

ಕುಂದಾಪುರ: ಹಿಜಾಬ್ ಹಾಗೂ ಕೇಸರಿ ಶಾಲು ಧರಿಸಿ ವಿದ್ಯಾರ್ಥಿಗಳು ತರಗತಿಗೆ ಹಾಜರಾದ ಪ್ರಕರಣಕ್ಕೆ ಸಂಬಂಧಿಸಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ನೇತೃತ್ವದಲ್ಲಿ ಬುಧವಾರ ನಡೆದ ಮುಸ್ಲೀಂ ವಿದ್ಯಾರ್ಥಿನಿಯರ ಪಾಲಕರ ಸಭೆ ವಿಫಲಗೊಂಡಿದೆ.
ಉಡುಪಿ ಸರ್ಕಾರಿ ಕಾಲೇಜಲ್ಲಿ ಕಾಣಿಸಿಕೊಂಡಿದ್ದ ಈ ವಿವಾದ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿ ಹೈಕೋರ್ಟ್ ಮೆಟ್ಟಿಲೇರಿದ ಬೆನ್ನಲ್ಲಿಯೇ ಕುಂದಾಪುರ ಸರ್ಕಾರಿ ಜೂನಿಯರ್ ಕಾಲೇಜಿನಲ್ಲೂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿಗೆ ಹಾಜರಾದ ಪ್ರಕರಣ ಬೆಳಕಿಗೆ ಬಂದಿದೆ.
ಕುಂದಾಪುರ ಜೂನಿಯರ್ ಕಾಲೇಜಿನ 28 ವಿದ್ಯಾರ್ಥಿನಿಯರು ಸ್ಕಾರ್ಫ್ ಧರಿಸಿ ತರಗತಿಗೆ ಹಾಜರಾಗುತ್ತಿದ್ದರು. ಇದನ್ನು ವಿರೋಧಿಸಿ 100ಕ್ಕೂ ಅಧಿಕ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜಿಗೆ ಆಗಮಿಸಿದ್ದರು. ಪರಿಸ್ಥಿತಿ ವಿಕೋಪಕ್ಕೆ ತೆರಳುವ ಲಕ್ಷಣಗಳು ಕಂಡು ಬರುತ್ತಿದ್ದಂತೆ ಮಧ್ಯಪ್ರವೇಶಿಸಿದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಬುಧವಾರ ಕಾಲೇಜಿಗೆ ತೆರಳಿ ಮುಸ್ಲಿಂ ವಿದ್ಯಾರ್ಥಿನಿಯರ ಪಾಲಕರ ಜತೆ ಮಾತುಕತೆ ನಡೆಸಿದರು.
ಆದರೆ ಹಿಜಾಬ್ ಧರಿಸುವುದು ನಮ್ಮ ಸಂಪ್ರದಾಯ. ಅದನ್ನು ಬಿಡುವ ಮಾತೇ ಇಲ್ಲ ಎಂದು ವಿದ್ಯಾರ್ಥಿನಿಯರ ಪಾಲಕರು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಒಂದೂವರೆ ತಾಸು ಕಾಲ ನಡೆದ ಸಂಧಾನ ಮಾತುಕತೆ ವಿಫಲಗೊಂಡಿದೆ.
ವಸ್ತ್ರ ಸಂಹಿತೆ ಕಡ್ಡಾಯ
ಸಮವಸ್ತ್ರ ಹೊರತಾಗಿ ಬೇರೆ ಬಟ್ಟೆ ಧರಿಸಿ ತರಗತಿಗೆ ಹಾಜರಾಗಲು ಅವಕಾಶ ಇಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಇತ್ತೀಚೆಗೆ ಸ್ಪಷ್ಟ ಪಡಿಸಿದ್ದರು. ಅದರಂತೆ ಸಮವಸ್ತ್ರದ ಹೊರತಾಗಿ ಇತರ ವಸ್ತ್ರ ಧರಿಸಿ ಬಂದರೆ ಕಾಲೇಜು ಆವರಣದೊಳಗೆ ಪ್ರವೇಶ ಇಲ್ಲ. ಈ ಬಗ್ಗೆ ಪೊಲೀಸರಿಗೂ ಸೂಚನೆ ನೀಡಲಾಗಿದೆ ಎಂದು ಕಾಲೇಜು ಆಡಳಿತ ಮಂಡಳಿ ತಿಳಿಸಿದೆ.