ತ್ವರಿತವಾಗಿ ನಡೆಯಲಿ ಹೆದ್ದಾರಿ ಕಾಮಗಾರಿ

sirsiMANKALU
Published on

ಶಿರಸಿ: ಶಿರಸಿ-ಕುಮಟಾ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಿರ್ಮಾಣ ನಿರೀಕ್ಷಿತ ವೇಗದಲ್ಲಾಗುತ್ತಿಲ್ಲ. ಈ ಕುರಿತಂತೆ ಶೀಘ್ರವೇ ಹೆದ್ದಾರಿ ಪ್ರಾಧಿಕಾರದೊಂದಿಗೆ ಸಭೆ ನಡೆಸಿ ತ್ವರಿತವಾಗಿ ಕಾಮಗಾರಿ ನಡೆಸಲು ಸೂಚಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.

ನಗರದ ಟ್ರಾಫಿಕ್ ಪೊಲೀಸ್ ಠಾಣೆಯನ್ನು ಶುಕ್ರವಾರ ವೀಕ್ಷಿಸಿದ ಬಳಿಕ ಅವರು ಮಾಧ್ಯಮದೊಂದಿಗೆ ಮಾತನಾಡಿ, ಹೆದ್ದಾರಿ ನಿರ್ವಣಕ್ಕೆ ರಸ್ತೆ ಸಂಚಾರ ಸ್ಥಗಿತಗೊಳಿಸಿ ಗುತ್ತಿಗೆದಾರರಿಗೆ ಫೆಬ್ರವರಿ 25ರವರೆಗೆ ಅವಕಾಶ ನೀಡಲಾಗಿತ್ತು. ಈ ಅವಧಿ ಮುಕ್ತಾಯಗೊಂಡು ತಿಂಗಳು ಕಳೆದಿದ್ದರೂ ಕಾಮಗಾರಿ ಮಾತ್ರ ನಿರೀಕ್ಷೆಯಂತೆ ನಡೆಯುತ್ತಿಲ್ಲ. ಸಾರ್ವಜನಿಕರು ಇದರಿಂದಾಗಿ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಕುರಿತು ಹೆದ್ದಾರಿ ಪ್ರಾಧಿಕಾರಕ್ಕೆ ಸೂಚಿಸಲಾಗುವುದು. ಅದರಂತೆ ಶಿರಸಿಯಿಂದ ಹಾವೇರಿವರೆಗಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಈಗ ಅರಣ್ಯ ಇಲಾಖೆಯಿಂದಲೂ ಅನುಮತಿ ಲಭಿಸಿದೆ. ಈ ಕಾಮಗಾರಿಯನ್ನು ಅವರೂ ವೇಗಗೊಳಿಸಬೇಕು ಎಂದರು.

ಬನವಾಸಿಯ ಹಬ್ಬ, ಕದಂಬೋತ್ಸವ ಏ. 12ರಿಂದ ಆಯೋಜನೆಗೊಂಡಿದ್ದು, ಈ ಬಾರಿ ಅರ್ಥಪೂರ್ಣವಾಗಿ ನಡೆಸಲಾಗುತ್ತಿದೆ. ಹಿಂದಿನ ವರ್ಷದ ಕದಂಬೋತ್ಸವದ ವೇಳೆ ಬಾಕಿ ಇದ್ದ ಬಿಲ್​ಗಳ ಪಾವತಿಯನ್ನೂ ಶೀಘ್ರದಲ್ಲೇ ಮಾಡಲಿದ್ದೇವೆ. ಆಶ್ರಯ ಮನೆಗಳ ನಿರ್ವಣಕ್ಕೆ ಬಾಕಿ ಇರುವ ಬಿಲ್​ಗಳ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಶಾಸಕ ಭೀಮಣ್ಣ ನಾಯ್ಕ, ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ, ಉಪವಿಭಾಗಾಧಿಕಾರಿ ಕೆ. ಕಾವ್ಯಾರಾಣಿ, ಸಿಸಿಎಫ್ ವಸಂತರೆಡ್ಡಿ, ನಗರಸಭೆ ಅಧ್ಯಕ್ಷೆ ಶರ್ವಿುಳಾ ಮಾದನಗೇರಿ, ಜಗದೀಶ ಗೌಡ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net