

ವಿಜಯವಾಣಿ ಸುದ್ದಿಜಾಲ ಉಡುಪಿ
ಎಸ್ಎಸ್ಎಲ್ಸಿ ಹಾಗೂ ಪಿಯುಸಿ ತೇರ್ಗಡೆಗೆ ಈ ಮೊದಲು ಇದ್ದ ಕನಿಷ್ಠ 35 ಅಂಕಗಳ ಬದಲಾಗಿ 33ಕ್ಕೆ ಇಳಿಕೆ ಮಾಡಿ ಶಾಲಾ ಶಿಕ್ಷಣ ಮಂತ್ರಿ ಆದೇಶ ಹೊರಡಿಸಿದ್ದಾರೆ. ಇದು ಸರಿಯಲ್ಲ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ಈ ನಿರ್ಧಾರದ ಕುರಿತು ಇನ್ನಷ್ಟು ಚರ್ಚೆಯಾಗಲಿ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಪ್ರತಿಕ್ರಿಯೆ ನೀಡಿದ್ದಾರೆ.
ಉಡುಪಿಯ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಶನಿವಾರ (ಅ.18) ಭೇಟಿ ನೀಡಿದ್ದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿ, ಶಾಲಾ ಶಿಕ್ಷಣ ಮಂತ್ರಿಯಾದ ಮಧು ಬಂಗಾರಪ್ಪ ಅವರು ಯಾವ ಉದ್ದೇಶ ಇಟ್ಟುಕೊಂಡು ಈ ನಿರ್ಧಾರ ಕೈಗೊಂಡಿದ್ದಾರೆ ಎಂಬ ಮಾಹಿತಿ ಇಲ್ಲ. ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡಲಾಗಿದ್ದು, ಈ ವಿಷಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಸಹ ಮಾಹಿತಿ ಪಡೆದಿದ್ದಾರೆ. ಈ ಬಗ್ಗೆ ಸರಿಯಾದ ಅಧ್ಯಯನ ನಡೆಯಬೇಕು ಎನ್ನುವುದು ನನ್ನ ಅನಿಸಿಕೆ ಎಂದರು.
ಕಾಂಗ್ರೆಸ್ ಸರ್ಕಾರ ಆರ್ಎಸ್ಎಸ್ಗೆ ಕಡಿವಾಣ ಹಾಕುವ ಯತ್ನ ಮಾಡುತ್ತಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಬೇರೆ ಬೇರೆ ರಾಜ್ಯಗಳಲ್ಲಿಯೂ ಆರ್ಎಸ್ಎಸ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕ ಸ್ಥಳಗದಲ್ಲಿ ಎಲ್ಲ ಜಾತಿ, ಧರ್ಮದ ಜನರು ಇರುತ್ತಾರೆ. ಅಲ್ಲಿ ಕೆಲವು ಸಂಘಟನೆಗಳ ಕಾರ್ಯ ಚಟುವಟಿಕೆಗಳಿಗೆ ವಿರೋಧದ ಸಾಧ್ಯತೆ ಇರುತ್ತದೆ. ಹೀಗಾಗಿ ಯಾವುದೇ ಸಂಘಟನೆಗಳು ಕಾರ್ಯಕ್ರಮ ಮಾಡಲು ಅನುಮತಿ ಪಡೆಯಲೇಬೇಕು. ಸ್ವೇಚ್ಛಾಚಾರದ ನಡವಳಿಕೆಗೆ ಕಡಿವಾಣ ಹಾಕಲು, ಎಲ್ಲರಲ್ಲೂ ಶಿಸ್ತಿರಲಿ ಎಂಬ ಉದ್ದೇಶಕ್ಕೆ ಸರ್ಕಾರ ಈ ಆದೇಶ ಮಾಡಿದೆ. ಇದು ಆರ್ಎಸ್ಎಸ್ಗೆ ಮಾತ್ರವಲ್ಲ, ಎಲ್ಲ ಸಂಘ-ಸಂಸ್ಥೆಗಳಿಗೂ ಅನ್ವಯಿಸುತ್ತದೆ ಎಂದು ಸಮರ್ಥನೆ ನೀಡಿದರು.