

ತುಮಕೂರು : ಖಾಸಗಿ ಆಸ್ಪತ್ರೆಗಳಲ್ಲಿ ಕರೊನಾ ಚಿಕಿತ್ಸೆಗೆ ಹೆಚ್ಚಿನ ದರ ವಸೂಲಿ ಮಾಡುವುದು ಕಂಡು ಬಂದಲ್ಲಿ ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ನಗರ ಹೊರವಲಯದಲ್ಲಿ ಸಿದ್ಧಾರ್ಥ ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಕೇಂದ್ರದಲ್ಲಿ ಶನಿವಾರ ಆರ್‌ಟಿ-ಪಿಸಿಆರ್ ಕೋವಿಡ್ ಪರೀಕ್ಷಾ ಪ್ರಯೋಗಾಲಯ ಬಿಎಸ್‌ಎಲ್-2 ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕರೊನಾ ಚಿಕಿತ್ಸೆಗೆ ಸಂಬಂಧಿಸಿ ಸರ್ಕಾರ ದರ ನಿಗದಿ ಮಾಡಿದೆ. ಇದನ್ನು ಉಲ್ಲಂಘಿಸಿದರೆ ಕ್ರಮಕೈಗೊಳ್ಳಲಾಗುವುದು. ಕರೊನಾ ಸೋಂಕಿನ ಸಮಸ್ಯೆಯ ಜತೆ ಕೆಲವು ರೋಗಿಗಳಿಗೆ ಬೇರೆ ಸಮಸ್ಯೆಗಳಿದ್ದು, ಅದಕ್ಕೆ ಪ್ರತ್ಯೇಕ ಚಿಕಿತ್ಸಾ ವೆಚ್ಚ ಭರಿಸಬೇಕಾಗುತ್ತದೆ. ಸರ್ಕಾರದ ನಿರ್ದೇಶನ ಹಾಗೂ ಮಾರ್ಗಸೂಚಿಗಳ ಪ್ರಕಾರವೇ ನಡೆದುಕೊಳ್ಳಬೇಕು. ಕರೊನಾದ ಈ ಸಂದರ್ಭದಲ್ಲಿ ಎಲ್ಲರೂ ಕನಿಷ್ಠ ಮಾನವೀಯತೆಯಿಂದ ನಡೆದುಕೊಳ್ಳಬೇಕು ಎಂದರು.
ಪ್ರತಿಪಕ್ಷಗಳ ಟೀಕೆ ಸಲ್ಲ : ರಾಜ್ಯದಲ್ಲಿ 5 ಲಕ್ಷ ಮಂದಿಗೆ ಸೋಂಕು ತಗುಲಿದ್ದು, ಇವರಲ್ಲಿ 4 ಲಕ್ಷ ಮಂದಿ ಗುಣಮುಖರಾಗಿದ್ದಾರೆ. ದೇಶದಲ್ಲಿ ಒಟ್ಟಾರೆ ಸಾವಿನ ಪ್ರಮಾಣ ಶೇ 1.64 ಇದ್ದರೆ ರಾಜ್ಯದಲ್ಲಿ ಶೇ 1.56 ಇದೆ. ಹಾಗಾಗಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿ ಪ್ರತಿಪಕ್ಷ ಮುಖಂಡರು ಸಾವಿನ ಪ್ರಮಾಣ ರಾಜ್ಯದಲ್ಲಿ ಹೆಚ್ಚುತ್ತಿದೆ ಎಂದು ಸುಮ್ಮನೆ ಸರ್ಕಾರವನ್ನು ಟೀಕಿಸುವುದು ಸರಿಯಲ್ಲ. ಅಂಕಿ ಅಂಶಗಳನ್ನು ಪರಿಶೀಲಿಸಿ ಕರೊನಾ ಸಂದರ್ಭ ನಿರ್ವಹಣೆ ಹಾಗೂ ಸರ್ಕಾರದ ಆಡಳಿತವೈಖರಿ ನೋಡಲಿ ಎಂದು ಸುಧಾಕರ್ ತಿರುಗೇಟು ನೀಡಿದರು.
ಇಡೀ ವಿಶ್ವಕ್ಕೆ ಹೋಲಿಕೆ ಮಾಡಿದರೆ ಭಾರತದಲ್ಲಿ ಸೋಂಕಿನಿಂದ ಸಾವನ್ನಪ್ಪಿದವರ ಪ್ರಮಾಣ ಬಹಳ ಕಡಿಮೆ ಇದೆ. ಸೋಂಕು ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ. ಬಲಾಢ್ಯ ದೇಶಗಳು ವಿಚಲಿತಗೊಂಡು ಆರ್ಥಿಕವಾಗಿ ಕುಸಿತ ಕಂಡಿವೆ. ಸೋಂಕಿನಿಂದ ಬೇರೆ ಬೇರೆ ದೇಶಗಳಲ್ಲಿ ಸತ್ತವರ ಪ್ರಮಾಣ ಜಾಸ್ತಿ ಇದೆ. ಆದರೆ, ಭಾರತದಲ್ಲಿ ಕೈಗೊಂಡ ಮುಂಜಾಗ್ರತಾ ಕ್ರಮಗಳಿಂದಾಗಿ ಸಾವಿನ ಪ್ರಮಾಣ ಕಡಿಮೆಯಾಗಿದೆ ಎಂದರು.
ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಇರುವ ಕಡೆ ಶೇ.50 ಕೈಗಾರಿಕಾ ಆಕ್ಸಿಜನ್‌ಗಳನ್ನು ವೈದ್ಯಕೀಯ ಉದ್ದೇಶಕ್ಕೆ ಬಳಸಲಾಗುತ್ತಿದೆ. ರಾಜ್ಯದ ಕೆಲವು ಜಿಲ್ಲೆಗಳಿಗೆ ಗುಜರಾತ್, ಹೈದರಾಬಾದ್ ಮೂಲದಿಂದ ಒಡಂಬಡಿಕೆ ಮಾಡಿಕೊಂಡು ಆಕ್ಸಿಜನ್ ತರಿಸಿಕೊಳ್ಳಲಾಗುತ್ತಿದೆ. ಸರ್ಕಾರಿ ಆಸ್ಪತ್ರೆಗಳಿಗೆ ಮಾತ್ರವಲ್ಲ. ಖಾಸಗಿ ಆಸ್ಪತ್ರೆಗಳಲ್ಲೂ ಆಕ್ಸಿಜನ್ ಕೊರತೆ ಉಂಟಾಗದಂತೆ ಕ್ರಮವಹಿಸಲಾಗಿದೆ ಎಂದರು.
ಸಿದ್ಧಗಂಗಾ ಮಠಕ್ಕೆ ಭೇಟಿ: ಬಿಜೆಪಿ ಕಾರ್ಯಾಲಯಕ್ಕೆ ಭೇಟಿ ನೀಡಿ ನಂತರ ಸಿದ್ಧಗಂಗಾ ಮಠಕ್ಕೆ ತೆರಳಿದ ಸುಧಾಕರ್ ಶಿವಕುಮಾರ ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದರು. ಮಠಾಧ್ಯಕ್ಷ ಸಿದ್ದಲಿಂಗಶ್ರೀಗಳ ಆಶೀರ್ವಾದ ಪಡೆದರು.
ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ, ಶ್ರೀ ಸಿದ್ಧಾರ್ಥ ಉನ್ನತ ಶಿಕ್ಷಣ ಸಂಸ್ಥೆಯ ಗೌರವಾನ್ವಿತ ಕುಲಾಧಿಪತಿ, ಮಾಜಿ ಡಿಸಿಎಂ ಜಿ.ಪರಮೇಶ್ವರ್, ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್, ಉಪಕುಲಪತಿ ಡಾ.ಪಿ.ಬಾಲಕೃಷ್ಣ ಶೆಟ್ಟಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಟಿ.ಎ.ವೀರಭದ್ರಯ್ಯ, ಸಂಸ್ಥೆಯ ಸಿಇಒ ಡಾ.ಪಿ.ಕೆ.ದೇವದಾಸ್, ಪ್ರಾಚಾರ್ಯ ಡಾ.ಎ.ಜಿ.ಶ್ರೀನಿವಾಸಮೂರ್ತಿ ಉಪಸ್ಥಿತರಿದ್ದರು.
ಸಚಿವ ಸ್ಥಾನ ಅಪೇಕ್ಷೆ ಅಪರಾಧವಲ್ಲ!: ಸಚಿವ ಸ್ಥಾನ ಬೇಕು ಅನ್ನುವುದು ಅಪರಾಧವಲ್ಲ. ಮುಖ್ಯಮಂತ್ರಿ ಬದಲಾವಣೆ ವಿಚಾರದ ಬಗ್ಗೆ ಹೇಳಿಕೆ ನೀಡುವಷ್ಟು ನಾನು ದೊಡ್ಡವನಲ್ಲ. ನಾನಿನ್ನೂ ಸಣ್ಣವನು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು. ಮುಖ್ಯಮಂತ್ರಿ ದೆಹಲಿಗೆ ತೆರಳಿದ್ದು, ಈ ಬಗ್ಗೆ ಅವರು ಪ್ರತಿಕ್ರಿಯೆ ನೀಡಬೇಕು. ನನಗೆ ದೆಹಲಿಯಲ್ಲಿ ಏನು ಚರ್ಚೆ ನಡೆದಿದೆ ಎಂಬುದು ಗೊತ್ತಿಲ್ಲ. ಹಾಗಾಗಿ, ಸತ್ಯವೇ ಗೊತ್ತಿಲ್ಲದೆ ಮನಸೋ ಇಚ್ಛೆ ಮಾತನಾಡುವುದು ಸರಿಯಲ್ಲ ಎಂದು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ 1993-94ರ ಬ್ಯಾಚ್ ವಿದ್ಯಾರ್ಥಿ ನಾನು. ಇಲ್ಲಿಗೆ ಭೇಟಿ ನೀಡಿರುವುದು ನನ್ನ ಮನೆಗೆ ಬಂದಂತಾಗಿದೆ. ಶಿಕ್ಷಣ ಭೀಷ್ಮ ಎಚ್.ಎಂ.ಗಂಗಾಧರಯ್ಯ ಹಾಗೂ ಈ ಸಂಸ್ಥೆಯ ಆಧಾರಸ್ತಂಭವಾಗಿದ್ದ ಡಾ.ಜಿ.ಶಿವಪ್ರಸಾದ್ ಅವರನ್ನು ಈ ಸಂದರ್ಭದಲ್ಲಿ ಸ್ಮರಿಸಲೇಬೇಕು. ಶೈಕ್ಷಣಿಕ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರ. ಡಾ.ಕೆ.ಸುಧಾಕರ್ ವೈದ್ಯಕೀಯ ಶಿಕ್ಷಣ ಸಚಿವ