ಸಾವಯವ ಕೃಷಿಯಿಂದ ಅಧಿಕ ಆದಾಯ

Oplus_16908288
Oplus_16908288
Published on

ನಂಜನಗೂಡು: ತಾಲೂಕಿನ ಮಸಗೆ ಗ್ರಾಮದ ಜಿ.ಎಸ್. ನಾಗರಾಜು ಆರು ಎಕರೆ ಜಮೀನಿನಲ್ಲಿ ಸಾವಯವ ಪದ್ಧತಿ ಮೂಲಕ ನೈಸರ್ಗಿಕ ಕೃಷಿ ಮಾಡಿ ವಾರ್ಷಿಕ ಲಕ್ಷಾಂತರ ರೂ. ಆದಾಯ ಗಳಿಸುತ್ತಿದ್ದಾರೆ.

ಒಟ್ಟು 6 ಎಕರೆ ಪ್ರದೇಶದಲ್ಲಿ ಒಂದು ನೂರು ತೆಂಗಿನ ಮರಗಳು, 33 ಮಾವಿನ ಮರ, 20 ಸಪೋಟ, 20 ನಿಂಬೆ, ಸೀತಾಫಲ, ಅಂಜೂರ, ಚಕೋತ, ಹಲಸು, ಕಿತ್ತಳೆ, ಅಡಿಕೆ, ಚೈನಾ ಸೀಬೆ, ದಾಲ್ಚಿನಿ, ಇಂಗು, ಲವಂಗ, ಸೇಬು, ವಾಟರ್ ಆ್ಯಪಲ್, ರಕ್ತ ಚಂದನ, ರಬ್ಬರ್, ಕಾಫಿ, ನೇರಳೆ, ಆಸ್ಟ್ರೇಲಿಯನ್ ಸೀಬೆ, ಪುನರ್ಪುಳಿ, ಕರಿಮೆಣಸು, ಬಾದಾಮಿ, ಅಶ್ವಗಂಧ ಸೇರಿದಂತೆ ಒಂದು ಸಾವಿರಕ್ಕೂ ಹೆಚ್ಚು ಗಿಡಗಳನ್ನು ಬೆಳೆಸಿದ್ದಾರೆ. ಇದರಿಂದ ಕಳೆದ ವರ್ಷ ನಾಲ್ಕು ಲಕ್ಷರೂ ಆದಾಯ ಗಳಿಸಿದ್ದಾರೆ.

ಇತ್ತೀಚೆಗೆ ಆಧುನಿಕತೆ ಮತ್ತು ಕಾರ್ಮಿಕರ ಕೊರತೆ, ಅಧಿಕ ವೆಚ್ಚದಿಂದಾಗಿ ಯುವಕರು ಕೃಷಿ ಮಾಡುವುದು ಕಡಿಮೆಯಾಗಿದೆ. ಆದರೆ, ನಾಗರಾಜು ನಂಜನಗೂಡಿನ ಪೇಪರ್ ಮಿಲ್ ಕಾರ್ಖಾನೆಯಲ್ಲಿ ಪ್ರಧಾನ ವ್ಯವಸ್ಥಾಪಕರಾಗಿದ್ದರೂ ಕೂಡ ಕೃಷಿ ಮಾಡುವುದನ್ನು ಬಿಟ್ಟಿಲ್ಲ. ನೈಸರ್ಗಿಕ ಕೃಷಿ ಮಾಡುವುದು ತಮ್ಮ ಕೆಲಸಕ್ಕೆ ತೊಂದರೆಯಾಗದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಲಕ್ಷ ಲಕ್ಷ ಆದಾಯ ನೈಸರ್ಗಿಕ ಕೃಷಿ ಮಾಡುತ್ತಿದ್ದರೂ ಆದಾಯಕ್ಕೆ ಹೊಡೆತ ಬೀಳುತ್ತಿಲ್ಲ. ಬಾಳೆ, ವಿವಿಧ ಸ್ಥಳೀಯ ಮಾವು, ಅಡಕೆ, ತೆಂಗು, ನಿಂಬೆ ಮತ್ತು ಇತರೆ ಬೆಳೆಗಳಿಂದ ವಾರ್ಷಿಕವಾಗಿ ನಾಲ್ಕು ಲಕ್ಷ ರೂ. ಆದಾಯ ಗಳಿಸುತ್ತಿದ್ದಾರೆ. ಇರುವ 6 ಎಕರೆ ಜಮೀನಿಗೆ ಇದುವರೆಗೂ ಒಂದೇ ಒಂದು ಕಾಳು ರಾಸಾಯನಿಕ ಗೊಬ್ಬರವನ್ನು ಬಳಕೆ ಮಾಡಿಲ್ಲ. ಕೊಟ್ಟಿಗೆ ಗೊಬ್ಬರದ ಜತೆಗೆ ಜೀವಾಮೃತ ತಯಾರಿಸಿ ಬಳಕೆ ಮಾಡುತ್ತಾರೆ. ಇದರಿಂದ ಇವರ ಜಮೀನಿನಲ್ಲಿ ಯಾವುದೇ ಭಾಗದಲ್ಲೂ ಕೆದಕಿ ನೋಡಿದರೂ ಸಹ ಎರೆಹುಳಗಳು ಕಾಣ ಸಿಗುತ್ತವೆ. ಇದರ ಜತೆಗೆ ನೀರಿನ ವ್ಯವಸ್ಥೆಗಾಗಿ ಎರಡು ಬೋರ್‌ವೆಲ್‌ಗಳನ್ನ ಕೊರೆಸಿಕೊಂಡಿದ್ದು, ಹನಿ ನೀರಾವರಿ ಪದ್ಧತಿ ಮೂಲಕ ನೀರುಣಿಸುತ್ತಿದ್ದಾರೆ. ಮನೆ ಬಳಕೆಗೆ ತರಕಾರಿ ಪ್ರತಿನಿತ್ಯ ತಮ್ಮ ಮನೆ ಬಳಕೆಗೆ ಬೇಕಾದ ಟೊಮ್ಯೋಟೊ, ಬದನೆಕಾಯಿ, ಬೆಂಡೆಕಾಯಿ, ಅವರೆಕಾಯಿ, ಬೀನ್ಸ್ ಸೇರಿದಂತೆ ಎಲ್ಲ ಬಗೆಯ ತರಕಾರಿಗಳನ್ನು ಬೆಳೆದುಕೊಳ್ಳುವ ಜೊತೆಗೆ, ಮನೆ ಬಳಕೆ ಹಾಗೂ ಬೋರ್‌ವೆಲ್‌ಗಳ ಬಳಕೆಗೆ ಸೋಲಾರ್ ವ್ಯವಸ್ಥೆ ಕಲ್ಪಿಸಿಕೊಂಡಿದ್ದಾರೆ. ಇವುಗಳ ಜತೆಗೆ ಗೋಬರ್ ಗ್ಯಾಸ್ ಉಪಯೋಗಿಸಿ ಅಡುಗೆ ತಯಾರು ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಮನೆ ಬಳಕೆಯ ಶೇ.90ರಷ್ಟ ಖರ್ಚು ಉಳಿತಾಯವಾಗುತ್ತಿದೆ. ಕೃಷಿ ಸಂಶೋಧನಾ ಕೇಂದ್ರವಾದ ಜಮೀನು ತಮ್ಮ ಬಳಿ ಇರುವ ಜಮೀನನ್ನು ಒಂದು ಕೃಷಿ ಸಂಶೋಧನಾ ಕೇಂದ್ರ ಮಾಡಿಕೊಂಡಿದ್ದಾರೆ. ಇವರು ಎಂಬಿಎ, ಎಲ್‌ಎಲ್‌ಬಿ, ಓದಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಕಾರ್ಖಾನೆ ಸ್ಥಳದಲ್ಲಿ ಗಿಡಮರಗಳನ್ನು ಬೆಳೆಸುವ ಕೆಲಸಕ್ಕೆ ಮುಂದಾದರು. ಆ ನಂತರ ಇವರಿಗೆ ಒಂದು ಆಲೋಚನೆ ಬಂದು ಜಮೀನು ಖರೀದಿಸಿ ದೇಶ, ವಿದೇಶಗಳಿಂದ ವಿವಿಧ ಜಾತಿಯ ಗಿಡಗಳನ್ನು ತಂದು ಜಮೀನಿನಲ್ಲಿ ನೆಟ್ಟು ಸಂಶೋಧನೆಯಲ್ಲಿ ತೊಡಗಿದ್ದಾರೆ. ಇದರೊಂದಿಗೆ ಆಯುರ್ವೇದಕ್ಕೆ ಸಂಬಂಧಿಸಿದ ಹಲವಾರು ಗಿಡಗಳು ಇಲ್ಲಿವೆ. ತರಕಾರಿ, ಕಬ್ಬು, ಬಾಳೆ ಸೇರಿದಂತೆ ವಿವಿಧ ಬೆಳೆ ಬೆಳೆಯುವ ರೈತರ ನಡುವೆ ನೈಸರ್ಗಿಕ ಕೃಷಿ ಮಾಡಿ ಲಕ್ಷಾಂತರ ರೂ. ಆದಾಯ ಗಳಿಸಬಹುದು ಎಂಬುದನ್ನು ಇವರು ತೋರಿಸಿಕೊಟ್ಟಿದ್ದಾರೆ.

ಈ ಕಾರ್ಖಾನೆಗೂ ಮುಂಚೆ ಮತ್ತೊಂದು ಖಾಸಗಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಾರ್ಖಾನೆಗೆ ಸಂಬಂಧಿಸಿದ ಉದ್ಯಾನ ಬದಲಾವಣೆ ಮಾಡುವ ಕೆಲಸದಲ್ಲಿ ನಿರತನಾದೆ. ಅಲ್ಲಿಯವರೆಗೂ ಕೃಷಿಯ ಬಗ್ಗೆ ಆಸಕ್ತಿ ಇರಲಿಲ್ಲ. ಉದ್ಯಾನದ ಕೆಲಸ ಮಾಡುವಾಗ ಕೃಷಿಯ ಬಗ್ಗೆ ಆಸಕ್ತಿ ಹೆಚ್ಚಾಯಿತು. ಬಳಿಕ ನಂಜನಗೂಡಿನ ಬಳಿ ಜಮೀನು ಖರೀದಿಸಿ, ವಿವಿಧ ರೀತಿಯ ತೋಟಗಾರಿಕಾ ಬೆಳೆಗಳನ್ನು ನೈಸರ್ಗಿಕವಾಗಿ ಬೆಳೆಯುತ್ತಿದ್ದೇನೆ. ಈಗಾಗಲೇ ಬೆಳೆದಿರುವ ಎಲ್ಲ ಮರಗಳು ಆದಾಯದ ಹಂತಕ್ಕೆ ಬಂದು ತಲುಪಿವೆ. ನೈಸರ್ಗಿಕ ಕೃಷಿಯಿಂದಲೂ ಹಣ ಸಂಪಾದಿಸಬಹುದು. ಜಿ.ಎಸ್. ನಾಗರಾಜ್ ರೈತರು, ಮಸಗೆ ಗ್ರಾಮ ಇವರ ಜಮೀನಿಗೆ ಹಲವಾರು ಬಾರಿ ಭೇಟಿ ನೀಡಿ ತಿಳಿದುಕೊಂಡಿದ್ದೇನೆ. ಆದಾಯದ ಉದ್ದೇಶಕ್ಕಾಗಿ ಇವರು ಕೃಷಿ ಮಾಡುತ್ತಿಲ್ಲ. ಆದರೂ, ಕೂಡ ಕೃಷಿಯಿಂದ ಅಧಿಕ ಆದಾಯ ಪಡೆಯುತ್ತಿದ್ದಾರೆ. ಇವರು ಕೃಷಿಯಲ್ಲಿ ಹೆಚ್ಚಿನ ಆಸಕ್ತಿ ಇರುವ ಕಾರಣ ಪ್ರತಿಯೊಂದು ಗಿಡಗಳ ಬಗ್ಗೆ ಪುಸ್ತಕಗಳಲ್ಲಿ ಓದಿ ತಿಳಿದುಕೊಂಡು ತಮ್ಮ ಜಮೀನಿನಲ್ಲಿಯೇ ಸಂಶೋಧನೆಯನ್ನು ಮಾಡುತ್ತಿದ್ದಾರೆ. ನನ್ನನ್ನು ಸೇರಿದಂತೆ ಇತರ ರೈತರು ಕೃಷಿ ಮಾಡುವಾಗ ಇವರ ಮಾರ್ಗದರ್ಶನ ಪಡೆದುಕೊಂಡು ಕೃಷಿ ಮಾಡುತ್ತಾರೆ. ಸೋಮಶೇಖರ ಮೂರ್ತಿ ನಂಜನಗೂಡು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net