ಪಾದಯಾತ್ರೆಗೆ ಹರಿದುಬಂದ ಭಕ್ತ ಸಾಗರ

04 DEVDURGA 04
ಲೋಕಕಲ್ಯಾಣಾರ್ಥವಾಗಿ ಗಬ್ಬೂರು ಸಮೀಪದ ಸುಲ್ತಾನಪುರ ಶ್ರೀಶಂಭುಸೋಮನಾಥ ಶಿವಾಚಾರ್ಯ ಸ್ವಾಮೀಜಿ ಭಕ್ತರೊಂದಿಗೆ ಸದ್ಭಾವನಾ ಪಾದಯಾತ್ರೆ ಕೈಗೊಂಡರು. ಶ್ರೀಮಠದ ಆಡಳಿತಾಧಿಕಾರಿ ಶ್ರೀಪಂಚಯ್ಯಸ್ವಾಮಿ, ಶ್ರೀಬೂದಯ್ಯಸ್ವಾಮಿ, ಚನ್ನಬಸಯ್ಯಸ್ವಾಮಿ, ಬೂದಿಬಸವ, ವೀರಯ್ಯಸ್ವಾಮಿ ಇತರರಿದ್ದರು.
Published on

ದೇವದುರ್ಗ: ಗಬ್ಬೂರು ಸಮೀಪದ ಸುಲ್ತಾನಪುರ ಶ್ರೀ ಪಂಚಾಕ್ಷರಿ ಬೃಹನ್ಮಠದ ಶ್ರೀಶಂಭು ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಲೋಕ ಕಲ್ಯಾಣಾರ್ಥವಾಗಿ ಬುಧವಾರ ಕೈಗೊಂಡ ಸದ್ಭಾವನಾ ಪಾದಯಾತ್ರೆಗೆ ಸಾವಿರಾರು ಭಕ್ತರು ಹೆಜ್ಜೆಹಾಕುವ ಮೂಲಕ ಯಶಸ್ವಿಗೊಳಿಸಿದರು.

ಶ್ರೀ ಮಠದಲ್ಲಿ ಬೆಳಗ್ಗೆ ಶ್ರೀ ಶಂಭುಸೋಮನಾಥ ಶಿವಾಚಾರ್ಯ ಸ್ವಾಮೀಜಿ ತ್ರಿಕಾಲ ಇಷ್ಟಲಿಂಗ ಪೂಜೆ ಅನುಷ್ಠಾನ ಕೈಗೊಂಡು ಸುಲ್ತಾನಪುರದಿಂದ ಗಬ್ಬೂರುವರೆಗೆ 9ನೇ ವರ್ಷದ ಪಾದಯಾತ್ರೆ ಕೈಗೊಂಡರು.

ಮಹಿಳೆಯರ ಕುಂಭ ಕಳಸ, ಪಲ್ಲಕ್ಕಿ ಮೆರವಣಿಗೆ, ಭಾಜ ಭಜಂತ್ರಿ, ಭಜನಾ ತಂಡ ಭಾಗವಹಿಸಿ ಭಕ್ತಿಭಾವ ಮೆರೆದರು. ಮೆರವಣಿಗೆ ಉದ್ದಕ್ಕೂ ಮಹಿಳೆಯರು, ಮಕ್ಕಳು ಸೇರಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
ಮಧ್ಯಾಹ್ನ ಶ್ರೀಬಿಬ್ಬಿ ಬಾಚರಸ ಕರ್ತೃ ಗದ್ದುವರೆಗೆ ತೆರಳಿ, ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಕೈಗೊಂಡು ವಿಶೇಷ ಪೂಜೆ ಸಲ್ಲಿಸಿದರು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು. ಸಂಜೆ ಮರಳಿ ಶ್ರೀಮಠಕ್ಕೆ ಆಗಮಿಸಿದರು.

ಪ್ರತಿವರ್ಷ ಶ್ರಾವಣದ ನಂತರ ಸ್ವಾಮೀಜಿಗಳು ಲೋಕ ಕಲ್ಯಾಣಾರ್ಥವಾಗಿ ಪಾದಯತ್ರೆ ಕೈಗೊಳ್ಳುವುದು ವಾಡಿಕೆ. ಇದರಿಂದ ಸಕಾಲಕ್ಕೆ ಮಳೆ, ಬೆಳೆ ಉತ್ತಮವಾಗಿ ಬರಲಿವೆ. ಸಮಾಜದಲ್ಲಿ ಶಾಂತಿ ನೆಲೆಸಲಿದೆ ಎನ್ನುವುದು ಭಕ್ತರ ನಂಬಿಕೆಯಾಗಿದೆ. ಹೀಗಾಗಿ ಶ್ರೀಗಳ ಜತೆ ಭಕ್ತರು ಪಾದಯಾತ್ರೆ ಕೈಗೊಂಡು ಗಮನ ಸೆಳೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net