ಜಿಗಿತ ಕಂಡ ಈರುಳ್ಳಿ ದರ

Onion
Published on

ಮಂಗಳೂರು: ಕರಾವಳಿಯಲ್ಲಿ ವಾರದ ಹಿಂದೆ 40 ರೂ.ಇದ್ದ ಈರುಳ್ಳಿ ದರ ಕೆ.ಜಿ.ಯೊಂದರ ದರ 75 ರೂ.ಗೆ ಏರಿದೆ. ಉತ್ತರ ಕರ್ನಾಟಕದಲ್ಲಿ ಉಂಟಾದ ಅತಿವೃಷ್ಟಿಯಿಂದ ಈರುಳ್ಳಿ ಪೂರೈಕೆ ಕಡಿಮೆಯಾಗಿದೆ. ಇದರಿಂದಾಗಿ ಮಾರುಕಟ್ಟೆ ದರ ದಿಢೀರ್ ಏರಿಕೆಯಾಗಿದೆ. ಮಂಗಳೂರು ಎಪಿಎಂಸಿಯಲ್ಲಿ ಸಣ್ಣ ಈರುಳ್ಳಿ ಬೆಲೆ 60 ರೂ.ನಿಂದ ಆರಂಭಗೊಂಡು ದೊಡ್ಡ ಈರುಳ್ಳಿ ದರ 85 ರೂ.ವರೆಗೆ ಏರಿಕೆಯಾಗಿದೆ. ಇನ್ನೆರಡು ದಿನಗಳಲ್ಲಿ ಇದು 100ರ ಗಡಿ ದಾಟಲಿದೆ ಎನ್ನುವುದು ಮಾರುಕಟ್ಟೆಯ ತಜ್ಞರ ಅಭಿಮತ.

ಕರ್ನಾಟಕ, ಮಹಾರಾಷ್ಟ್ರ ಮತ್ತಿತರ ಭಾಗಗಳಲ್ಲಿ ಸೆಪ್ಟಂಬರ್ ಕೊನೆಯ ವಾರ ಹಾಗೂ ಅಕ್ಟೋಬರ್ ಆರಂಭದಲ್ಲಿ ಹೆಚ್ಚು ಮಳೆ ಸುರಿದಿದೆ. ಈರುಳ್ಳಿ ಕೊಯ್ಲಿಗೆ ಸಿದ್ಧಗೊಳ್ಳುತ್ತಿದ್ದ ವೇಳೆ ಉಂಟಾದ ಅತಿವೃಷ್ಟಿಯಿಂದ ಫಸಲು ಹಾಳಾಗಿದೆ. ಎಕರೆಗೆ ಸರಾಸರಿ 250 ಚೀಲದಷ್ಟು ಸಿಗುತ್ತಿದ್ದ ಈರುಳ್ಳಿ ಪ್ರಮಾಣ 70 ಚೀಲಗಳಿಗೆ ಇಳಿಕೆಯಾಗಿದೆ. ಮಾರುಕಟ್ಟೆಗೆ ಬೇಡಿಕೆಗೆ ತಕ್ಕಂತೆ ಪೂರೈಕೆಯಿಲ್ಲದಿರುವುದೇ ಬೆಲೆ ಏರಿಕೆಗೆ ಮೂಲ ಕಾರಣ ಎಂದು ಈರುಳ್ಳಿ ವ್ಯಾಪಾರಸ್ಥರು ತಿಳಿಸಿದ್ದಾರೆ.

ನಗರದ ಹಲೆವೆಡೆ 70-85 ರೂ.ವರೆಗೆ ಮಾರಾಟ ಮಾಡುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಈರುಳ್ಳಿ ದರ 100 ರೂ.ದಾಟಿ 150ಕ್ಕೆ ಜಿಗಿಯಲಿದೆ. ಪುಣೆ, ಬೆಳಗಾವಿ, ಹುಬ್ಬಳ್ಳಿಯಿಂದ ಈರುಳ್ಳಿ ಸರಬರಾಜಾಗುತ್ತಿತ್ತು. ಸದ್ಯ ಅತಿವೃಷ್ಟಿಯಿಂದ ಆಮದಾಗುತ್ತಿಲ್ಲ ಎಂದು ಎಪಿಎಂಸಿ ವರ್ತಕರು ತಿಳಿಸಿದ್ದಾರೆ.

ಕಳಪೆ ಈರುಳ್ಳಿಗೂ ಬೇಡಿಕೆ: ರಾಜ್ಯದಲ್ಲಿ ಬೆಳೆಯುವ ಈರುಳ್ಳಿ ಅಕ್ಟೋಬರ್-ನವೆಂಬರ್ ತಿಂಗಳಿಗೆ ಮಾರುಕಟ್ಟೆಗೆ ಬರುತ್ತದೆ. ಆದರೆ, ಈ ಬಾರಿ ವಿಪರೀತ ಮಳೆ ಸುರಿದಿದ್ದರಿಂದ ಫಸಲಿಗೆ ಹಾನಿಯಾಗಿ ಉತ್ಪಾದನೆ ಕಡಿಮೆಯಾಗಿದೆ. ಮಂಗಳೂರು ಎಪಿಎಂಸಿ, ವಿವಿಧ ಮಾರುಕಟ್ಟೆಗಳಲ್ಲಿ ಕಳಪೆ ಗುಣಮಟ್ಟದ ಈರುಳ್ಳಿಗೂ ಬೇಡಿಕೆ ಇದೆ. ಉತ್ತಮ ಈರುಳ್ಳಿ 80 ರಿಂದ 85 ರೂ.ವರೆಗೆ ಭರ್ಜರಿಯಾಗಿ ಮಾರಾಟವಾಗುತ್ತಿದ್ದರೆ, ಮಧ್ಯಮ ವರ್ಗದ ಗ್ರಾಹಕರು ಕಳಪೆ ಈರುಳ್ಳಿ ಖರೀದಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net