

ವಿಜಯವಾಣಿ ಸುದ್ದಿಜಾಲ ಉಪ್ಪಿನಂಗಡಿ
ಉಪ್ಪಿನಂಗಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಕಾಮಗಾರಿ ಚುರುಕುಗೊಂಡಿದ್ದು, ಮುಂಬರುವ ಮಳೆಗಾಲದ ಮುನ್ನ ಹೆದ್ದಾರಿಯನ್ನು ಸಂಚಾರ ಯೋಗ್ಯವನ್ನಾಗಿಸಲು ಅಧಿಕಾರಿ, ಗುತ್ತಿಗೆ ಸಂಸ್ಥೆ ಸಂಕಲ್ಪಿಸಿದೆ. ಒಂದೆರಡು ಕಡೆ ಸ್ಥಳೀಯರ ಪ್ರತಿರೋಧದಿಂದಾಗಿ ಕಾಮಗಾರಿ ತಡೆಹಿಡಿಯಲ್ಪಟ್ಟು ಅತಂತ್ರತೆ ಸೃಷ್ಟಿಸಿದೆ.
ಉಪ್ಪಿನಂಗಡಿ, 34ನೇ ನೆಕ್ಕಿಲಾಡಿಯ ಎತ್ತರಿಸಿದ ರಸ್ತೆ ಕಾಮಗಾರಿ ಬಹುತೇಕ ಪೂರ್ಣತೆ ಹಂತ ತಲುಪಿದ್ದು, ನೆಕ್ಕಿಲಾಡಿಯಲ್ಲಿ ಎತ್ತರಿಸಿದ ರಸ್ತೆ ವಾಹನ ಸಂಚಾರಕ್ಕೆ ಮುಕ್ತವಾಗಿದೆ. ಉಪ್ಪಿನಂಗಡಿಯಲ್ಲಿ ಮೇ ತಿಂಗಳಾಂತ್ಯಕ್ಕೆ ವಾಹನ ಸಂಚಾರಕ್ಕೆ ಲಭಿಸುವ ಸಾಧ್ಯತೆ ಇದೆ.
ನೆಲ್ಯಾಡಿಯಲ್ಲಿ ಎತ್ತರಿಸಿದ ರಸ್ತೆ ಬದಲಾಗಿ ಮೇಲ್ಸೇತುವೆ ಬೇಕೆಂದು ಸ್ಥಳೀಯರು ಬೇಡಿಕೆ ಮಂಡಿಸಿ ಎತ್ತರಿಸಿದ ರಸ್ತೆ ಕಾಮಗಾರಿಗೆ ತಡೆಯೊಡ್ಡಿದ್ದು, ಸಂಸದರ ಮಧ್ಯಪ್ರವೇಶದಿಂದಾಗಿ ಎತ್ತರಿಸಿದ ರಸ್ತೆ ಮಧ್ಯದಲ್ಲಿಯೇ ಹೆಚ್ಚುವರಿ ಅಂಡರ್ಪಾಸ್ ಒದಗಿಸಿ ಕಾಮಗಾರಿ ನಡೆಸಲು ಪ್ರಸ್ತಾವನೆ ಕಳುಹಿಸಲಾಗಿದೆ. ಈ ಯೋಜನೆಗೆ ಅನುಮೋದನೆ ದೊರೆತರೆ ಅಲ್ಲಿಯೂ ಕಾಮಗಾರಿ ಪ್ರಾರಂಭಗೊಳ್ಳಬಹುದು.
ನೀರಕಟ್ಟೆಯಲ್ಲಿ ಹೆದ್ದಾರಿ ನೇರಗೊಳಿಸುವ ಸಂಬಂಧ ಗುಡ್ಡ ಕಡಿಯುವ ವೇಳೆ ದೊರೆತ ಬಂಡೆಕಲ್ಲು ಸ್ಫೋಟಿಸುವ ವೇಳೆ ಉಂಟಾದ ಕಂಪನದಿಂದ ಮನೆಗೆ ಹಾನಿಯಾಗಿದೆ ಎಂದು ಆರೋಪಿಸಿ ಕಾಮಗಾರಿನಿರತ ಇಂಜಿನಿಯರ್ ಮೇಲೆ ಸ್ಥಳೀಯ ನಿವಾಸಿಗರ ಗುಂಪು ಹಲ್ಲೆ ನಡೆಸಿ ಕಾಮಗಾರಿ ಸ್ಥಗಿತಗೊಂಡಿದೆ.
ಅನಪೇಕ್ಷಿತ ಘಟನೆಯಿಂದ ಸ್ಥಗಿತ
ಉಪ್ಪಿನಂಗಡಿಯಲ್ಲಿ ಸರ್ವೀಸ್ ರಸ್ತೆ ನಿರ್ಮಿಸಲು ತಗ್ಗು ಪ್ರದೇಶದಲ್ಲಿ ತಡೆಗೋಡೆ ನಿರ್ಮಿಸಲು ಮುಂದಾದಾಗ ಭೂ ಮಾಲೀಕರು ಭೂ ಸ್ವಾಧೀನದ ಪರಿಹಾರಧನ ನೀಡಿಲ್ಲವೆಂದು ಆರೋಪಿಸಿ ಹಲ್ಲೆಗೆ ಮುಂದಾಗಿದ್ದಾರೆಂದು ನಿರ್ಮಾಣ ಕಾರ್ಮಿಕರ ಕೆಲಸ ಕಾರ್ಯ ಸ್ಥಗಿತಗೊಳಿಸಿದ್ದಾರೆ. ಇಂತಹ ಅನಪೇಕ್ಷಿತ ಘಟನೆಗಳಿಂದಾಗಿ ಅಲ್ಲಲ್ಲಿ ಕಾಮಗಾರಿ ಸ್ಥಗಿತಗೊಳ್ಳುತ್ತಿದೆ.
ಈ ಬಾರಿ ಮಳೆ ಬೇಗ ಸುರಿಯಲಾರಂಭಿಸಿದೆ. ಮಳೆ ಸಮಸ್ಯೆ ಇಲ್ಲವಾದಲ್ಲಿ ಮುಂಬರುವ ಮೇ ತಿಂಗಳಾಂತ್ಯಕ್ಕೆ ಈ ಭಾಗದ ಎಲ್ಲ ಮೇಲ್ಸೇತುವೆ, ಎತ್ತರಿಸಿದ ರಸ್ತೆ ಸಂಚಾರಕ್ಕೆ ಲಭಿಸಲಿದೆ. ನೆಲ್ಯಾಡಿ, ನೀರಕಟ್ಟೆ, ಪೆರ್ನೆ ಸೇರಿದಂತೆ ಐದಾರು ಸ್ಥಳಗಳಲ್ಲಿ ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿದೆ. ಉಪ್ಪಿನಂಗಡಿಯಲ್ಲಿ ಸ್ಥಳೀಯ ವ್ಯಕ್ತಿಯೊಬ್ಬರ ಕಾಮಗಾರಿಗೆ ತಡೆಯಿಂದ ಸರ್ವೀಸ್ ರಸ್ತೆ ನಿರ್ಮಾಣಕ್ಕೆ ತಡೆಯಾಗಿದೆಯೇ ವಿನಃ ಹೆದ್ದಾರಿ ಕಾಮಗಾರಿಗೆ ತಡೆಯಾಗಿಲ್ಲ. ಶೇ.90 ಕಾಮಗಾರಿ ಈ ಮಳೆಗಾಲದ ಮೊದಲು ಪೂರ್ಣಗೊಳ್ಳಲಿದೆ. ರಘುನಾಥ ರೆಡ್ಡಿ, ಕೆಎನ್ಆರ್ ಸಂಸ್ಥೆ ಪ್ರಾಜೆಕ್ಟ್ ಮ್ಯಾನೇಜರ್ ಪ್ರಸಕ್ತ ಹೆದ್ದಾರಿ ಕಾಮಗಾರಿ ತೃಪ್ತಿದಾಯಕವಾಗಿ ನಡೆಯುತ್ತಿದೆ. ಕೆಲವೆಡೆ ಸಣ್ಣಪುಟ್ಟ ಕಾರಣ ಮುಂದಿರಿಸಿ ಕೆಲಸ ಸ್ಥಗಿತಗೊಳ್ಳುತ್ತಿದೆ. ಇದು ನಾಗರಿಕ ಸಮಾಜಕ್ಕೆ ಶೋಭೆಯಲ್ಲ. ಸರ್ಕಾರಿ ಕಾಮಗಾರಿಗೆ ಈ ರೀತಿ ತಡೆಯೊಡ್ಡುವುದು ಅನುಚಿತ ಕಾರ್ಯ. ಸ್ಥಳೀಯ ಆಡಳಿತ ಈ ಬಗ್ಗೆ ಯೋಜಿತವಾಗಿ ಕಾರ್ಯನಿರ್ವಹಿಸಿ ಸಮಸ್ಯೆ ಬಗೆಹರಿಸಲು ಗಮನಹರಿಸಬೇಕು. ಹರಿರಾಮಚಂದ್ರ ಸಾಮಾಜಿಕ ಕಾರ್ಯಕರ್ತ ಹೆದ್ದಾರಿ ಅಗಲೀಕರಣ ಕಾಮಗಾರಿಯ ಫಲವಾಗಿ ಈಗಾಗಲೇ ಉಪ್ಪಿನಂಗಡಿಯ ರಾಜಕಾಲುವೆ ಸರಾಗ ಹರಿಯುವಿಕೆಯಲ್ಲಿ ಲೋಪ ಉಂಟಾಗಿದೆ. ಮುಂಬರುವ ಮಳೆಗಾಲದ ಸಮಯದಲ್ಲಿ ಮಳೆ ನೀರು, ತ್ಯಾಜ್ಯ ನೀರು ಚರಂಡಿಗಳಲ್ಲಿ ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆಯಾಗಲಿ. ಧನಂಜಯ್ ನಟ್ಟಿಬೈಲ್, ಗ್ರಾಪಂ ಸದಸ್ಯ https://www.vijayavani.net/110-kv-substation-work-delayed https://www.vijayavani.net/niranjana-prashasthi