

ಹುಣಸೂರು: ತಂಬಾಕು ಕೃಷಿಯಲ್ಲಿ ಕಡಿಮೆ ಪ್ರದೇಶದಲ್ಲಿ ಹೆಚ್ಚಿನ ಇಳುವರಿ ಪಡೆಯಬಹುದಾದ ಸಾಧ್ಯತೆ ಹೆಚ್ಚಿದ್ದು, ಕೃಷಿ ಪದ್ಧತಿಯಲ್ಲಿನ ನೂತನ ಆವಿಷ್ಕಾರಗಳನ್ನು ರೈತರು ಬಳಸಿಕೊಳ್ಳಬೇಕು ಎಂದು ಕೇಂದ್ರೀಯ ತಂಬಾಕು ಸಂಶೋಧನಾ ಕೇಂದ್ರದ(ಸಿಟಿಆರ್‌ಐ) ಮುಖ್ಯಸ್ಥ ಡಾ.ಎಸ್.ರಾಮಕೃಷ್ಣನ್ ಸಲಹೆ ನೀಡಿದರು.
ನಗರದ ಸಿಟಿಆರ್‌ಐ ಕೇಂದ್ರದಲ್ಲಿ ಶನಿವಾರ ಪೂರ್ವ ಮುಂಗಾರಿನ ಸಮಯದಲ್ಲಿ ತಂಬಾಕು ಕೃಷಿಕರು ನಿರ್ವಹಿಸಬೇಕಾದ ಕ್ರಮಗಳ ಕುರಿತು ತರಬೇತಿ ಹಾಗೂ ಪರಿಶಿಷ್ಟ ಜಾತಿ ಉಪಯೋಜನೆಯಡಿ ಕೃಷಿ ಸಲಕರಣೆಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಡಿಮೆ ಪ್ರದೇಶದಲ್ಲಿ ವೈಜ್ಞಾನಿಕ ರೀತಿಯನ್ನು ಅನುಸರಿಸಿದಲ್ಲಿ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯ. ಕೃಷಿ ಇಂದು ದುಬಾರಿಯಾಗುತ್ತಿದೆ ಎನ್ನುವ ನಾವು ಹೊಸತನವನ್ನು ಅಳವಡಿಸಿಕೊಳ್ಳದೇ ದುಬಾರಿ ಎನ್ನುವುದು ಸರಿಯಲ್ಲ. ನಾಟಿ ಮಾಡುವ ವಿಧಾನ, ಗೊಬ್ಬರಗಳ ನಿರ್ವಹಣೆ, ಕುಡಿ, ಕಂಕುಳ ಕುಡಿನಿರ್ವಹಣೆ, ಹದಗೊಳಿಸುವ ಪರಿ, ಎಲ್ಲವೂ ಹೊಸತನದ ಆವಿಷ್ಕಾರಗಳನ್ನು ಒಳಗೊಂಡಿದೆ. 40 ವರ್ಷಗಳ ಹಿಂದಿನ ಪದ್ಧತಿ ಇಂದು ಅನುಸರಿಸಲು ಸಾಧ್ಯವಿಲ್ಲ. ಈ ಎಲ್ಲ ವಿಷಯಗಳ ಕುರಿತು ರೈತರು ಸಿಟಿಆರ್‌ಐ ವಿಜ್ಞಾನಿಗಳ ಸಲಹೆ ಪಡೆಯುವುದು ಅಗತ್ಯ. ಇದೀಗ ಮಳೆ ಮತ್ತು ಬಿಸಿಲಿನ ಆಟದ ನಡುವೆ ರೈತರು ಗುಣಮಟ್ಟದ ಎಲೆಗಳನ್ನು ಪಡೆಯಲು ಪೊಟ್ಯಾಷ್ ರಾಸಾಯನಿಕವನ್ನು ಹೊಂದಿರುವ ಟಿಮಾಸ್ಪ್ರೇ ಕೆ ಔಷಧವನ್ನು ಗಿಡಗಳಿಗೆ ಸಿಂಪಡಿಸುವ ಮೂಲಕ ಇಳುವರಿ ಮತ್ತು ಗುಣಮಟ್ಟದಲ್ಲಿ ಸುಧಾರಣೆ ಕಂಡುಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ತಂಬಾಕು ಮಂಡಳಿ ಮೈಸೂರು ವಿಭಾಗದ ಪ್ರಾದೇಶಿಕ ವ್ಯವಸ್ಥಾಪಕ ಗೋಪಾಲ್ ಮಾತನಾಡಿ, ರೈತರು ತಂಬಾಕು ಸಸಿಗಳಿಗೆ ರೋಗಬಾಧೆ ಕಂಡುಬಂದಾಗ ಸಿಟಿಆರ್‌ಐ ವಿಜ್ಞಾನಿಗಳು ತಿಳಿಸಿದ ರೀತಿಯಲ್ಲೇ ಔಷಧೋಪಚಾರ ನಡೆಸುವುದು ಸೂಕ್ತ ಎಂದರು.
ಐಟಿಸಿ ಕಂಪನಿಯ ಮ್ಯಾನೇಜರ್ ಶ್ರೀನಿವಾಸರೆಡ್ಡಿ, ಹರಾಜು ಮಾರುಕಟ್ಟೆಯ ಹರಾಜು ಅಧೀಕ್ಷಕ ಸಿದ್ದರಾಜು ಮಾತನಾಡಿದರು. ಹಿರಿಯ ವಿಜ್ಞಾನಿ ಡಾ.ರಾಘವೇಂದ್ರ, ಸುರೇಶ್ ಬಾಬು, ಶರವಣ ಕುಮಾರ್, ಸುರೇಶ್ ಕುಮಾರ್, ಶರೀಫ್, ತಾಂತ್ರಿಕ ಅಧಿಕಾರಿಗಳು ಮತ್ತು ಕುಪ್ಪೆ, ಬನ್ನಿಕುಪ್ಪೆ, ಕೊಳಗಟ್ಟ ಗ್ರಾಮಗಳ ವ್ಯಾಪ್ತಿಯ ಪರಿಶಿಷ್ಟ ಜಾತಿಯ ತಂಬಾಕು ಬೆಳೆಗಾರರು ಭಾಗವಹಿಸಿದ್ದರು. 100ಕ್ಕೂ ಹೆಚ್ಚು ರೈತರಿಗೆ ಟಾರ್ಪಾಲಿನ್‌ಗಳನ್ನು ಉಚಿತವಾಗಿ ವಿತರಿಸಲಾಯಿತು.