ಗುಡ್ಡ ಕುಸಿತ ಪರಿಹಾರ ಮರೀಚಿಕೆ

kadri
Published on

ಮಂಗಳೂರು: ನಗರದ ಸರ್ಕೀಟ್ ಹೌಸ್ ಹಿಂಭಾಗದ ಗುಡ್ಡ ಮಳೆಗಾಲದಲ್ಲಿ ಭಾಗಶಃ ರಸ್ತೆಗೆ ಕುಸಿದು ಬಿದ್ದಿದ್ದು, ಅಪಾಯದ ಸ್ಥಿತಿಯಲ್ಲಿದೆ. ಬೇಸಗೆಯಲ್ಲಿ ಶಾಶ್ವತ ಪರಿಹಾರ ಕಾಮಗಾರಿ ನಡೆಸಿ ಶೀಘ್ರ ಶಾಶ್ವತ ಪರಿಹಾರ ಕಲ್ಪಿಸುವುದಾಗಿ ಜನಪ್ರತಿನಿಧಿಗಳು ಭರವಸೆ ನೀಡಿದ್ದರು. ಆದರೆ ಕಾಮಗಾರಿ ಇನ್ನೂ ಆರಂಭಗೊಂಡಿಲ್ಲ.

ಸರ್ಕಿಟ್ ಹೌಸ್‌ನಿಂದ ಬಿಜೈ ಕಡೆಗೆ ಹೋಗುವ ಎಡಭಾಗದ ಗುಡ್ಡದ ಮಣ್ಣು ವರ್ಷದಿಂದ ವರ್ಷಕ್ಕೆ ಶಿಥಿಲವಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ಮಳೆಗಾಲದಲ್ಲಿ ಮಣ್ಣು ಕುಸಿದು ರಸ್ತೆಗೆ ಬೀಳುತ್ತಿದೆ. ಈ ಹಿಂದೆ ಮಣ್ಣು ಕುಸಿತವಾದ ಸ್ಥಳದಲ್ಲಿ ಮರಳು ಚೀಲ ಅಳವಡಿಸಿ ತಾತ್ಕಾಲಿಕ ಪರಿಹಾರ ಮಾಡಲಾಗಿದೆ. ಈ ವರ್ಷ ಮತ್ತೆ ಕುಸಿತವಾಗಿದೆ. ನಿರಂತರ ಮಳೆಯಾಗುವ ಸಂದರ್ಭ ರಸ್ತೆಯಲ್ಲಿ ಸಂಚರಿಸುವುದು ಅಪಾಯಕಾರಿ.

ರಸ್ತೆಯ ಮೇಲ್ಭಾಗದಲ್ಲಿ ಸರ್ಕೀಟ್ ಹೌಸ್ ಕಟ್ಟಡ ಹಾಗೂ ಆವರಣ ಗೋಡೆ ಇದೆ. ಪ್ರತಿ ದಿನ ಬೆಳಗ್ಗೆಯಿಂದ ರಾತ್ರಿ ತನಕ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತವೆ. ಗುಡ್ಡದ ಮಣ್ಣು ಕುಸಿದರೆ ಒಂದು ಭಾಗದ ರಸ್ತೆ ಮುಚ್ಚಿ ಹೋಗುವ ಸಾಧ್ಯತೆ ಇದೆ. ಈ ಸಂದರ್ಭ ವಾಹನಗಳು ಅದರಡಿ ಸಿಲುಕಿದರೆ ಅಪಾಯ ಎದುರಾಗಲಿದೆ. ಬೇಸಗೆ ಕಾಲದಲ್ಲಿ ಕಾಮಗಾರಿ ನಡೆಸಬೇಕಾಗಿದೆ. ಇನ್ನೊಂದು ಮಳೆಗಾಲ ಆರಂಭಗೊಂಡರೆ ಮಣ್ಣು ಇನ್ನಷ್ಟು ಕುಸಿತವಾಗುವ ಭೀತಿ ಇದೆ.

ಸಾಲ್ ನೆಯ್ಲಿಂಗ್ ಪರಿಹಾರ: ಬೇಸಿಗೆಯಲ್ಲಿ ಸಾಲ್ ನೆಯ್ಲಿಂಗ್ ತಂತ್ರಜ್ಞಾನ ಅಳವಡಿಕೆಯೊಂದೇ ಇದಕ್ಕೆ ಶಾಶ್ವತ ಪರಿಹಾರ. ಈ ತಂತ್ರಜ್ಞಾನದ ಮೂಲಕ ಮಣ್ಣು ಕುಸಿಯದಂತೆ ತಡೆಗಟ್ಟಬಹುದಾಗಿದೆ. ಕುಲಶೇಖರ ಬಳಿ ಪಡೀಲ್ ಕಡೆಗೆ ಹೋಗುವ ಮರೋಳಿಯಲ್ಲಿ ರಸ್ತೆ ಬದಿ ಹಾಗೂ ನ್ಯಾಯಾಲಯಕ್ಕೆ ಹೋಗುವ ಕಾಂಕ್ರೀಟ್ ರಸ್ತೆ ಬದಿ ಈ ತಂತ್ರಜ್ಞಾನ ಅಳವಡಿಸಿ ಮಣ್ಣು ಕುಸಿಯದಂತೆ ಮಾಡಲಾಗಿದೆ. ಅದೇ ಮಾದರಿಯಲ್ಲಿ ಸರ್ಕೀಟ್ ಹೌಸ್ ಬಳಿಯೂ ಸಾಲ್ ನೆಯ್ಲಿಂಗ್ ಮಾಡುವುದರಿಂದ ಗುಡ್ಡ ಕುಸಿತಕ್ಕೆ ತಡೆ ನೀಡಬಹುದು.

ಕದ್ರಿ ಸರ್ಕಿಟ್ ಹೌಸ್ ಬಳಿಯ ಗುಡ್ಡ ಕುಸಿತಕ್ಕೆ ಶೀಘ್ರ ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಮಹಾನಗರಪಾಲಿಕೆಯಲ್ಲಿ ಪ್ರೀಮಿಯರ್ ಎಫ್‌ಎಆರ್‌ನಲ್ಲಿ ಅನುದಾನ ಮೀಸಲಿಡುವಂತೆ ತಿಳಿಸಿದ್ದೇನೆ. ಶೀಘ್ರ ಟೆಂಡರ್ ಕರೆದು ಕಾಮಗಾರಿ ನಡೆಸುವಂತೆ ಇತ್ತೀಚೆಗೆ ನಡೆದ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಮತ್ತೊಮ್ಮೆ ಅಧಿಕಾರಿಗಳ ಸಭೆ ಕರೆದು ಈ ಬಗ್ಗೆ ಫಾಲೋಅಪ್ ಮಾಡಲಾಗುವುದು.

- ವೇದವ್ಯಾಸ ಕಾಮತ್, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net