

ಮೈಸೂರು: ನೈಸರ್ಗಿಕವಾಗಿ ದೊರಕುವ ಪರಿಕರಗಳನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳುವುದರಿಂದ ಹೆಚ್ಚಿನ ಆದಾಯ ಗಳಿಸಬಹುದು ಎಂದು ಪ್ರಗತಿಪರ ರೈತ ಜಯರಾಮ್ ತಿಳಿಸಿದರು.
ಮುಖ್ಯಮಂತ್ರಿಗಳ ನೈಸರ್ಗಿಕ ಕೃಷಿ ಯೋಜನೆಯಡಿ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯವು ಎಚ್.ಡಿ.ಕೋಟೆ ತಾಲೂಕು ಮಾಗುಡಿಲು ಗ್ರಾಮದ ನಾಗರಾಜ್ ಅವರ ಚಿಯಾ, ಭತ್ತ ಮತ್ತು ಬಾಳೆ ಬೆಳೆ ತೋಟದಲ್ಲಿ ಸೋಮವಾರ ಆಯೋಜಿಸಿದ್ದ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಸಾಯನಿಕ ಕೃಷಿಯಿಂದಾಗುವ ಅಡ್ಡ ಪರಿಣಾಮಗಳನ್ನು ಕಡಿಮೆ ಮಾಡಲು ಮತ್ತು ವ್ಯವಸಾಯಕ್ಕೆ ಹೆಚ್ಚಿನ ಹಣ ಬಳಸದೆ ನೈಸರ್ಗಿಕವಾಗಿ ದೊರಕುವ ಪರಿಕರಗಳನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಸಹ ಸಂಶೋಧಕ ಡಾ.ಬಾಲಾಜಿ ನಾಯಕ್ ಮಾತನಾಡಿ, ಹೆಚ್ಚಿನ ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಮಣ್ಣಿನ ಫಲವತ್ತತೆ ಕುಂಠಿತಗೊಳ್ಳುತ್ತಿದೆ. ಇದನ್ನು ತಪ್ಪಿಸಲು ಸಾಂಪ್ರದಾಯಿಕ ಕೃಷಿಗೆ ಹೆಚ್ಚಿನ ಒತ್ತು ನೀಡಬೇಕು. ಈ ಯೋಜನೆಯ ಸದುಪಯೋಗವನ್ನು ಎಲ್ಲ ರೈತರು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಪ್ರಗತಿಪರ ರೈತ ಗಂಗಾಧರ್, ನೈಸರ್ಗಿಕ ಕೃಷಿಯ ಅಳವಡಿಕೆಯಿಂದಾಗುವ ಉಪಯೋಗಗಳ ಬಗ್ಗೆ ತಿಳಿಸಿದರು.
ರೈತರಾದ ಶ್ರೀನಿವಾಸ ಮತ್ತು ಮುದ್ದೆರಾಮೇಗೌಡ ಮಾತನಾಡಿ, ನೈಸರ್ಗಿಕ ಕೃಷಿ ಉತ್ಪನ್ನಗಳ ಮಾರುಕಟ್ಟೆಯ ಬಗ್ಗೆ ತಿಳಿಸಿಕೊಟ್ಟರು. ವಿಶ್ವವಿದ್ಯಾಲಯದ ಸಹಸಂಶೋಧಕ ಡಾ.ಎಸ್.ಕೆ.ಆದರ್ಶ ಯೋಜನೆಯ ಬಗ್ಗೆ ಸವಿಸ್ತಾರವಾಗಿ ತಿಳಿಸಿ, ನೈಸರ್ಗಿಕವಾಗಿ ದೊರಕುವ ಪರಿಕರಗಳನ್ನು ಉಪಯೋಗಿಸಿ ಕೀಟ-ಪೀಡೆಗಳ ನಿರ್ವಹಣೆಯ ಬಗ್ಗೆ ಮಾಹಿತಿ ನೀಡಿದರು.