

ಹೆಬ್ರಿ: ಆಗುಂಬೆ ಘಾಟಿಯ 4 ಮತ್ತು 5ನೇ ತಿರುವಿನಲ್ಲಿ ಶನಿವಾರ ರಾತ್ರಿ ಗುಡ್ಡ ಕುಸಿತವಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಆಗುಂಬೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಜರಿದ ಮಣ್ಣು ಕಲ್ಲು ಹಾಗೂ ಮರ ತೆರವುಗೊಳಿಸುವ ಕಾರ್ಯ ನಡೆಸಿದ್ದಾರೆ. ಘಾಟಿಯಲ್ಲಿ ಗುಡ್ಡ ಕುಸಿತ ನಡೆಯುವುದು ಸಾಮಾನ್ಯ. ಪಶ್ಚಿಮಘಟ್ಟದ ಭಾಗದಲ್ಲಿ ಭಾರಿ ಮಳೆ ಸುರಿಯುತ್ತಿದ್ದು ವಾಹನ ಸವಾರರು ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ. ವಾಹನ ಸಂಚಾರಕ್ಕೆ ಯಾವುದೇ ತೊಡಕಾಗಿಲ್ಲ. ಕೆಲವು ದಿನಗಳ ಹಿಂದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಘನವಾಹನ ಸಂಚರಿಸದಂತೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ. ಹೆದ್ದಾರಿ ಪ್ರಾಧಿಕಾರದವರು ಸ್ಥಳದಲ್ಲಿ ಬೀಡು ಬಿಟ್ಟು ಪರಿಶೀಲನೆ ನಡೆಸುತ್ತಿದ್ದಾರೆ. ಇಲ್ಲಿಯತನಕ ಯಾವುದೇ ಹೆಚ್ಚಿನ ಅಪಾಯ ಕಂಡುಬಂದಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.