ಹುಬ್ಬಳ್ಳಿ ಹೈದನಿಂದ ಬೆಟ್ಟಕ್ಕೆ ಪಾದಯಾತ್ರೆ!

02 HANUR 2
ಜನರಿಗೆ ದೇವರು ಒಳಿತನ್ನು ಕರುಣಿಸಲೆಂದು ಹರಕೆ ಹೊತ್ತು ಮಲೆಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ತೆರಳುತ್ತಿರುವ ಹುಬ್ಬಳ್ಳಿ ಹೈದ.
Published on

ಹನೂರು: ಪಾಪ ಕರ್ಮಗಳು ದೂರವಾಗಿ ಜನರಿಗೆ ದೇವರು ಒಳಿತು ಮಾಡಲಿ ಎಂದು ಹರಕೆ ಹೊತ್ತ ಹುಬ್ಬಳ್ಳಿ ಹೈದನೊಬ್ಬ ಶುಕ್ರವಾರ ಹನೂರು ಮಾರ್ಗವಾಗಿ ಕಾಲ್ನಡಿಗೆ ಮೂಲಕ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳಿದರು.

ಹುಬ್ಬಳ್ಳಿಯ ಶಾರದಾ ಮತ್ತು ವೆಂಕಟರಮಣ ದಂಪತಿ ಪುತ್ರ ಸತೀಶ್ (33) ಹರಕೆ ಹೊತ್ತು ಸಾಗಿದ ಯುವಕ. ಹನೂರಿನ ಮಾರ್ಗಮಧ್ಯೆ ಶುಕ್ರವಾರ ರಾಷ್ಟ್ರಧ್ವಜ ಹಾಗೂ ಹಿಂದು ಧರ್ಮದ ಕೇಸರಿ ಬಾವುಟ ಹೊತ್ತು ಸಾಗುತ್ತಿದ್ದ ಇವರನ್ನು ವಿಜಯವಾಣಿ ಸಂಪರ್ಕಿಸಿದಾಗ, ಜನರು ದೇವರ ವಿಚಾರದಲ್ಲಿ ತಪ್ಪು ಮಾಡುತ್ತಿದ್ದಾರೆ. ಪಾಪ ಕರ್ಮ ಎಸಗುತ್ತಿದ್ದಾರೆ. ಇದರಿಂದ ಸಮಾಜದಲ್ಲಿ ಸನ್ನಡತೆ ಕ್ಷೀಣಿಸುತ್ತಿದೆ. ಇದರಿಂದ ಬೇಸತ್ತು ದೇಗುಲಗಳಿಗೆ ಭೇಟಿ ನೀಡಿ ಜನರಿಗೆ ದೇವರು ಒಳಿತನ್ನು ಕರುಣಿಸಲೆಂದು ಪ್ರಾರ್ಥಿಸುವ ಸಲುವಾಗಿ ರಾಷ್ಟ್ರ ಹಾಗೂ ಹಿಂದು ಧರ್ಮದ ಧ್ವಜವನ್ನು ಹೊತ್ತು ಪಾದಯಾತ್ರೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

2024 ರ ನ.28ರಂದು ಹುಬ್ಬಳ್ಳಿಯಿಂದ ಪಾದಯಾತ್ರೆ ಆರಂಭಿಸಲಾಗಿದೆ. ಶೃಂಗೇರಿ, ಕುಕ್ಕೆ ಸುಬ್ರಹ್ಮಣ್ಯ, ಹೊರನಾಡು, ಕಟೀಲು, ಧರ್ಮಸ್ಥಳ ಹಾಗೂ ಮಾರ್ಗದಲ್ಲಿ ಸಿಗುವ ಪ್ರಸಿದ್ಧ ದೇಗುಲಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ ಪ್ರಾರ್ಥಿಸಲಾಗಿದೆ. ಅಲ್ಲಲ್ಲಿ ವಾಸ್ತವ್ಯ ಹೂಡುತ್ತ ಪಾದಯಾತ್ರೆಯನ್ನು ಮುಂದುವರಿಸಿದ್ದು, ಮೇ 3 ರಂದು ಮ.ಬೆಟ್ಟದ ಮಾದಪ್ಪನ ಸನ್ನಿಧಿಗೆ ತೆರಳಿ ಪೂಜೆ ಸಲ್ಲಿಸಿ ಗ್ರಾಮಕ್ಕೆ ಹಿಂದಿರುಗಲಾಗುವುದು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net