

ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ
ನೆರೆ ರಾಜ್ಯಗಳ ಗಡಿ ಹಂಚಿಕೊಂಡಿರುವ ಗ್ರಾಮಾಂತರ ಜಿಲ್ಲೆಯಲ್ಲಿ ಈಗಾಗಲೇ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗಳ ಜತೆ ಇದೀಗ ಹೈಬ್ರಿಡ್ ರಸ್ತೆಗಳು ಸೇರ್ಪಡೆಯಾಗುವ ಕಾಲ ಸನ್ನಿಹಿತವಾಗಿದೆ.
ಗ್ರಾಮಾಂತರ ಜಿಲ್ಲೆಯ ಹೊಸಕೋಟೆ, ದೇವನಹಳ್ಳಿ, ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಹಾಗೂ ಕೋಲಾರ ಜಿಲ್ಲೆಯ ಕೋಲಾರ ನಗರ ಹಾಗೂ ಮಾಲೂರು ತಾಲೂಕುಗಳಿಗೆ ಪ್ರಮುಖ ಸಂಪರ್ಕ ರಸ್ತೆ ಇದಾಗಲಿದ್ದು, ಪಂಚತಾಲೂಕುಗಳ ಅಭಿವೃದ್ಧಿಗೆ ಹೈಬ್ರಿಡ್ ರಸ್ತೆ ವರದಾನವಾಗಲಿದೆ.
ನಗರೀಕರಣ ಹಾಗೂ ಕೈಗಾರೀಕರಣದಲ್ಲಿ ಮುಂಚೂಣಿಗೆ ಬರುತ್ತಿರುವ ಗ್ರಾಮಾಂತರ ಜಿಲ್ಲೆಗೆ ಈ ಹೊಸ ಯೋಜನೆ ಮತ್ತಷ್ಟು ಬಲತುಂಬಲಿದ್ದು, 2025 ರ ಜನವರಿಯಲ್ಲಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲು ಸರ್ಕಾರ ಉತ್ಸುಕವಾಗಿದೆ.
ಜಿಲ್ಲೆಯಿಂದ ತಮಿಳುನಾಡು ಗಡಿ: ತಮಿಳುನಾಡು ಗಡಿವರೆಗೆ ಸುಮಾರು 110 ಕಿ.ಮೀ ದೂರದ ಈ ರಸ್ತೆಗಳು ನಿರ್ಮಾಣವಾಗಲಿದ್ದು, ಮುಖ್ಯವಾಗಿ ಹೊಸಕೋಟೆ ಹಾಗೂ ದೇವನಹಳ್ಳಿ ತಾಲೂಕುಗಳ ನಡುವೆ ಸಂಪರ್ಕ ಸೇತುವಾಗಲಿವೆ. ರಾಜ್ಯ ಸರ್ಕಾರದ ಸಚಿವ ಸಂಪುಟದಲ್ಲಿ 3190 ಕೋಟಿ ರೂ.ಬೃಹತ್ ಮೊತ್ತದ ಯೋಜನೆಗೆ ಅನುಮೋದನೆ ಸಿಕ್ಕಿದ್ದು, ಎಲ್ಲ ಅಂದುಕೊಂಡಂತೆ ನಡೆದರೆ ಹೊಸ ವರ್ಷಕ್ಕೆ ಶಂಕುಸ್ಥಾನೆ ಭಾಗ್ಯ ದೊರೆಯುವ ನಿರೀಕ್ಷೆ ಮೂಡಿಸಿದೆ.
ಎರಡೂ ರಸ್ತೆಗಳ ನಿರ್ಮಾಣ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಶೇ.40 ರ ಅನುಪಾತದಲ್ಲಿ ರಸ್ತೆ ನಿರ್ಮಾಣಕ್ಕೆ ಅನುದಾನ ಮೀಸಲಿಡಲಾಗುವುದು, ವಿಜಿಪುರ, ಜಂಗಮಕೋಟೆ ಕ್ರಾಸ್, ವೇಮಗಲ್, ನರಸಾಪುರ, ಮಾಲೂರು ಮೂಲಕ ತಮಿಳುನಾಡು ಗಡಿವರೆಗೆ ರಸ್ತೆ ಹಾದುಹೋಗಲಿದೆ. ಕೋಲಾರದ ಕಡೆಯಿಂದ ಒಂದು ರಸ್ತೆ ಹಾಗೂ ಹೊಸಕೋಟೆ ಮಾಲೂರು ಕಡೆಯಿಂದ 110 ಕಿಮೀ ರಸ್ತೆ ಹಾದುಹೋಗಲಿದೆ. ಯೋಜನೆಗೆ 2075 ಕೋಟಿ. ರೂ, ಭೂಸ್ವಾಧೀನಕ್ಕೆ 1120 ಕೋಟಿ ರೂ. ಸೇರಿ 3190 ಕೋಟಿ ರೂ.ಮೊತ್ತದಲ್ಲಿ ರಸ್ತೆಗಳ ನಿರ್ಮಾಣವಾಗಲಿದೆ. ಎಚ್‌ಎಎಂ (ಹೈಬ್ರಿಡ್ ಅನ್ಯವಿಲಿಟಿ ಮಾಡೆಲ್)ರಸ್ತೆ ಇದಾಗಲಿದೆ.
ವಾರ್ಷಿಕ 350 ಕೋಟಿ ರೂ.ಟೋಲ್: ಈ ಬೃಹತ್ ಮೊತ್ತದ ಕಾಮಗಾರಿಗಾಗಿ ಕಾಮಗಾರಿ ಹೊಣೆ ಹೊತ್ತವರಿಗೆ ವರ್ಷಕ್ಕೆ 350 ಕೋಟಿ. ರೂ ನೀಡುವ ಒಪ್ಪಂದವಾಗಿದೆ. ಇದಕ್ಕಾಗಿ ಸರ್ಕಾರದಿಂದಲೇ ಟೋಲ್ ಸಂಗ್ರಹವಾಗುತ್ತದೆ. ಟೋಲ್ ಸಂಗ್ರಹದಲ್ಲಿ ಹೆಚ್ಚಿನ ಆದಾಯ ಬಂದರೆ ಸರ್ಕಾರದ ವಶಕ್ಕೆ ಹೋಗಲಿದೆ, ಇಲ್ಲವಾದರೆ ಬಾಕಿ ಮೊತ್ತವನ್ನು ಸರ್ಕಾರವೇ ಪಾವತಿಸುವ ಒಪ್ಪಂದವಾಗಿದೆ ಎನ್ನಲಾಗಿದೆ.
ಕಾಂಕ್ರಿಟ್ ರಸ್ತೆ! ಹೊಸಕೋಟೆಯ ಸಂತೆಸರ್ಕಲ್‌ನಿಂದ ಮಾಲೂರು ರಸ್ತೆವರೆಗೆ ರಿಜಿಡ್ಜ್ ಪೇಮೆಂಟ್ (ಕಾಂಕ್ರಿಟ್) ರಸ್ತೆ ನಿರ್ಮಾಣವಾಗಲಿದೆ, ಈಗಾಗಲೇ ತಿರುಪತಿ ರಸ್ತೆ ಮಾದರಿಯಲ್ಲಿಯೇ ನಿರ್ಮಾಣವಾಗಲಿದೆ, ದೀರ್ಘಬಾಳಿಕೆ ಹಾಗೂ ಗುಣಮಟ್ಟದ ಕಾರಣ ಈ ರೀತಿಯ ಪ್ರಾಜೆಕ್ಟ್‌ಗೆ ಪ್ಲಾನ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
3 ಪ್ರಾಜೆಕ್ಟ್: ರಸ್ತೆ ನಿರ್ಮಾಣ ಸಂಬಂಧ ಪ್ರಾಜೆಕ್ಟ್‌ಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಹೊಸಕೋಟೆಯಿಂದ ಮಾಲೂರು ಜತೆಗೆ ಮಾಲೂರು ಒಳಗಿನ ಪ್ಲೇಓವರ್, ಅಂಡರ್‌ಪಾಸ್‌ಗಳು ಸೇರಿ 1 ಸಾವಿರ ಕೋಟಿ ರೂ.ವೆಚ್ಚದ ಯೋಜನೆಯಾಗಲಿದ್ದು ಮಾದರಿ ರಸ್ತೆ ಎನಿಸಲಿದೆ, ಈ ರಸ್ತೆ ಮುಖ್ಯವಾಗಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲಿದೆ, ಜಂಗಮನಕೋಟೆ ಕೈಗಾರಿಕಾ ವಲಯ, ಕೈವಾರ, ನರಸಾಪುರ, ಪಿಳ್ಳಗುಂಪ ಸೇರಿ ಐದಾರು ಕೈಗಾರಿಕಾ ವಲಯಗಳಿಗೆ ಈ ರಸ್ತೆ ಸಂಪರ್ಕ ರಸ್ತೆಯಾಗಲಿದೆ, ಈಗಾಗಲೇ ಇರುವ ಹೆದ್ದಾರಿಗಳಿಂದ ಒಂದು ಸರ್ಕಲ್ ಹೊರಗಡೆ ಈ ರಸ್ತೆ ನಿರ್ಮಾಣವಾಗುವುದರಿಂದ ಹೆಚ್ಚು ಅನುಕೂಲವಾಗಲಿದೆ.
-------
ಇದೊಂದು ಸರ್ಕಾರದ ದೂರದೃಷ್ಟಿಯ ಪ್ರಮುಖ ಯೋಜನೆಯಾಗಿದೆ, ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಹಾಗೂ ದೇವನಹಳ್ಳಿ ಸೇರಿ ಪಂಚ ತಾಲೂಕುಗಳ ವ್ಯಾಪಾರ ವಹಿವಾಟು, ಕೈಗಾರೀಕರಣಕ್ಕೆ ಪ್ರಮುಖ ಸಂಪರ್ಕ ಸೇತುವಾಗಲಿದೆ. ಅದರಲ್ಲೂ ಹೊಸಕೋಟೆ ತಾಲೂಕಿನ ಅಭಿವೃದ್ಧಿಯಲ್ಲಿ ಈ ಯೋಜನೆ ಪ್ರಮುಖ ಮೈಲುಗಲ್ಲಾಗಲಿದೆ. ಟೆಂಡರ್ ಪ್ರಕ್ರಿಯೆ, ಭೂಸ್ವಾಧೀನ ಪ್ರಕ್ರಿಯೆ ಮತ್ತಿತರ ಕೆಲಸಗಳು ಮುಗಿದರೆ ಮುಂದಿನ ವರ್ಷಾರಂಭದಲ್ಲಿ ಪ್ರಾಜೆಕ್ಟ್ ಟೇಕ್ಾ ಆಗಲಿದೆ.
ಶರತ್‌ಬಚ್ಚೇಗೌಡ, ಶಾಸಕ ಹೊಸಕೋಟೆ