ಹನೂರು ಅಭಿವೃದ್ಧಿಗೆ ಆಗ್ರಹಿಸಿ ಮ.ಬೆಟ್ಟಕ್ಕೆ ಪಾದಯಾತ್ರೆ

19 HANUR 5
Published on

ಹನೂರು: ತಾಲೂಕಿನ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವಂತೆ ಮನವಿ ಸಲ್ಲಿಸುವ ಸಲುವಾಗಿ ಏ.23ರಂದು ರಾಮಾಪುರದಿಂದ ಸಚಿವ ಸಂಪುಟ ಸಭೆ ನಡೆಯುವ ಮಲೆ ಮಹದೇಶ್ವರ ಬೆಟ್ಟಕ್ಕೆ ಸಂಘಟನೆ ವತಿಯಿಂದ ಹರಕೆ ಹೊತ್ತು ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಗೌಡೇಗೌಡ ಹೇಳಿದರು.

ಮಾದಪ್ಪನ ಭಕ್ತರು ಹರಕೆ ಹೊರುವ ರೀತಿಯಲ್ಲೇ ಸಂಘಟನೆಯಿಂದ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದ್ದು, ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಮನವಿಯನ್ನು ಸಲ್ಲಿಸಲಾಗುವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹನೂರು ತಾಲೂಕು ರಚನೆಯಾಗಿ 6 ವರ್ಷವೇ ಕಳೆದಿದೆ. ಇದೀಗ ಬಜೆಟ್‌ನಲ್ಲಿ ಪ್ರಜಾಸೌಧ ನಿರ್ಮಾಣ, ಆಸ್ಪತ್ರೆ ಮೇಲ್ದರ್ಜೆಗೆ, ಪಾಲಾರ್ ರಸ್ತೆ ಅಭಿವೃದ್ಧಿಯನ್ನು ಘೋಷಿಸಲಾಗಿದೆ. ಆದರೆ ತಾಲೂಕಿನಲ್ಲಿ ಇನ್ನೂ ಹಲವು ಸಮಸ್ಯೆಗಳಿದ್ದು, ಅಭಿವೃದ್ಧಿ ಕೆಲಸಗಳು ಆಗಬೇಕಿದೆ. ತಾಲೂಕಿನಲ್ಲಿ 12 ಪಶು ಆಸ್ಪತ್ರೆಗಳಿದ್ದು, ಒಬ್ಬರೇ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗಾಗಿ ಆಸ್ಪತ್ರೆಗಳಿಗೆ ವೈದ್ಯರ ನೇಮಕವಾಗಬೇಕು. ಉಡುತೊರೆ, ಕೀರೆಪಾತಿ ಹಾಗೂ ಮಿನ್ನತ್ತುಹಳ್ಳ ಜಲಾಶಯಕ್ಕೆ ಕಾವೇರಿ ನದಿಯಿಂದ ನೀರು ತುಂಬಿಸಿ ಏತ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸಬೇಕು. ನ್ಯಾಯಾಲಯ, ಬಸ್ ಡಿಪೋ ಸ್ಥಾಪನೆಯಾಗಬೇಕು. ಹದಗೆಟ್ಟಿರುವ ರಸ್ತೆಗಳು ಅಭಿವೃದ್ಧಿಯಾಗಬೇಕು. ಅರಣ್ಯ ಪ್ರದೇಶದ ಅಂಚಿನಲ್ಲಿ ರೈಲ್ವೆ ಬ್ಯಾರಿಕೇಡ್ ಅಳವಡಿಸಬೇಕು. ಕೂಡಲೂರಿನಲ್ಲಿ ಪದವಿ ಪೂರ್ವ ಕಾಲೇಜು ತೆರೆಯಬೇಕು. ಸರ್ಕಾರಿ ಶಾಲೆಗಳಲ್ಲಿರುವ ಶಿಕ್ಷಕರ ಕೊರತೆಯನ್ನು ನೀಗಿಸುವುದು ಸೇರಿದಂತೆ ಇನ್ನು ಕೆಲವು ಅಗತ್ಯ ಮೂಲಸೌಕರ್ಯ ಒದಗಿಸುವಿಕೆ ಹಾಗೂ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.

ತಾಲೂಕು ಅಧ್ಯಕ್ಷ ಅಮ್ಜಾದ್‌ಖಾನ್ ಮಾತನಾಡಿ, ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಪಾರಂಪರಿಕ ಅರಣ್ಯ ವಾಸಿಗಳಿಗೆ ಸಮರ್ಪಕ ರಸ್ತೆ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಅಗತ್ಯ ಮೂಲಸೌಕರ್ಯ ಒದಗಿಸುವಂತೆ ಕೇಂದ್ರ ಸರ್ಕಾರ 2012ರಲ್ಲೇ ಆದೇಶಿಸಿದೆ. ಆದರೆ ಈ ಕೆಲಸ ಕಾರ್ಯಗತವಾಗಿಲ್ಲ ಎಂದು ಆರೋಪಿಸಿದರು.

ಸಂಘದ ಗೌರವಾಧ್ಯಕ್ಷ ರಾಜಣ್ಣ, ಉಪಾಧ್ಯಕ್ಷ ಪಳನಿಸ್ವಾಮಿ, ಕಾರ್ಯದರ್ಶಿ ಬಸವರಾಜು, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ರಾಜಮಣಿ, ಕಾರ್ಯದರ್ಶಿ ಪೂಂಗುಡಿ, ಪದಾಧಿಕಾರಿಗಳಾದ ಶಿವಣ್ಣ, ವೆಂಕಟಾಚಲ, ನಾಗರಾಜು, ಮುತ್ತಣ್ಣ, ಪಳನಿಶೆಟ್ಟಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net