ಹೆದ್ದಾರಿಯಲ್ಲಿ ಕಗ್ಗತ್ತಲು, ಉರಿಯದ ಬೀದಿದೀಪ, ಜನರ ಪರದಾಟ

street light
Published on

ಬೈಂದೂರು: ಕುಂದಾಪುರ- ಕಾರವಾರ ಚತುಷ್ಪಥ ಹೆದ್ದಾರಿ ಕೆಲಸ ಆರಂಭವಾಗಿ ವರ್ಷ ಕಳೆದಿದೆ. ಈ ಹೆದ್ದಾರಿಯಲ್ಲಿ ಹೆಚ್ಚಿನ ಕಡೆ ಬೀದಿದೀಪಗಳು ಬೆಳಗುತ್ತಿಲ್ಲ. ಈ ಬಗ್ಗೆ ಹಲವು ಬಾರಿ ಗಮನ ಸೆಳೆದರೂ ಗುತ್ತಿಗೆದಾರರು ಗಮನ ಹರಿಸಿಲ್ಲ. ನಾಗೂರು, ಶಿರೂರು ಸೇರಿದಂತೆ ಹಲವು ಕಡೆ ಹೆದ್ದಾರಿ ರಾತ್ರಿ ವೇಳೆ ಭಯಾನಕವಾಗಿ ಗೋಚರವಾಗುತ್ತಿದೆ.

ಹಿಂದೆ ಹಳೆಯ ಹೆದ್ದಾರಿಯಲ್ಲಿ ಗ್ರಾಪಂ ವತಿಯಿಂದ ಬೀದಿದೀಪ ಅಳವಡಿಸಲಾಗಿತ್ತು. ಇದರ ನಿರ್ವಹಣೆ ಜವಾಬ್ದಾರಿಯನ್ನೂ ಗ್ರಾಪಂ ವಹಿಸಿಕೊಂಡಿತ್ತು. 2014-15ರಲ್ಲಿ ಚತುಷ್ಪಥ ಕಾಮಗಾರಿಗೆ ಚಾಲನೆ ನೀಡಿದ್ದರಿಂದ ಹೆದ್ದಾರಿಯಲ್ಲಿ ಅಳವಡಿಸಿದ ಬೀದಿದೀಪಗಳನ್ನು ತೆರವುಗೊಳಿಸಲಾಯಿತು. ಇದನ್ನು ಸ್ಥಳೀಯರು ಆಕ್ಷೇಪಿಸಿದಾಗ ಗುತ್ತಿಗೆ ಕಂಪನಿಯವರು ಕಾಮಗಾರಿ ಮುಗಿಯುವ ವೇಳೆ ಸಂಪೂರ್ಣ ಬೀದಿದೀಪ ವ್ಯವಸ್ಥೆ ಕಲ್ಪಿಸಲಾಗುವುದು ಎಂದಿದ್ದರು. ಆದರೆ ಕಾಮಗಾರಿ ಮುಗಿದ ಬಳಿಕ ಹೆದ್ದಾರಿಯಲ್ಲಿ ಅಲ್ಲಲ್ಲಿ ಮಾತ್ರ ದೀಪಗಳು ಬೆಳಗುತ್ತಿವೆ. ಇದರಿಂದ ರಾತ್ರಿ ವೇಳೆ ವಾಹನದ ಬೆಳಕು ಹೊರತುಪಡಿಸಿ ಉಳಿದ ಸಂದರ್ಭ ರಸ್ತೆಗಳು ಕತ್ತಲಿನಿಂದ ಕೂಡಿರುತ್ತದೆ.

ವಿದ್ಯುತ್ ಬಗ್ಗೆ ಮೆಸ್ಕಾಂಗೆ ಅರ್ಜಿ ಸಲ್ಲಿಸಿದ್ದು, ಅವರು ಇದುವರೆಗೂ ಟಿಸಿ ಅಳವಡಿಸಿಲ್ಲ ಎಂದು ಹೆದ್ದಾರಿ ಇಲಾಖೆ ಜನರ ಮುಂಗೈಗೆ ಬೆಲ್ಲ ಹಚ್ಚುತ್ತಿದ್ದಾರೆ. ಇಷ್ಟು ದಿನಗಳವರೆಗೂ ಇದು ಸಾಧ್ಯವಾಗದಿರುವುದು ಅನುಮಾನಕ್ಕೆ ಎಡೆಮಾಡಿಕೊಡುವಂತಿದೆ. ಇಂಥ ಹಾರಿಕೆ ಉತ್ತರ ಬಿಟ್ಟು ಹೆದ್ದಾರಿಯಲ್ಲಿ ಹೆಚ್ಚುತ್ತಿರುವ ಅಪಘಾತ ತಡೆಯುವ ನಿಟ್ಟಿನಲ್ಲಿ ಶೀಘ್ರ ಬೀದಿದೀಪಗಳನ್ನು ಸರಿಪಡಿಸಬೇಕು.

ಶೇಖರ ಖಾರ್ವಿ, ಉಸ್ತುವಾರಿ ನಾಗರಿಕ ವೇದಿಕೆ ನಾಗೂರು

ಹೆದ್ದಾರಿಯ ಕೆಲವೆಡೆ ಬೀದಿದೀಪಗಳು ಇಲ್ಲದೆ, ಚರಂಡಿ ಇಲ್ಲದೆ ಸಮಸ್ಯೆಯಾಗುತ್ತಿರುವ ಬಗ್ಗೆ ಜನರು ಗಮನಕ್ಕೆ ತಂದಿದ್ದಾರೆ. ಪೂರ್ಣ ಕೆಲಸ ಮುಗಿದ ಕೂಡಲೇ ಎಲ್ಲ ವ್ಯವಸ್ಥೆ ಮಾಡಿಕೊಡಲಾಗುವುದು.

ಪ್ರಮೋದ್ ಸಾವಲ್ಕರ್, ರಾಷ್ಟ್ರೀಯ ಹೆದ್ದಾರಿ ಗುತ್ತಿಗೆದಾರ ಕಂಪನಿಯ ಜನರಲ್ ಮ್ಯಾನೇಜರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net