

ಬೆಂಗಳೂರು: ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣ ಒದಗಿಸಲು ಬೆಂಗಳೂರು ಕೃಷಿ ವಿವಿ (ಯುಎಎಸ್-ಬಿ) ರೂಪಿಸಿರುವ ಹೊಸ ಕೋರ್ಸ್‌ಗಳಿಗೆ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಅಧಿಕೃತ ಒಪ್ಪಿಗೆ ನೀಡಿದೆ.
ಇದರಿಂದ ಕೃಷಿ ವಿವಿ ರೂಪಿಸಿರುವ ಅವಳಿ, ಜಂಟಿ ಪದವಿ ಹಾಗೂ ಪದವಿ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ. ಇಂತಹ ಅವಕಾಶವನ್ನು ದೇಶಾದ್ಯಂತ 234 ಸರ್ಕಾರಿ, ಖಾಸಗಿ ಹಾಗೂ ಡೀಮ್ಡ್ ವಿವಿಗಳು ಪಡೆದುಕೊಂಡಿವೆ. ಈ ಪೈಕಿ ಇಡೀ ದೇಶದಲ್ಲಿ 4 ಕೃಷಿ ವಿವಿಗಳಿಗೆ ಇಂತಹ ಅನುಮತಿ ದೊರೆತಿದ್ದು, ಕರ್ನಾಟಕದಿಂದ ಯುಎಎಸ್-ಬಿ ಸಂಸ್ಥೆ ಮಾತ್ರ ಆಯ್ಕೆಯಾಗಿದೆ.
ಮುಖ್ಯವಾಗಿ ಭಾರತದ ವಿವಿಗಳು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಶೈಕ್ಷಣಿಕ ವಿನಿಮಯ ಮಾಡಿಕೊಳ್ಳಬಹುದು. ವಿದ್ಯಾರ್ಥಿಗಳು ಕಲಿಕೆಯ ಅರ್ಧಭಾಗವನ್ನು ಭಾರತದಲ್ಲಿ ಕೈಗೊಂಡು ಇನ್ನುಳಿದ ಅರ್ಧಭಾಗವನ್ನು ವಿದೇಶದಲ್ಲಿ ಪೂರ್ಣಗೊಳಿಸಬಹುದು. ಒಂದೇ ವಿಷಯದಲ್ಲಿ ವಿದೇಶಿ ಹಾಗೂ ಭಾರತದ ವಿವಿಗಳು ಜಂಟಿ ಪದವಿ ನೀಡಬಹುದಾಗಿದ್ದು, ಪ್ರತ್ಯೇಕವಾಗಿ ಪದವಿ ಪ್ರಮಾಣಪತ್ರವನ್ನು ವಿತರಿಸಬಹುದು. ಇದರಿಂದ ವಿದ್ಯಾರ್ಥಿಗಳು ವಿದೇಶಕ್ಕೆ ತೆರಳಿ ವ್ಯಾಸಂಗ ಮಾಡುವುದು ತಪ್ಪುತ್ತದೆ ಅಥವಾ ಭಾರತದಲ್ಲೇ ಕೋರ್ಸ್‌ಗೆ ಪ್ರವೇಶ ಪಡೆದು ವಿದೇಶದಲ್ಲಿ ಕಲಿಯುವ ಅವಕಾಶ ದೊರೆಯುತ್ತದೆ. ಭವಿಷ್ಯದಲ್ಲಿ ಉದ್ಯೋಗಾವಕಾಶವೂ ಹೆಚ್ಚುತ್ತದೆ ಎಂದು ಕೃಷಿ ವಿವಿಯ ಕುಲಪತಿ ಡಾ. ಎಸ್.ವಿ.ಸುರೇಶ್ ತಿಳಿಸಿದ್ದಾರೆ.