ಹೆದ್ದಾರಿ ಕಾಮಗಾರಿ ವಾರದಲ್ಲಿ ಆರಂಭಿಸಿ

13M.D.R.1
ಮದ್ದೂರು ತಾಲೂಕಿನ ಅಗರಲಿಂಗನದೊಡ್ಡಿ ಬಳಿಯಿರುವ ಸರ್ವೀಸ್ ರಸ್ತೆಯಲ್ಲಿರುವ ಸಮಸ್ಯೆಗಳನ್ನು ಶಾಸಕ ಕೆ.ಎಂ.ಉದಯ್ ಹಾಗೂ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಚಲುವರಾಜು, ಅರುಣ್, ವಾಬ್ಲೆ ಇದ್ದರು. 
Published on

ಮದ್ದೂರು: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪೂರ್ಣವಾಗಿರುವ ಕಾಮಗಾರಿಗಳನ್ನು ಒಂದು ವಾರದೊಳಗೆ ಪ್ರಾರಂಭ ಮಾಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಶಾಸಕ ಕೆ.ಎಂ.ಉದಯ್ ಸೂಚನೆ ನೀಡಿದರು.

ತಾಲೂಕಿನ ನಿಡಘಟ್ಟ ಗ್ರಾಮದಿಂದ ಮದ್ದೂರು ನಗರದ ಪ್ರವಾಸಿ ಮಂದಿರದವರೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ತಹಸೀಲ್ದಾರ್, ಭೂಸ್ವಾಧೀನ ಅಧಿಕಾರಿಗಳು, ಇಂಜಿನಿಯರ್, ಗುತ್ತಿಗೆದಾರರು ಸೇರಿದಂತೆ ಕಾಮಗಾರಿಗೆ ಸಂಬಂಧಿಸಿದ ಎಲ್ಲ ಇಲಾಖೆ ಅಧಿಕಾರಿಗಳ ಜತೆಗೂಡಿ ಅಪೂರ್ಣ ಕಾಮಗಾರಿಯನ್ನು ಪರಿಶೀಲನೆ ನಡೆಸಿ ಸ್ಥಳೀಯ ನಿವಾಸಿಗಳಿಂದ ಮಾಹಿತಿ ಪಡೆದುಕೊಂಡು ನಿರ್ದೇಶನ ನೀಡಿದರು.

ಹೆದ್ದಾರಿ ಮತ್ತು ಸರ್ವೀಸ್ ರಸ್ತೆಗಳ ಬಾಕಿಯಿರುವ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲು, ಹಾಗೆಯೇ ಭೂಸ್ವಾಧೀನ ಪ್ರಕ್ರಿಯೆ ಹಾಗೂ ಕಾನೂನು ಕಾರ್ಯವಿಧಾನಗಳನ್ನು ತ್ವರಿತಗೊಳಿಸಲು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆಯನ್ನು ಶಾಸಕ ಕೆ.ಎಂ.ಉದಯ್ ಅವರು, ಮದ್ದೂರು ತಾಲೂಕಿನ ವಿವಿಧ ಭಾಗಗಳಲ್ಲಿ ಬಾಕಿಯಿರುವ ಕಾಮಗಾರಿಗಳನ್ನು ತಕ್ಷಣ ಪೂರ್ಣಗೊಳಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ತಾಲೂಕಿನ ನಿಡಘಟ್ಟ, ಅಗರಲಿಂಗನದೊಡ್ಡಿ, ಮದ್ದೂರು ನಗರ ಸೇರಿದಂತೆ ಹಲವಾರು ಕಡೆಯಲ್ಲಿ ಕಾಮಗಾರಿ ಅಪೂರ್ಣವಾಗಿರುವ ಕಡೆಗಳಲ್ಲಿ ಅಧಿಕಾರಿಗಳೊಂದಿಗೆ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಕೆ.ಎಂ.ಉದಯ್, ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಉದ್ಘಾಟನೆಯಾಗಿ ಮೂರು ವರ್ಷವಾಗಿದೆ. ಆದರೆ, ಅಪೂರ್ಣವಾಗಿರುವ ಕಾಮಗಾರಿಯನ್ನು ಪೂರ್ಣಗೊಳಿಸಲು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ಈಗಾಗಲೇ ಕಾಮಗಾರಿ ಸಂಬಂಧ ಸಚಿವರ ನೇತೃತ್ವದಲ್ಲಿ ಸಭೆ ನಡೆಸಿ ಯೋಜನಾ ಪ್ರಾಧಿಕಾರದ ಅಧಿಕಾರಿಗೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಸ್ಥಳ ಪರಿಶೀಲನೆ ನಡೆಸಿ ಇನ್ನೊಂದು ವಾರದೊಳಗೆ ಕಾಮಗಾರಿ ಪ್ರಾರಂಭಿಸುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಕಾಮಗಾರಿಗೆ ಸಂಬಂಧಪಟ್ಟಂತೆ ಭೂಸ್ವಾಧೀನ ಪ್ರಕ್ರಿಯೆ ಎಲ್ಲ ಮುಗಿದಿದೆ. ಕಾಮಗಾರಿಯನ್ನು ನಡೆಸಲು ಅನುದಾನದ ಕೊರತೆಯಿಲ್ಲ. ಈಗಾಗಲೇ ಜಮೀನು ಮಾಲೀಕರಿಗೂ ಪರಿಹಾರ ವಿತರಣೆ ಮಾಡಲಾಗಿದೆ. ಆದರೆ, ಚರಂಡಿ, ಸರ್ವೀಸ್ ರಸ್ತೆ, ಹಾಗೂ ನಾಲೆಗಳ ಕಾಮಗಾರಿಗಳನ್ನು ಕೈಗೊಂಡಿದ್ದ ವೇಳೆಯಲ್ಲಿ ಕೆಲವರ ವಿರೋಧ ಹಾಗೂ ತಾಂತ್ರಿಕ ಸಮಸ್ಯೆಗಳಿಂದ ಕಾಮಗಾರಿ ನಡೆಸಲು ಸಾಧ್ಯವಾಗಿಲ್ಲ. ಇದರಲ್ಲಿ ಸಾರ್ವಜನಿಕರೂ ಸಹಕಾರ ನೀಡದ ಪರಿಣಾಮ ಅಪೂರ್ಣ ಕಾಮಗಾರಿಯಾಗಿದೆ ಎಂದರು.

ಕಾಮಗಾರಿ ಅಪೂರ್ಣವಾಗಿರುವ ಹಿನ್ನೆಲೆಯಲ್ಲಿ ಸರ್ವೀಸ್ ರಸ್ತೆಯಲ್ಲಿ ಹಲವಾರು ಕಡೆಗಳಲ್ಲಿ ಚರಂಡಿ, ರಸ್ತೆಗಳನ್ನು ಪೂರ್ಣ ಮಾಡಿಲ್ಲ. ಮಳೆ ಬಂದಾಗ ಮಳೆ ನೀರು ಸಮರ್ಪಕವಾಗಿ ಹೋಗದೆ ರೈತರ ಜಮೀನುಗಳಿಗೆ ನುಗ್ಗಿ ಬೆಳೆಗಳಿಗೆ ಸಮಸ್ಯೆಯಾಗುತ್ತಿದೆ ಹಾಗೂ ಸರ್ವೀಸ್ ರಸ್ತೆಯಲ್ಲಿ ನೀರು ಹರಿಯುವುದರಿಂದ ವಾಹನ ಸವಾರರಿಗೂ ತುಂಬ ತೊಂದರೆಯಾಗಿದೆ ಎಂದು ತಿಳಿಸಿದರು.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಡಿಬಿಎಲ್ ಕಂಪನಿಗೆ ನೀಡಲಾಗಿತ್ತು. ಆದರೆ, ಎಕ್ಸ್‌ಪ್ರೆಸ್ ಹೈವೇಯನ್ನು ನಡೆಸಿ ಉಳಿದ ಕಾಮಗಾರಿಗಳನ್ನು ಅಪೂರ್ಣ ಮಾಡಿ ಹೋಗಿದ್ದಾರೆ. ಈಗ ಆ ಕಾಮಗಾರಿಗಳನ್ನು ಮಾಡಲು ಅವರ ಅವಧಿ ಮುಗಿದಿದೆ. ಹೀಗಾಗಿ ಸ್ಥಳೀಯ ಗುತ್ತಿಗೆದಾರರ ಮೂಲಕ ಕಾಮಗಾರಿ ನಡೆಸಲು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಒಪ್ಪಿಗೆ ನೀಡಿದ್ದಾರೆ ಆದ್ದರಿಂದ ಸ್ಥಳೀಯ ಗುತ್ತಿಗೆದಾರರನ್ನು ನೇಮಿಸಿ ಕೆಲಸ ಪೂರ್ಣಗೊಳಿಸಲಾಗುವುದು ಎಂದರು.

ಎಕ್ಸ್‌ಪ್ರೆಸ್ ಮತ್ತು ಸರ್ವೀಸ್ ರಸ್ತೆಗೆ ಕೇಂದ್ರ ಸರ್ಕಾರ ಸಾಕಷ್ಟು ಹಣ ನೀಡಿದ್ದರೂ ವೈಜ್ಞಾನಿಕವಾಗಿ ದೇಶದಲ್ಲಿ ಎಲ್ಲೂ ಸಮರ್ಪಕವಾಗಿ ಕಾಮಗಾರಿಯಾಗಿಲ್ಲ. ಇದರಿಂದ ಹಲವಾರು ಅಪಘಾತಗಳು ಸಂಭವಿಸಿ ಸಾವು-ನೋವುಗಳು ಸಂಭವಿಸಿವೆ. ಇದನ್ನ ಸರಿಪಡಿಸಲು ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಂಡು ಎಕ್ಸ್‌ಪ್ರೆಸ್ ವೇನಲ್ಲಿ ವೇಗ ನಿಯಂತ್ರಣ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡ ನಂತರ ಅಪಘಾತಗಳು ಕಡಿಮೆಯಾಗಿದೆ ಎಂದು ಹೇಳಿದರು.

ಕೊಲ್ಲಿ ವೃತ್ತದ ಬಳಿ ಸೇತುವೆ ನಿರ್ಮಾಣ ಮಾಡುವ ಸಂಬಂಧ ರಾಜ್ಯ ಸರ್ಕಾರದಿಂದ ಕೇಂದ್ರ ಸಚಿವರಿಗೆ ಪತ್ರ ಬರೆಯಲಾಗಿದ್ದು, ಶೀಘ್ರವಾಗಿ ಸೇತುವೆ ನಿರ್ಮಾಣವಾಗಲಿದೆ ಎಂದು ತಿಳಿಸಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ವಾಬ್ಲೆ, ಇಂಜಿನಿಯರ್ ಅರುಣ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಲುವರಾಜು, ಗ್ರಾಪಂ ಅಧ್ಯಕ್ಷ ತಿಮ್ಮೇಗೌಡ, ಸದಸ್ಯ ಪ್ರೀತಮ್, ಮುಖಂಡರಾದ ಅಪ್ಪೇಗೌಡ, ಪುಟ್ಟಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net