

ಮೈಸೂರು: ಪಶು ಸಂಗೋಪನಾ ಇಲಾಖೆ, ಅರಮನೆ ನಗರ ರೈತ ಉತ್ಪಾದಕರ ಸಂಘ, ಶ್ರೀಗಂಗಾ ಚಾರಿಟಬಲ್ ಟ್ರಸ್ಟ್‌ನಿಂದ ಹಂದಿ ಸಾಕಣೆ ಮತ್ತು ಎನ್‌ಎಲ್‌ಎಂ ಸಾಲ-ಸೌಲಭ್ಯದ ಕುರಿತು ಎರಡು ದಿನಗಳ ವಿಶೇಷ ಕಾರ್ಯಾಗಾರವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು.
ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ.ನಾಗರಾಜು ಮಾತನಾಡಿ, ಮೈಸೂರು ಜಿಲ್ಲೆಯಲ್ಲಿ 7ಸಾವಿರಕ್ಕೂ ಹೆಚ್ಚು ಹಂದಿಗಳನ್ನು ಸಾಕಣೆ ಮಾಡಲಾಗುತ್ತಿದೆ. ಹಂದಿ ಮಾಂಸಕ್ಕೆ ವಿಶ್ವದಲ್ಲಿಯೇ ಅತಿ ಹೆಚ್ಚು ಬೇಡಿಕೆ ಇದ್ದು, ಎರಡನೇ ಅತಿ ದೊಡ್ಡ ಮಾಂಸ ಉದ್ಯಮವಾಗಿ ಗುರುತಿಸಿಕೊಂಡಿದೆ ಎಂದರು.
ಹಿಂದೆ ಹಂದಿ ಸಾಕಣೆ ಮಾಡುವವರನ್ನು ಕೀಳಾಗಿ ಕಾಣುತ್ತಿದ್ದರು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಹಂದಿ ಸಾಕಣೆ ಉದ್ಯಮವಾಗಿ ಒಂದು ಸೀಮಿತವಾಗದೆ ಬೆಳೆದು ನಿಂತಿದೆ. ಉತ್ತರ ಭಾರತದಲ್ಲಿ ಹಂದಿ ಸಾಕಾಣಿಕೆ ಹೆಚ್ಚಾಗಿದೆ. ಫಾರಂಗಳನ್ನು ಸಾಕಾಣಿಕೆ ಮಾಡುತ್ತಿರುವುದಂತೂ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹಂದಿ ಸಾಕಣೆ ಮಾರುಕಟ್ಟೆ ವ್ಯಾಪ್ತಿ ವಿಶಾಲವಾಗಿದೆ. ಹಾಸನ, ಮಂಡ್ಯ ಹಾಗೂ ಇನ್ನಿರ ಜಿಲ್ಲೆಗಳಿಂದ ಹೊರದೇಶಗಳಿಗೂ ಹಂದಿಗಳ ರಪ್ತು ಮಾಡಲಾಗುತ್ತಿದೆ. ಕಡಿಮೆ ಬಂಡವಾಳ ಹೂಡಿಕೆ ಮಾಡಿ, ಹೆಚ್ಚು ಲಾಭ ಪಡೆಯುವ ಏಕೈಕ ಉದ್ಯಮ ಇದಾಗಿದೆ. ಹಂದಿ ಸಾಕಣೆಗೆ ಸರ್ಕಾರದಿಂದ ಆರ್ಥಿಕ ನೆರವು ನೀಡಲಿದ್ದು, ಪಶು ವೈದ್ಯರ ಸಲಹೆಯಂತೆ ಮಾರ್ಗದರ್ಶನ ಪಡೆದು ಸಾಕಾಣಿಕೆ ಮಾಡಿದರೆ ಸೂಕ್ತ ಎಂದು ತಿಳಿಸಿದರು.
ಉಪನಿರ್ದೇಶಕ ಡಾ.ಶಿವಲಿಂಗಯ್ಯ ಮಾತನಾಡಿ, ಹಂದಿ ಸಾಕಣೆಯಲ್ಲಿ ನಿರ್ವಹಣೆ ಕಡಿಮೆ. ಆದಾಯ ಜಾಸ್ತಿ. ಕೇವಲ 20 ಕುಂಟೆ ಜಮೀನಿದ್ದರೂ ಹಂದಿ ಫಾರ್ಮ್ ಮಾಡಬಹುದು. ಉಳಿಕೆ ಆಹಾರ ತಿಂದು ಹೆಚ್ಚು ಆದಾಯ ಕೊಡುತ್ತದೆ. 100 ಹೆಣ್ಣು ಮತ್ತು 10 ಗಂಡು ಹಂದಿ ಸಾಕಣೆ ಗೆ ಎನ್‌ಎಲ್‌ಎಂ ಯೋಜನೆಯಡಿ 60 ಲಕ್ಷ ರೂ. ಸಾಲ-ಸೌಲಭ್ಯ ದೊರೆಯುತ್ತದೆ. ಅದರಲ್ಲಿ 30 ಲಕ್ಷ ಅಂದರೆ ಶೇ.50 ರಷ್ಟು ಸಬ್ಸಿಡಿ ಪಡೆಯಬಹುದು. ವೈಜ್ಞಾನಿಕ ಹಂದಿ ಸಾಕಣೆ ಅನುಸರಿಸಿ, ಹಂದಿಗಳಿಗೆ ಯಾವುದೇ ರೋಗ ಬಾರದಂತೆ ಲಸಿಕೆ ನೀಡಬೇಕು ಎಂದು ಮಾಹಿತಿ ನೀಡಿದರು.
ಬಳಿಕ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಸುಮಾರು 100ಕ್ಕೂ ಹೆಚ್ಚು ರೈತರಿಗೆ ಪ್ರಮಾಣ ಪತ್ರ ನೀಡಿ ಅಭಿನಂದಿಸಲಾಯಿತು. ಅರಮನೆ ನಗರಿ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷೆ ಸಾವಿತ್ರಿ, ಉಪಾಧ್ಯಕ್ಷ ಸೋಮಣ್ಣ, ನಿರ್ದೇಶಕ ರವಿಕುಮಾರ್ ಹಂದಿ ಸಾಕಣೆ ಕುರಿತು ಮಾಹಿತಿ ಹಂಚಿಕೊಂಡರು.
ಶ್ರೀಗಂಗಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ರಾಜ್‌ಕಾಮಯ್ಯ, ಕಾರ್ಯದರ್ಶಿ ದಿವ್ಯಾಶ್ರೀ, ನಿರ್ದೇಶಕರಾದ ಚಂದ್ರಶೇಖರ್, ಚಿಕ್ಕಲಿಂಗೇಗೌಡ, ಸಿಬ್ಬಂದಿ ರಚನಾ, ನವ್ಯಾಶ್ರಿ, ಚಾಂದಿನಿ, ಶಶಾಂಕ್ ಇತರರು ಇದ್ದರು.