ವೈಜ್ಞಾನಿಕ ಕೃಷಿಯಿಂದ ಅಧಿಕ ಲಾಭ

ವೈಜ್ಞಾನಿಕ ಕೃಷಿಯಿಂದ ಅಧಿಕ ಲಾಭ
Published on

ಆಲೂರು: ಎಲ್ಲ ಕ್ಷೇತ್ರದಲ್ಲೂ ಲಾಭ, ನಷ್ಟ ಇದ್ದದ್ದೇ, ಕೃಷಿಯಲ್ಲೂ ನಷ್ಟ ಸಂಭವಿಸಬಹುದು. ಆದರೆ, ಶ್ರದ್ಧೆಯಿಂದ ವೈಜ್ಞಾನಿಕ ರೀತಿಯಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ ಖಚಿತವಾಗಿ ಲಾಭಗಳಿಸಬಹುದು ಎಂಬುದಕ್ಕೆ ಹರಿಹಳ್ಳಿ ರಘು (ಗೋಪಾಲ್) ಸಾಕ್ಷಿಯಾಗಿದ್ದಾರೆ.

ತಾಲೂಕಿನ ಕೆಂಚಮ್ಮ ಹೊಸಕೋಟೆ ಹೋಬಳಿಯ ಹರಿಹಳ್ಳಿ ದಿವಂಗತ ಧರ್ಮೇಗೌಡ, ತಂಗ್ಯಮ್ಮ ಅವರ ಪುತ್ರ ರಘು(ಗೋಪಾಲ್) ದ್ವಿತೀಯ ಪಿಯುಸಿಯಲ್ಲಿ ಅನುತ್ತೀರ್ಣರಾದರೂ ಕೂಡ ಕೃಷಿ ಚಟುವಟಿಕೆಯಲ್ಲಿ ಶ್ರದ್ಧೆಯಿಂದ ತೊಡಗಿಸಿಕೊಳ್ಳುವ ಮೂಲಕ ಸಾಧನೆ ಮಾಡಿದ್ದಾರೆ. ತಮ್ಮ 10 ಎಕರೆ ಜಮೀನಿನಲ್ಲಿ ಸಾವಯವ ಪದ್ಧತಿಯಲ್ಲಿ ಬೆಳೆ ಬೆಳೆದು ಬದುಕು ಕಟ್ಟಿಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಶಿಕ್ಷಣದಿಂದ ಹೊರಬಿದ್ದ ಬಳಿಕ ಟಿಂಬರ್ ಕೆಲಸ, ಭತ್ತದ ವ್ಯಾಪಾರ, ಸಣ್ಣಪುಟ್ಟ ಗುತ್ತಿಗೆ ಕೆಲಸದಲ್ಲಿ ತೊಡಗಿಸಿಕೊಳ್ಳುವ ಮೂಲಕ ಹಣ ಸಂಪಾದಿಸಿ 10 ಎಕರೆ ಜಮೀನು ಕೊಂಡುಕೊಂಡು ಸಾವಯವ ಪದ್ಧತಿಯಲ್ಲಿ ಕೃಷಿ ಚಟುವಟಿಕೆ ನಡೆಸುತ್ತಿದ್ದಾರೆ.

ಏಲಕ್ಕಿ, ಕಾಫಿ, ಬಾಳೆ, ದಾಳಿಂಬೆ, ಚಕ್ಕೋತಾ, ಮೂಸಂಬಿ, ನಿಂಬೆ, ಪಪ್ಪಾಯ, ಸಪೋಟ, ಸೀತಾಫಲ, ಬೆಣ್ಣೆಹಣ್ಣು, ಸೀಬೆ, ಪನ್ನೇರಳೆ, ಜಂಬು ನೇರಳೆ, ಅಂಜೂರ, ವಿವಿಧ ಬಗೆಯ ಹಣ್ಣು, ತರಕಾರಿಗಳು ಹಾಗೂ ಭತ್ತ, ಹೆಸರು, ಸೋಯಾಬಿನ್, ಕಡಲೆ ಬೆಳೆದಿದ್ದಾರೆ. ಜಮೀನಿಗೆ ಅಗತ್ಯವಿರುವ ಜೀವಾಮೃತ, ಅಮೈನೊ ಆಸಿಡ್, ಝಿಬ್ರಾಲಿಕ್, ಅಗ್ನಿಹೋತ್ರಾ ಬೂದಿ, ದಶಪರ್ಣಿ(ಕೀಟನಾಶಕ), ಪಂಚಗವ್ಯವನ್ನು ಬೆಳೆಗಳನ್ನು ಬೆಳೆಯಲು ಬಳಸುತ್ತಿದ್ದಾರೆ.

ಕಾಫಿ, ಏಲಕ್ಕಿ ಬೆಳೆಗಳಿಂದ ವಾರ್ಷಿಕ 55 ಲಕ್ಷ ರೂ. ಆದಾಯ ಗಳಿಸುತ್ತಿದ್ದು, ಇವರ ಕೃಷಿ ಕಾಯಕಕ್ಕೆ ಪತ್ನಿ ಅಕಿಲಾ ಕೂಡ ಬೆನ್ನೆಲುಬಾಗಿ ನಿಂತಿದ್ದಾರೆ.

ಉತ್ತಮ ಕೃಷಿಕ ಪ್ರಶಸ್ತಿ: ರಘು ಅವರ ಕೃಷಿ ಸಾಧನೆ ಗುರುತಿಸಿ ಕೆಂಚಮ್ಮ ಹೊಸಕೋಟೆ ಹೋಬಳಿಯ ರೈತ ಸಂಘ ಹಾಗೂ ಕೃಷಿ ಇಲಾಖೆ, ರೈತ ಸಂಪರ್ಕ ಕೇಂದ್ರ ವತಿಯಿಂದ ಉತ್ತಮ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 2019-24ರವರೆಗೆ ಆಲೂರು ತಾಲೂಕಿನ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷರಾಗಿ ಹಾಗೂ ಹಾಸನಾಂಬ ದೇವಿಯ ಹಿರಿಯ ಸಹೋದರಿ ಶ್ರೀ ಕೆಂಚಾಂಬ ದೇವಿಯ ಟ್ರಸ್ಟ್ ಅಧ್ಯಕ್ಷರಾಗಿ ಕೂಡ ರಘು ಸೇವೆ ಸಲ್ಲಿಸಿದ್ದಾರೆ.

ಹಿರಿಯರ ಮಾರ್ಗದರ್ಶನ: ತಂದೆಯ ಸ್ಫೂರ್ತಿದಾಯಕ ಮಾತುಗಳಿಂದ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದ್ದೇನೆ. ಸೋಲೇ ಯಶಸ್ಸಿನ ಮೊದಲ ಮೆಟ್ಟಿಲು ಎಂದು ತಂದೆಯವರು ಹೇಳುತ್ತಿದ್ದರು. ಆ ಮಾತು ನಷ್ಟದ ಸಂದರ್ಭದಲ್ಲಿ ಎದೆಗುಂದದೆ ಸಾಧನೆ ಹಾದಿಯಲ್ಲಿ ಸಾಗಲು ಸಾಧ್ಯವಾಗಿಸಿದೆ. ಕೃಷಿಯಲ್ಲಿ ಡಾಕ್ಟರೇಟ್ ಪಡೆದ ಹೊಂಕರಳ್ಳಿ ಗ್ರಾಮದ ಧರ್ಮರಾಜ್ ಅವರ ಮಾರ್ಗದರ್ಶನ ಕೂಡ ಕೃಷಿಯಲ್ಲಿ ಸಾಧನೆ ಮಾಡಿಸಲು ಕಾರಣವಾಗಿದೆ ಎನ್ನುತ್ತಾರೆ ಹರಿಹಳ್ಳಿ ಗ್ರಾಮದ ರಘು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net