ಅರಬೈಲ್ ಘಟ್ಟದಿಂದ ಗುಳ್ಳಾಪುರದವರೆಗಿನ ಹೆದ್ದಾರಿ, ಯಮಪುರಿಗೆ ಸವಾರಿ

23 ylp 03 (adgp)
Published on

ಶ್ರೀಧರ ಅಣಲಗಾರ ಯಲ್ಲಾಪುರ

ತಾಲೂಕಿನ ಅರಬೈಲ್ ಘಟ್ಟದಿಂದ ಗುಳ್ಳಾಪುರದವರೆಗಿನ ಹೆದ್ದಾರಿ ಅಪಘಾತಗಳ ರಹದಾರಿಯಾಗಿದೆ. ಈ ಮಾರ್ಗದಲ್ಲಿ ನಿತ್ಯ ಒಂದಿಲ್ಲೊಂದು ಅಪಘಾತ ಸಂಭವಿಸುತ್ತಲೇ ಇವೆ. ಮಾರ್ಗ ಮಧ್ಯೆ ಲಾರಿ ಕೆಟ್ಟಿ ನಿಂತರೋ ಅಥವಾ ಅಪಘಾತವಾದರೋ ಇಡೀ ಹೆದ್ದಾರಿ ಬಂದ್ ಆಗಿ ಸಂಚಾರ ಸಿಕ್ಕು ಆಗಿರುತ್ತದೆ.

ಅರಬೈಲ್ ಘಟ್ಟದಿಂದ ಗುಳ್ಳಾಪುರದವರೆಗಿನ ವ್ಯಾಪ್ತಿಯಲ್ಲಿ 2024ರ ಜನವರಿಯಿಂದ 2025ರ ಜನವರಿವರೆಗೆ 41 ಅಪಘಾತಗಳು ಸಂಭವಿಸಿ, 16 ಜನರು ಮೃತಪಟ್ಟಿದ್ದಾರೆ. ನೂರಾರು ಜನರು ಗಾಯಗೊಂಡಿದ್ದಾರೆ. ಠಾಣೆಯಲ್ಲಿ ಪ್ರಕರಣ ದಾಖಲಾದ ಸಂಖ್ಯೆ ಇದಾದರೆ, ಲಾರಿ, ಕಾರು, ಬಸ್, ದ್ವಿಚಕ್ರ ವಾಹನ ಪಲ್ಟಿ ಸೇರಿ ಸಣ್ಣಪುಟ್ಟ ಅವಘಡಗಳ ಸಂಖ್ಯೆ 50ನ್ನೂ ಮೀರಿದೆ.

 ರಸ್ತೆ ಹೇಗಿದ್ದರೂ ತಪ್ಪು!: ಅರಬೈಲ್ ಘಟ್ಟ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಂಡ- ಗುಂಡಿ ತುಂಬಿದ್ದರೂ ಅಪಘಾತಕ್ಕೆ ಕಾರಣವಾಗುತ್ತವೆ. ಅದರ ಜತೆಗೆ ರಸ್ತೆ ಉತ್ತಮವಾಗಿದ್ದರೂ ಚಾಲಕರು ಅತಿಯಾದ ವೇಗದಿಂದ ವಾಹನ ಚಲಾಯಿಸುವುದರಿಂದ ಅಪಘಾತಕ್ಕೆ ಕಾರಣವಾಗುತ್ತದೆ. ಒಟ್ಟಾರೆ ರಸ್ತೆ ಹೇಗಿದ್ದರೂ ತಪ್ಪು ಎಂಬಂತಾಗಿದೆ.

 ಎಡಿಜಿಪಿ ಭೇಟಿ: ಗುಳ್ಳಾಪುರದ ಬಳಿ ಸಂಭವಿಸಿದ ಲಾರಿ ಅಪಘಾತದಲ್ಲಿ 10 ಜನ ವ್ಯಾಪಾರಸ್ಥರು ಮೃತಪಟ್ಟಿರುವ ಸ್ಥಳಕ್ಕೆ ಪೊಲೀಸ್ ಇಲಾಖೆಯ ರಸ್ತೆ ಸುರಕ್ಷಾ ಮತ್ತು ಸಂಚಾರ ಎಡಿಜಿಪಿ ಕೆ.ವಿ. ಶರತ್​ಚಂದ್ರ ಬುಧವಾರ ರಾತ್ರಿ ಭೇಟಿ ನೀಡಿದರು. ಸೀನ್ ಆಫ್ ಕ್ರೖೆಂ ವೆಹಿಕಲ್ ಅಧಿಕಾರಿ ಪರಿಶೀಲಿಸಿದಾಗ ಯಾವುದೇ ತಾಂತ್ರಿಕ ತೊಂದರೆಗಳು ಲಾರಿಯಲ್ಲಿ ಇರಲಿಲ್ಲ ಎಂದು ತಿಳಿದು ಬಂದಿದೆ. ಗೂಡ್ಸ್ ವಾಹನದಲ್ಲಿ ಜನರು ಪ್ರಯಾಣಿಸುವುದು ನಿಷೇಧ. ಕಾನೂನು ತಜ್ಞರ ಅನುಮತಿ ಪಡೆದು ಮುಂದಿನ ವಿಚಾರ ತೀರ್ವನಿಸಲಾಗುವುದು. ಘಟನೆ ಬಗ್ಗೆ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಲಾಗುವುದು ಎಂದು ತಿಳಿಸಿದರು.

 ಸರಕು ವಾಹನದಲ್ಲಿ ಪ್ರಯಾಣಿಕರ ಸಂಚಾರ:

ಲಾರಿ ಅಪಘಾತದಲ್ಲಿ 10 ಜನ ವ್ಯಾಪಾರಸ್ಥರು ಮೃತಪಟ್ಟಿರುವ ಘಟನೆಯು ಅಪಘಾತ ತಡೆಯುವ ಅನಿವಾರ್ಯತೆಯ ಜತೆಯಲ್ಲಿ ಹಲವು ಆಯಾಮಗಳ ಚಿಂತನೆ ಹುಟ್ಟು ಹಾಕಿದೆ. ಸರಕು ಸಾಗಾಟಕ್ಕೆಂದು ಇರುವ ವಾಹನಗಳಲ್ಲಿ ಪ್ರಯಾಣಿಕರನ್ನು ಸಾಗಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಅದು ಈ ಅಪಘಾತದ ಮೂಲಕ ಬೆಳಕಿಗೆ ಬಂದಿದೆ. ಪ್ರತಿ ವಾರ ಹಣ್ಣು, ತರಕಾರಿ ತುಂಬಿಕೊಂಡು ಹಾವೇರಿಯಿಂದ ಕರಾವಳಿ ಭಾಗಕ್ಕೆ 200ಕ್ಕೂ ಹೆಚ್ಚು ಕಿ.ಮೀ. ದೂರ ಲಾರಿಯಲ್ಲೇ ಬರುವ ವ್ಯಾಪಾರಿಗಳು, ಸಂತೆಯ ವ್ಯಾಪಾರ ಮುಗಿಸಿ, ಅದರಲ್ಲೇ ಮರಳುತ್ತಿದ್ದರಂತೆ!. ಸರಕು ಸಾಗಣೆ ವಾಹನದಲ್ಲಿ ಪ್ರಯಾಣಿಸುವುದು ನಿಯಮ ಬಾಹಿರ ಎಂಬ ಅರಿವಿದ್ದರೂ, ವ್ಯಾಪಾರಿಗಳು ಅದರಲ್ಲೇ ಪ್ರಯಾಣಿಸುತ್ತಿದ್ದರು. ಪ್ರತ್ಯೇಕ ವಾಹನದಲ್ಲಿ ಹೋಗಿ ವ್ಯಾಪಾರ ಮಾಡುವಷ್ಟು ಲಾಭ ಈ ಉದ್ಯಮದಲ್ಲಿರಲಿಲ್ಲ. ಆದರೂ ಬದುಕಿನ ಬಂಡಿ ಸಾಗಿಸಲು ಈ ಅನಿವಾರ್ಯತೆಗೆ ಒಳಗಾಗಿ ಈಗ ಬದುಕನ್ನೇ ಮುಗಿಸಿದ್ದಾರೆ. ಸರಕು ಸಾಗಣೆಯ ವಾಹನಗಳನ್ನು ಕಟ್ಟುನಿಟ್ಟಾಗಿ ಪರಿಶೀಲಿಸಿ, ಪ್ರಯಾಣಿಕರನ್ನು ಸಾಗಿಸದಂತೆ ತಡೆಯುವ ನಿಟ್ಟಿನಲ್ಲಿ ಅಧಿಕಾರಿಗಳು ಗಂಭೀರ ಚಿಂತನೆ ನಡೆಸಿದ್ದಾರೆ.

ಹೆದ್ದಾರಿ ಅಧಿಕಾರಿಗಳನ್ನು ಸೇರಿಸಿ, ರಸ್ತೆ ಸುರಕ್ಷತೆ ಕುರಿತು ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಗುವುದು. ರಾಷ್ಟ್ರೀಯ ಹೆದ್ದಾರಿಯ ಸಮರ್ಪಕ ನಿರ್ವಹಣೆಗೆ ಸೂಚಿಸಲಾಗುವುದು. ಹೆದ್ದಾರಿ ಪಕ್ಕದಲ್ಲಿ ಟ್ರೆಂಚ್ ರಿಟರ್ನಿಂಗ್ ವಾಲ್ ನಿರ್ವಿುಸಲು ಸೂಚಿಸಲಾಗುವುದು. | ಕೆ.ವಿ.ಶರತ್​ಚಂದ್ರ, ಎಡಿಜಿಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net