

ಮಂಗಳೂರು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಮಂಗಳೂರು ಮತ್ತು ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ ಬೆಂಗಳೂರು ಸಹಯೋಗದಲ್ಲಿ ನಡೆಯುವ ಸಹಕಾರ ನಿರ್ವಹಣೆಯಲ್ಲಿ ಉನ್ನತ ಡಿಪ್ಲೋಮ(ಎಚ್‌ಡಿಸಿಎಂ) 60ನೇ ಬ್ಯಾಚ್ ಉದ್ಘಾಟನಾ ಸಮಾರಂಭ ಹಾಗೂ 43 ಮತ್ತು 44ನೇ ಬ್ಯಾಚ್‌ನ ರ‌್ಯಾಂಕ್ ವಿಜೇತರಿಗೆ ಪದಕ ಪ್ರದಾನ ಸಮಾರಂಭ ಪಡೀಲ್ ಆತ್ಮಶಕ್ತಿ ಸೌಧದಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಮಾತನಾಡಿ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಅಲ್ಪಾವಧಿಯಲ್ಲಿ 30 ಶಾಖೆ ತೆರೆದು ಸಾಧನೆ ಮೆರೆದಿದೆ. ದೇಶದಲ್ಲಿರುವ ಅನೇಕ ಸಹಕಾರಿ ಸಂಘದಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿದೆ. ಅಭ್ಯರ್ಥಿ ಸಂದರ್ಶನ, ಹುದ್ದೆಗೆ ಆಯ್ಕೆ ಮಾಡುವಾಗ ಸಹಕಾರ ನಿರ್ವಹಣೆಯಲ್ಲಿ ಉನ್ನತ ಡಿಪ್ಲೊಮಾ ಪ್ರಾಮುಖ್ಯ ಪಡೆದಿದೆ ಎಂದರು.
ಶಾಸಕ ಡಿ.ವೇದವ್ಯಾಸ್ ಕಾಮತ್ ಮಾತನಾಡಿ, ಸರ್ಕಾರದ ಹಲವು ಯೋಜನೆಗಳ ಅನುಷ್ಠಾನದಲ್ಲಿ ಸಹಕಾರಿ ಸಂಘಗಳು ಮಹತ್ವದ ಕೊಡುಗೆ ನೀಡುತ್ತಿವೆ. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಬೆಂಗಳೂರಿನ ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ ಜತೆಗೂಡಿ ಸಹಕಾರ ನಿರ್ವಹಣೆಯಲ್ಲಿ ಉನ್ನತ ಡಿಪ್ಲೊಮಾ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ ಎಂದರು.
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಅಧ್ಯಕ್ಷತೆ ವಹಿಸಿದ್ದರು. ತರಬೇತಿಯಲ್ಲಿ ಪ್ರಥಮ ರ‌್ಯಾಂಕ್ ಪಡೆದ ಗ್ಲೋರಿಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಸಿಬ್ಬಂದಿ ಒಲಿವಿಯಾ ಪ್ರಶಾಂತಿ ರೆಬೆಲ್ಲೊ ಅವರಿಗೆ ಚಿನ್ನದ ಪದಕ, ದ್ವಿತೀಯ ರ‌್ಯಾಂಕ್ ಪಡೆದ ಮಧುರಾ ಹಾಗೂ ತೃತೀಯ ರ‌್ಯಾಂಕ್ ಪಡೆದ ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಿಬ್ಬಂದಿ ಅಕ್ಷತಾ ಅವರಿಗೆ ಬೆಳ್ಳಿಯ ಪದಕ ನೀಡಿ ಗೌರವಿಸಲಾಯಿತು.
ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಆತ್ಮಶಕ್ತಿ ಸಹಕಾರಿ ಸಂಘದ ಉಪಾಧ್ಯಕ್ಷ ನೇಮಿರಾಜ್ ಪಿ., ನಿರ್ದೇಶಕರಾದ ಜಿ.ಪರಮೇಶ್ವರ ಪೂಜಾರಿ, ಆನಂದ ಎಸ್.ಕೊಂಡಾಣ, ಸೀತಾರಾಮ್ ಎನ್, ರಮಾನಾಥ್ ಸನಿಲ್, ಬಿ.ಪಿ.ದಿವಾಕರ್, ಗೋಪಾಲ್ ಎಂ., ಉಮಾವತಿ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌಮ್ಯಾ ವಿಜಯ್, ಅಪೆಕ್ಸ್ ಬ್ಯಾಂಕ್ ನಿವೃತ್ತ ಅಧಿಕಾರಿ ಎಸ್.ಜಿ.ಕುಲಕರ್ಣಿ, ತರಬೇತಿ ಸಮನ್ವಯ ಅಧಿಕಾರಿ ಸುರೇಶ್ ಪಿ.ಎನ್ ಉಪಸ್ಥಿತರಿದ್ದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.
ಪದಕ ಪ್ರದಾನ, ಸನ್ಮಾನ
ತರಬೇತಿಯಲ್ಲಿ ಪ್ರಥಮ ರ‌್ಯಾಂಕ್ ಪಡೆದ ಗ್ಲೋರಿಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಸಿಬ್ಬಂದಿ ಒಲಿವಿಯಾ ಪ್ರಶಾಂತಿ ರೆಬೆಲ್ಲೊ ಅವರಿಗೆ ಚಿನ್ನದ ಪದಕ, ದ್ವಿತೀಯ ರ‌್ಯಾಂಕ್ ಪಡೆದ ಮಧುರಾ ಹಾಗೂ ತೃತೀಯ ರ‌್ಯಾಂಕ್ ಪಡೆದ ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಿಬ್ಬಂದಿ ಅಕ್ಷತಾ ಅವರಿಗೆ ಬೆಳ್ಳಿಯ ಪದಕ ನೀಡಿ ಗೌರವಿಸಲಾಯಿತು. ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳಿಂದ ಪುರಸ್ಕೃತರಾದ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರನ್ನು ಸನ್ಮಾನಿಸಲಾಯಿತು.