ವ್ಯವಸ್ಥೆಯ ಲೋಪದೋಷ ಎತ್ತಿ ತೋರಿಸಿ: ಕರ್ನಾಟಕ ಶಾಸ್ತ್ರೀಯ ಗಾಯಕ ಟಿ.ಎಂ.ಕೃಷ್ಣ

mysore
Published on

ಮೈಸೂರು: ವಿಚಾರವಂತರು, ಪ್ರಜ್ಞಾವಂತರು ವ್ಯವಸ್ಥೆಗೆ ವಿರುದ್ಧವಾಗಿ ಸದಾ ಹೋರಾಟ ನಡೆಸಬೇಕು ಎಂದು ಕರ್ನಾಟಕ ಶಾಸ್ತ್ರೀಯ ಗಾಯಕ ಚೆನ್ನೈನ ಟಿ.ಎಂ.ಕೃಷ್ಣ ಹೇಳಿದರು.


ಪಂಡಿತ್ ರಾಜೀವ್ ತಾರಾನಾಥ್ ಮೆಮೋರಿಯಲ್ ಟ್ರಸ್ಟ್ ವತಿಯಿಂದ ನಗರದ ಕಲಾಮಂದಿರದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಪಂಡಿತ್ ರಾಜೀವ್ ತಾರಾನಾಥ್ ಅವರಿಗೆ ಪ್ರೀತಿಯ ನಮನ ಕಾರ್ಯಕ್ರಮದಲ್ಲಿ ‘ಎರಡು ಭಿನ್ನ ಧಾರೆಗಳು’ ಕುರಿತು ಮಾತನಾಡಿದರು.


ವ್ಯವಸ್ಥೆಯ ಲೋಪದೋಷಗಳನ್ನು ಎತ್ತಿತೋರಿಸಬೇಕು. ಅದರ ಪರಿಹಾರಕ್ಕಾಗಿ ಹೋರಾಟ ಮಾಡಬೇಕು. ರಾಜೀವ್ ತಾರಾನಾಥ್ ಸಹ ಈ ದಾರಿಯಲ್ಲಿ ಸಾಗಿದವರು ಎಂದರು.


ರಾಜೀವ ಅವರದ್ದು ವಿಭಿನ್ನ ಸ್ವರೂಪದ ವ್ಯಕ್ತಿತ್ವ, ಒಂದು ಗುಂಪಿಗೆ ಸೇರಿದವರಲ್ಲ. ಅವರು ತಮ್ಮ ಸಂಗೀತ ವೃತ್ತಿಯನ್ನು ಅಪಾರವಾಗಿ ಪ್ರೀತಿಸಿದರು. ಅವರು ತಮ್ಮ ಕುಟುಂಬದ ಹಿನ್ನೆಲೆ ಮತ್ತು ಅನುಭವದ ಕಾರಣದಿಂದ ಶಾಸ್ತ್ರೀಯ ಲೋಕಕ್ಕೆ ಹೊಸತನದ ಸ್ಪರ್ಶವನ್ನು ತಂದುಕೊಟ್ಟರು ಎಂದು ಸ್ಮರಿಸಿದರು.


ರಾಜೀವ್ ತಾರಾನಾಥ್ ಮತ್ತು ಅವರ ಚಿಂತನೆ ಎರಡೂ ಬೇರೆ ಬೇರೆಯಾಗಿತ್ತು. ಅವರ ಆಲೋಚನೆ, ಜೀವನದ ರೀತಿ ನಮಗೆಲ್ಲ ಸತ್ಯ ದರ್ಶನ ಮಾಡಿಸುತ್ತದೆ. ಉತ್ತಮವಾಗಿ ಪದ ಮತ್ತು ರಾಗ ನುಡಿಸುವುದಷ್ಟೇ ಅಲ್ಲ, ಅದನ್ನು ಅರಗಿಸಿಕೊಂದು ಅದರಲ್ಲಿಯೇ ಜೀವನ ನಡೆಸಬೇಕು. ಇದಕ್ಕೆ ತಾರಾನಾಥ್ ನಮ್ಮ ಮುಂದಿರುವ ನಿದರ್ಶನ ಎಂದರು.


‘ಜೀವದ ಗೆಳೆಯ ಹೇಗಿದ್ದರು’ ಕುರಿತು ಮಾತನಾಡಿದ ತಾರಾನಾಥ್ ಅವರ ಗೆಳತಿ, ಸಾಹಿತಿ ಡಾ.ವಿಜಯಾ ಮಾತನಾಡಿ, ತಾರಾನಾಥ್ ಅವರಿಗೆ ದೊರೆಯಬೇಕಾಗಿದ್ದ ಗೌರವ ಸಿಗಲಿಲ್ಲ. ಆದರೆ ಈ ಕುರಿತು ಅವರಿಗೆ ಅಸಮಾಧಾನ ಇರಲಿಲ್ಲ. ಆದರೆ ಅವರ ಶಿಷ್ಯರಿಗೆ, ಒಡನಾಡಿಗಳಿಗೆ ಅತೃಪ್ತಿ ಇದೆ ಎಂದು ಹೇಳಿದರು.


ವರ್ತಮಾನ ವಿದ್ಯಮಾನಗಳಿಗೆ, ಸಮಸ್ಯೆಗಳಿಗೆ ಸಂಗೀತ ಪ್ರತಿಕ್ರಿಯಿಸುವ ಮೂಲಕ ಸ್ಪಂದಿಸಬೇಕು. ಕಲಾವಿದರ ಮತ್ತು ಸಭಿಕರ ಸಂತೋಷಕ್ಕಾಗಿ ಮಾತ್ರ ಸಂಗೀತ ಉಪಯೋಗವಾಗಬಾರದು. ಇದು ತಾರಾನಾಥ್ ಆಶಯವಾಗಿತ್ತು. ಅವರು ಸಹ ಹಾಗೇ ಬದುಕಿ ತೋರಿಸಿದರು ಎಂದರು.


ಅಂಶನ್ ಕುಮಾರ್ ಅವರು ಹೊರತಂದಿರುವ ರಾಜೀವ್ ತಾರಾನಾಥ್ ಬದುಕಿನ ‘ಎ ಲೈಫ್ ಇನ್ ಮ್ಯೂಸಿಕ್’ ಜೀವನ ಚಿತ್ರಗಳ ಸಾಕ್ಷೃಚಿತ್ರವನ್ನು ಪ್ರದರ್ಶಿಸಲಾಯಿತು. ಕುರಿ ನಾಟಕದ ಗೀತೆಗಳನ್ನು ಹಿರಿಯ ರಂಗಕರ್ಮಿ ಜನಾರ್ದನ್ ಜನ್ನಿ ಪ್ರಸ್ತುತಪಡಿಸಿದರು.


ಸಾಹಿತಿ ಜಯಂತ್ ಕಾಯ್ಕಿಣಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಡಾ.ಧರಣಿದೇವಿ ಮಾಲಗತ್ತಿ, ಪಂಡಿತ್ ನಯನ ಘೋಷ್ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net