ಹೆದ್ದಾರಿ ಕಾಮಗಾರಿ ಆದ್ಯತೆಯಲ್ಲಿ ಪೂರ್ಣ, ದಕ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಸೂಚನೆ

dc
Published on

ಮಂಗಳೂರು: ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅಗತ್ಯವಿರುವ ಕಾಮಗಾರಿಗಳನ್ನು ಆದ್ಯತೆಯಲ್ಲಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ತಮ್ಮ ಕಚೇರಿ ಸಭಾಂಗಣದಲ್ಲಿ ಮಂಗಳವಾರ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ರಸ್ತೆಗಳ ಅಭಿವೃದ್ಧಿ ಕಾರ್ಯಗಳ ಕಾಮಗಾರಿಗಳನ್ನು ವಿಳಂಬ ಮಾಡಬಾರದು. ಸಾರ್ವಜನಿಕರ ಸಂಚಾರಕ್ಕೆ ಸಮಸ್ಯೆ ಆಗಬಾರದು ಎಂದರು.

ಮಾಣಿಯಿಂದ ಬಿ.ಸಿ ರೋಡ್ ಜಂಕ್ಷನ್‌ವರೆಗಿನ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚುವ ಕಾಮಗಾರಿಗಳನ್ನು ನ.30ರೊಳಗೆ ಪೂರ್ಣಗೊಳಿಸಬೇಕು.

ಗುಂಡ್ಯ-ಅಡ್ಡಹೊಳೆ ರಸ್ತೆಗಳ ಗುಂಡಿಗಳನ್ನು ಸಹ ಮುಚ್ಚುವ ಕಾರ್ಯ ಕೈಗೊಳ್ಳಬೇಕು. ರಸ್ತೆ ದುರಸ್ತಿ ಕಾಮಗಾರಿಗಳನ್ನು ಕೈಗೊಳ್ಳಲು ಅಗತ್ಯವಿರುವ ಕಚ್ಚಾ ವಸ್ತುಗಳನ್ನು ಎಂಆರ್‌ಪಿಎಲ್ ಸಹಕಾರದೊಂದಿಗೆ ಪೂರೈಕೆ ಮಾಡಿಕೊಳ್ಳಬೇಕು. ಮಾಣಿ ಮತ್ತು ಬಿ.ಸಿ.ರೋಡ್ ರಸ್ತೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವಾಗ ಯಾವುದೇ ರೀತಿಯ ಟ್ರಾಫಿಕ್ ಸಮಸ್ಯೆ ಆಗದಂತೆ ಎಚ್ಚರ ವಹಿಸಬೇಕು ಎಂದು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.

10 ದಿನದಲ್ಲಿ ಪೂರ್ಣಗೊಳಿಸಿ: ಅಡ್ಡಹೊಳೆಯಿಂದ -ಬಂಟ್ವಾಳದವರೆಗೆ ಚತುಷ್ಪಥ ಕಾಂಕ್ರೀಟ್ ರಸ್ತೆ ನಿರ್ಮಿಸಲು 17 ಗ್ರಾಮಗಳ 35 ಹೆಕ್ಟೇರ್ ಜಮೀನನ್ನು 680 ಮಂದಿ ಖಾತೆದಾರರಿಂದ ಭೂ-ಸ್ವಾಧೀನಪಡಿಸಿಕೊಳ್ಳಲಾಗಿದೆ. ಮಾಲೀಕರಿಗೆ ಭೂಸ್ವಾಧೀನದ ಪ್ರಕ್ರಿಯೆಯಂತೆ 3ಜಿ ಅವಾರ್ಡ್‌ಗಳನ್ನು 10 ದಿನದ ಒಳಗೆ ಸಹಾಯಕ ಆಯುಕ್ತರು ಹಾಗೂ ಎನ್‌ಎಚ್ ಅಧಿಕಾರಿಗಳ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net