ದಾರೆ. ಜೂ. 4ರಂದು ನೆಲೆಮಾವಿನಲ್ಲಿ ಬೆಟ್ಟ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಶ್ರೀ ಮಾಧವಾನಂದ ಭಾರತೀ ಸ್ವಾಮೀಜಿ ಪಾಲ್ಗೊಳ್ಳುತ್ತಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಅಭಿಯಾನದ ಪ್ರಮುಖರಾದ ನಾರಾಯಣ ಹೆಗಡೆ ಗಡಿಕೈ, ಕೇಶವ ಕೊರ್ಸೆ, ಜಿ.ಆರ್. ಹೆಗಡೆ ಬೆಳ್ಳೇಕೇರಿ, ಗಣಪತಿ ಬಿಸಲಕೊಪ್ಪ, ಇತರರಿದ್ದರು.