

ಬೇಲೂರು: ಅಂಬೇಡ್ಕರ್ ಬಗ್ಗೆ ಹಗುರವಾಗಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಸಚಿವ ಸಂಪುಟದಿಂದ ವಜಾ ಗೊಳಿಸುವಂತೆ ಆಗ್ರಹಿಸಿ ಜ. 8 ರಂದು ಹಾಸನದಲ್ಲಿ ರಾಷ್ಟಿಯ ಹೆದ್ದಾರಿ ಸಂಚಾರ ತಡೆದು ಪ್ರತಿಭಟಿಸಲಾಗುವುದು ಎಂದು ದಲಿತ ಮುಖಂಡ ಎಚ್.ಕೆ.ಸಂದೇಶ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ದಲಿತ ಮುಖಂಡರ ಸಭೆ ನಂತರ ಶನಿವಾರ ಕರ ಪತ್ರಗಳನ್ನು ಪ್ರದರ್ಶಿಸಿ ಮಾತನಾಡಿದರು. ಅಮಿತ್ ಷಾ ಆಡಿರುವ ಅಪಮಾನಕರ ಮಾತುಗಳನ್ನು ಖಂಡಿಸುತ್ತೇವೆ ಎಂದರು. ಸಂವಿಧಾನ ಮತ್ತು ಸಂವಿಧಾನ ಶಿಲ್ಪಿಗೆ ಅವಮಾನಿಸಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಹಾಸನ ಜಿಲ್ಲಾ ದಲಿತ-ಜನಪರ ಚಳವಳಿಗಳ ಒಕ್ಕೂಟದ ನೇತೃತ್ವದಲ್ಲಿ ಜ.8 ರಂದು ಹಮ್ಮಿಕೊಂಡಿರುವ ಹೋರಾಟಕ್ಕೆ ಜನಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದರು. ಸಿಪಿಐಎಂ ಮುಖಂಡ ಧರ್ಮೇಶ್, ದಸಂಸ ರಾಜ್ಯ ಸಂಚಾಲಕ ಸೋಮಶೇಖರ್, ಮುಖಂಡರಾದ ಲಕ್ಷ್ಮಣ್, ವಿಜಯಕುಮಾರ್, ರಾಜೇಶ್, ಪೃಥ್ವಿ, ಮಂಜುಳಾ ಇತರರಿದ್ದರು.