

ಬಾಗಲಕೋಟೆ: ಸರ್ವಾಂಗೀಣ ಅಭಿವೃದ್ಧಿಯೊಂದಿಗೆ ಭಾರತ ಮತ್ತೆ ಜಗತ್ತಿಗೆ ವಿಶ್ವಗುರುವಾಗುವಲ್ಲಿ ಸಂದೇಹವಿಲ್ಲ ಎಂದು ಮಾಜಿ ಶಾಸಕ, ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ. ವೀರಣ್ಣ ಚರಂತಿಮಠ ಹೇಳಿದರು.
ನಗರದ ವಿದ್ಯಾಗಿರಿಯಲ್ಲಿ ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಯುವ ಮೋರ್ಚಾ ವತಿಯಿಂದ 76ನೇ ಸ್ವಾತಂತ್ರೋತ್ಸವ ಅಮೃತ ಮಹೋತ್ಸವದ ನಿಮಿತ್ತ ಸೋಮವಾರ ಹಮ್ಮಿಕೊಂಡಿದ್ದ ತಿರಂಗಾಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿಯವರ ಪರಿಶ್ರಮದ ಲವಾಗಿ ದೇಶ ಪ್ರಗತಿ ಪಥದತ್ತ ಸಾಗುತ್ತಿದೆ. ಆರ್ಥಿಕ, ಶೈಕ್ಷಣಿಕ, ಸಾಮಾಜಿಕ, ಔದ್ಯೋಗಿಕ, ತಂತ್ರಜ್ಞಾನಗಳ ಆವಿಷ್ಕಾರದೊಂದಿಗೆ ಆಧುನಿಕ ಭಾರತ ನಿರ್ಮಾಣಗೊಳ್ಳುತ್ತಿರುವುದು ಹೆಮ್ಮೆಯ ವಿಷಯ. ದೇಶದ ಯುವ ಜನತೆ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸಬೇಕು ಎಂದರು.
ಸಾವಿರಾರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸಾವಿರ ಮೀಟರ್ ಉದ್ದದ ಬೃಹತ್ ರಾಷ್ಟ್ರದ್ವಜ ಹಿಡಿದು ಮೆರವಣಿಗೆಯಲ್ಲಿ ಸಾಗಿದ್ದು ರೋಮಾಂಚನಗೊಳಿಸಿತು. ಬಸವೇಶ್ವರ ಇಂಜಿನಿಯರಿಂಗ್ ಕಾಲೇಜು ವೃತ್ತದಿಂದ ಆರಂಭವಾದ ಮೆರವಣಿಗೆ ವಿದ್ಯಾಗಿರಿಯ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಮರಳಿ ಇಂಜಿನಿಯರಿಂಗ್ ಕಾಲೇಜು ವೃತ್ತಕ್ಕೆ ತಲುಪಿತು. ಅಲ್ಲಿ ರಾಷ್ಟ್ರಗೀತೆ ಹಾಡುವ ಮೂಲಕ ತಿರಂಗಾಯಾತ್ರೆ ಸಮಾರೋಪಗೊಂಡಿತು.
ವಿಪ ಸದಸ್ಯ ನಾರಾಯಣಸಾ ಭಾಂಡಗೆ, ಬಿಟಿಡಿಎ ಮಾಜಿ ಅಧ್ಯಕ್ಷ ಜಿ.ಎನ್. ಪಾಟೀಲ, ರಾಜು ನಾಯ್ಕರ, ಬಸವರಾಜ ಯಂಕಂಚಿ, ಸುರೇಶ ಕೊಣ್ಣುರ, ಮಲ್ಲೇಶ ವಿಜಾಪುರ, ಕಲ್ಲಪ್ಪ ಭಗವತಿ, ಸದಾನಂದ ನಾರಾ, ಶೋಭಾ ರಾವ್, ರಾಜು ಮುದೆನೂರ, ಈರಣ್ಣ ಸರಗಣ್ಣವರ್, ರಾಜಕುಮಾರ ದೇಸಾಯಿ ಇದ್ದರು.