

ಚಿಕ್ಕಬಳ್ಳಾಪುರ: ಭಾರತ ದೇಶದ ಕಟ್ಟಕಡೆಯ ವ್ಯಕ್ತಿಗೆ ಮತದಾನದ ಹಕ್ಕು ಕೊಡಬೇಕೆಂಬ ಆಶಯದೊಂದಿಗೆ ಸಂವಿಧಾನವನ್ನು ರಚಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಕನಸುಗಳು ನನಸಾಗುತ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಬೇಸರಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಆವರಣದಲ್ಲಿ ಜಿಲ್ಲಾಡಳಿತ, ಜಿ.ಪಂ, ಸಮಾಜ ಕಲ್ಯಾಣ ಇಲಾಖೆಯು ನನ್ನ ಮತ ನನ್ನ ಹಕ್ಕು ಶೀರ್ಷಿಕೆಯೊಂದಿಗೆ "ಅಂತಾರಾಷ್ಟೀಯ ಪ್ರಜಾಪ್ರಭುತ್ವ ದಿನಾಚರಣೆ" ಅಂಗವಾಗಿ ಕೈಗೊಂಡಿದ್ದ ಪ್ರಜಾಪ್ರಭುತ್ವ ದಿನಾಚರಣೆ ಹಾಗೂ ಸೈಕಲ್ ರ್ಯಾಲಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಮತದಾರರು ಹಲವು ಆಸೆ ಆಮಿಷಗಳಿಗೆ ಒಳಗಾಗುತ್ತಿರುವ ಕಾರಣ ಜನತಂತ್ರದ ಆಶಯ ಈಡೇರುತ್ತಿಲ್ಲ. ಮತದಾರರು ದೇಶಕ್ಕೆ ಏನು ಬೇಕೆಂಬುದನ್ನು ಗ್ರಹಿಸಲು ವಿಫಲರಾಗುತ್ತಿದ್ದಾರೆ. ಸುಳ್ಳು ಭರವಸೆ, ಅಪಪ್ರಚಾರಗಳಿಗೆ ಒಳಗಾಗುತ್ತಿದ್ದು ಪ್ರಜಾಪ್ರಭುತ್ವದ ಅರ್ಥಕ್ಕೆ ಧಕ್ಕೆಯಾಗುತ್ತಿದೆ ಎಂದರು.
ದೇಶ, ರಾಜ್ಯ ಹಾಗೂ ಕ್ಷೇತ್ರದ ಆಡಳಿತವನ್ನು ಮತದಾನದ ಮೂಲಕ ಆಯ್ಕೆ ಮಾಡಿಕೊಳ್ಳಬೇಕೆಂಬ ಜವಾಬ್ದಾರಿಯನ್ನು ದೇಶದ ಮತದಾರರಿಗೆ ನೀಡಲಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸದೇ, ಮಹತ್ವ ಅರಿಯದೆ ದಿಕ್ಕು ತಪ್ಪುತ್ತಿರುವುದು ನಿಜಕ್ಕೂ ನೋವಿನ ಸಂಗತಿ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಯಲುವಳ್ಳಿ ಎನ್.ರಮೇಶ್, ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ, ಜಿ.ಪಂ.ಸಿಇಒ ಡಾ. ವೈ. ನವೀನ್ ಭಟ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ, ಅಪರ ಜಿಲ್ಲಾಧಿಕಾರಿ ಡಾ. ಎನ್. ಭಾಸ್ಕರ್, ಜಿ.ಪಂ.ಉಪ ಕಾರ್ಯದರ್ಶಿ ಅತಿಕ್ ಪಾಷಾ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ತೇಜಾನಂದರೆಡ್ಡಿ ಮತ್ತಿತರರು ಇದ್ದರು.
*ನಗರದಲ್ಲಿ ಸೈಕಲ್ ರ್ಯಾಲಿ
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಸೈಕಲ್ ರ್ಯಾಲಿಗೆ ಚಾಲನೆ ನೀಡಲಾಯಿತು. ಜಿಲ್ಲಾಡಳಿತ ಭವನದಿಂದ ಪ್ರಾರಂಭಗೊಂಡು ಅಂಬೇಡ್ಕರ್ ವೃತ್ತದಿಂದ ಕನ್ನಡ ಭವನವರೆಗೆ ಸಾಗಿತು. ಮತ್ತೆ ವಾಪಸ್ ಬಂದು ಜಿಲ್ಲಾಡಳಿತ ಭವನದಲ್ಲಿ ತೆರೆ ಎಳೆಯಲಾಯಿತು.
ಆಮಿಷಕ್ಕೊಳಗಾಗದಿರುವುದು, ಪ್ರಜಾಪ್ರಭುತ್ವವನ್ನು ಬಲಪಡಿಸುವುದರ ಬಗ್ಗೆ ತಿಳಿಸಲಾಯಿತು.
ಬೆಂಗಳೂರಿನಲ್ಲಿ ಕೈಗೊಂಡಿದ್ದ ರಾಜ್ಯ ಮಟ್ಟದ ಬೈಕ್ ಜಾಥಾದಲ್ಲಿ ಎಲ್ಲ ಜಿಲ್ಲೆಗಳಿಂದ ತಲಾ 10 ಮಂದಿ ಬೈಕ್ ಸವಾರರು ಭಾಗವಹಿಸಿದ್ದು ಜಿಲ್ಲೆಯಿಂದ ನುರಿತ ಬೈಕ್ ಸವಾರರು ತೆರಳಿದ್ದರು.