

ಪಡುಬಿದ್ರಿ: ಪ್ರತ್ಯೇಕ ಉದ್ದೇಶಗಳನ್ನು ಇಟ್ಟುಕೊಂಡು ಕೇರಳದಿಂದ ಲಡಾಖ್‌ಗೆ ಪಾದಯಾತ್ರೆ ಕೈಗೊಂಡಿರುವ ಅರುಣ್, ವಸೀಂ ಆಲಿ, ಗಫಾರ್ ಹಾಗೂ ಶಿಯಾಬ್ ಶನಿವಾರ ಉಡುಪಿ ಜಿಲ್ಲೆ ತಲುಪಿದ್ದಾರೆ.
ಕೇರಳದ ತ್ರಿಶೂರು ಮುಳ್ಳಚೇರಿಯಲ್ಲಿ ನಡೆದ ಯುವತಿಯೊಬ್ಬಳ ಹತ್ಯೆಯನ್ನು ಖಂಡಿಸಿ ಗ್ಯಾರೇಜ್ ವೃತ್ತಿ ಮಾಡುತ್ತಿರುವ ಅರುಣ್ ನ್ಯಾಯ ಕೋರಿ ಜುಲೈ 1ರಂದು ಕೇರಳದಿಂದ ಲಡಾಖ್‌ವರೆಗೆ ಪಾದಯಾತ್ರೆ ಪ್ರಾರಂಭಿಸಿದ್ದರು. ಇದೇ ಸಂದರ್ಭದಲ್ಲಿ ಆರೋಗ್ಯ ಸಂರಕ್ಷಣೆ ಕುರಿತು ಸಮಾಜಕ್ಕೆ ಸಂದೇಶವಾಗಿ ತ್ರಿಶೂರ್‌ನಿಂದ ವಸೀಂ ಅಲಿ ಹಾಗೂ ಅವರ ಸಂಬಂಧಿ ಎರ್ನಾಕುಲಂನಿಂದ ಗಫಾರ್ ಮತ್ತು ಮಲಪ್ಪುರಂನಿಂದ ಶಿಯಾಬ್ ಪಾದಯಾತ್ರೆ ಆರಂಭಿಸಿದ್ದರು.
ಒಬ್ಬರಿಗೊಬ್ಬರು ಪರಿಚಯವಿಲ್ಲದ ವಿವಿಧೆಡೆಯಿಂದ ಪಾದಯಾತ್ರೆ ಕೈಗೊಂಡಿದ್ದ ನಾಲ್ವರು ಕಾಕತಾಳೀಯ ಎಂಬಂತೆ ಗುರುವಾಯೂರಿನ ದಾರಿ ಮಧ್ಯೆ ಒಂದುಗೂಡಿ ಪರಸ್ಪರ ಪರಿಚಯಿಸಿಕೊಳ್ಳುತ್ತಾರೆ. ವಿಚಾರ ಮತ್ತು ಧರ್ಮ ಬೇರೆ ಬೇರೆಯಾದರೂ ಸದುದ್ದೇಶ ಹೊಂದಿದ್ದ ಅವರೆಲ್ಲರೂ ಅಲ್ಲಿಂದ ಸಂಘಟಿತರಾಗಿ ಯಾತ್ರೆ ಮುಂದುವರಿಸಿರುವುದಾಗಿ ಶನಿವಾರ ಉಡುಪಿ ಜಿಲ್ಲೆಗೆ ಪ್ರವೇಶಿಸಿದ ವೇಳೆ ಮಾಧ್ಯಮದವರೊಂದಿಗೆ ವಿಚಾರ ಹಂಚಿಕೊಂಡರು.
ದಿನಕ್ಕೆ 35 ಕಿ.ಮೀ.ನಂತೆ ನಾಲ್ಕು ತಿಂಗಳ ಅವಧಿಯಲ್ಲಿ ಗೋವಾ, ಮಹಾರಾಷ್ಟ್ರ, ಪಂಜಾಬ್, ಕಾಶ್ಮೀರ ಸೇರಿದಂತೆ 3,500 ಕಿ.ಮೀ. ಸಾಗಿ ಲಡಾಖ್ ಸೇರಲಿರುವುದಾಗಿ ವಿವರಿಸಿದ ಅವರು, ರಾತ್ರಿ ವೇಳೆ ಪೆಟ್ರೋಲ್ ಬಂಕ್‌ಗಳಲ್ಲಿ ವಿಶ್ರಾಂತಿ ಪಡೆಯುವುದಾಗಿ ತಿಳಿಸಿದ್ದಾರೆ. ಯಾತ್ರೆಯಲ್ಲಿ ಬೇಕಾಗುವ ಅಗತ್ಯ ವಸ್ತುಗಳನ್ನು ಇರಿಸಿಕೊಂಡಿದ್ದು, ಅಲ್ಲಲ್ಲಿ ಪೊಲೀಸರು ಮತ್ತು ಸ್ಥಳೀಯರ ಸಹಾಯ ಪಡೆದು ಮುಂದೆ ಸಾಗುತ್ತಿದ್ದಾರೆ. ಲಡಾಖ್ ತಲುಪಿದ ಮೇಲೆ ವಿಮಾನ ಅಥವಾ ರೈಲು ಮೂಲಕ ಕೇರಳಕ್ಕೆ ಹಿಂತಿರುಗುವುದಾಗಿ ತಿಳಿಸಿದ್ದಾರೆ.