

ಗೋಕರ್ಣ:ಹಿರೇಗುತ್ತಿ ಗ್ರಾಪಂ ವ್ಯಾಪ್ತಿಯ ಬಳಲೆ ಕ್ರಾಸ್‌ನಿಂದ ಮೊರಬಾ ಗ್ರಾಮದ ವರೆಗಿನ ಅಂದಾಜು ೫ಕಿಮಿ ಪ್ರದೇಶದಲ್ಲಿನ ಚತುಷ್ಪಥ ಹೆದ್ದಾರಿ ಕಾಮಗಾರಿಯನ್ನು ನಿಗದಿತ ಸಮಯದಲ್ಲಿ, ಯೋಜನಾ ನೀಲನಕ್ಷೆಯಂತೆ ಕೈಗೊಳ್ಳದೆ ಬೇಜವಾಬ್ದಾರಿ ತೋರುತ್ತಿರುವ ಗುತ್ತಿಗೆದಾರ ಐಆರ್‌ಬಿ ಕಂಪನಿಯ ವಿರುದ್ಧ ಯೋಜನಾ ವ್ಯಾಪ್ತಿಯ ಗ್ರಾಮಸ್ಥರ ಮತ್ತು ವಿವಿಧ ಸಘಟನೆಗಳ ಸದಸ್ಯ ಪ್ರಮುಖರ ಆಕ್ರೋಷ ಭುಗಿಲೆದ್ದ ಪ್ರಸಂಗ ಗುರುವಾರ ನಡೆದಿದೆ.ಹಿರೇಗುತ್ತಿ ಗ್ರಾಪಂ ಸಭಾಂಗಣದಲ್ಲಿ ಅಧ್ಯಕ್ಷ ಶಾಂತ ಎನ್.ನಾಯಕ ನೇತೃತ್ವದಲ್ಲಿ ಆಯೋಜಿಸಲಾದ ಯೋಜನಾ ಪ್ರದೇಶದ ಪ್ರಮುಖರ ಸಭೆಯಲ್ಲಿ ಹೆದ್ದಾರಿ ಯೋಜನೆ ಮತ್ತು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಈ ಹಿಂದೆ ನಿರ್ಧರಿಸಲಾದ ಪ್ರಕಾರ ಗುತ್ತಿಗೆದಾರ ಕಂಪನಿ ತಕ್ಷಣದಿಂದ ವೇಗ ಗತಿಯಲ್ಲಿ ಕಾಮಗಾರಿ ಮುಂದುವರಿಸಿ ಹಿಂದೆ ಒಪ್ಪಿಕೊಂಡತೆ ಗ್ರಾಮಸ್ಥರಿಗೆ ಎಲ್ಲ ಅನುಕೂಲ ಮಾಡಿಕೊಡದೆ ಹೋದಲ್ಲಿ ಮುಂದಿನ ದಿನಗಳಲ್ಲಿ ಹೆದ್ದಾರಿ ಬಂದ್ ಮಾಡಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಸಭೆ ಒಕ್ಕೊರಲಿನಿಂದ ಘೋಷಿಸಿತು.
ಸಭೆಯಲ್ಲಿ ಮಾತನಾಡಿದ ಗ್ರಾಪಂ ಅಧ್ಯಕ್ಷ ಶಾಂತ ನಾಯಕ ಹೆದ್ದಾರಿ ಯೋಜನೆಗಾಗಿ ಗ್ರಾಮಸ್ಥರಿಂದ ವಶ ಪಡಿಸಿಕೊಂಡ ಖಾಸಗಿ ಜಾಗಗಳಿಗೆ ಇನ್ನೂ ಗಡಿ ಗುರುತಿಸಿಲ್ಲ.ಇದರಿಂದ ಹೊಸ ಕಟ್ಟಡ ನಿರ್ಮಾಣ,ಗ್ರಾಪಂನಿಂದ ಒದಗಿಸಲಾಗುವ ಇ-ಸೊತ್ತು,ಅನಾಕ್ಷೇಪಣಾ ಪತ್ರ ಇತ್ಯಾದಿ ಅಗತ್ಯ ದಾಖಲೆಯನ್ನು ಗ್ರಾಮಸ್ಥರಿಗೆ ಒದಗಿಸಲು ತೊಡಕುಂಟಾಗಿದೆ.ಅಗತ್ಯವಿರುವ ಕಡೆಗಳಲ್ಲಿ ಸರ್ವೀಸ್ ರಸ್ತೆ,ಮೇಲ್ಸೇತುವೆ,ಕ್ರಾಸಿಂಗ್ ವ್ಯವಸ್ಥೆ,ಹೆದ್ದಾರಿಯ ಇಕ್ಕಡೆಗಳಲ್ಲಿ ಮಳೆ ನೀರು ಸರಾಗವಾಗಿ ಹೋಗಲು ಗಟಾರ,ರಸ್ತೆ ದೀಪ ಮತ್ತು ತಂಗುದಾಣ ಇತ್ಯಾದಿ ಮೂಲ ಸೌಲಭ್ಯಗಳನ್ನು ಒದಗಿಸಲು ಈತನಕ ಕಾಮಗಾರಿಗೆ ಚಾಲನೆ ನೀಡದಿರುವುದರಿಂದ ಗ್ರಾಮಸ್ಥರು,ವಿಶೇಷವಾಗಿ ಸಾವಿರಾರು ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರು ಜೀವ ಕೈಯ್ಯಲ್ಲಿ ಹಿಡಿದು ಸಂಚರಿಸುವ ಅಪಾಯ ಎದುರಾಗಿದೆ.ಕಾರಣ ಗುತ್ತಿಗೆದಾರ ಸಂಸ್ಥೆ ತನ್ನ ಯಾವತ್ತಿನ ನಿರ್ಲಕ್ಷ್ಯ ಮುಂದುವರಿಸದೆ ಕೂಡಲೆ ಕಾಮಗಾರಿಗೆ ಮುಂದಾಗುವಂತೆ ಅವರು ಎಚ್ಚರಿಸಿದರು.
ಹಿರೇಗುತ್ತಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ,ಮಾಜಿ ಜಿಪಂ ಸದಸ್ಯ ಹೊನ್ನಪ್ಪ ನಾಯಕ ಮಾತನಾಡಿ ಕಳೆದ ೧೨ ವರ್ಷಗಳಿಂದ ಸರ್ಕಾರ ಮತ್ತು ಕಾಮಗಾರಿಗೆ ಸಂಬಮಧ ಪಟ್ಟ ಅಧಿಕಾರಿಗಳಿಗೆ ತ್ವರಿತ ಕಾಮಗಾರಿಗೆ ಈ ಭಾಗದ ಗ್ರಾಮಸ್ಥರು ಮನವಿ ಕೊಟ್ಟು ಹೈರಾಣಾಗಿದ್ದಾರೆ.ಇದರಿಂದ ಸಂಬಂಧಿಸಿದವರು ಈ ತನಕ ಎಚ್ಚೆತ್ತುಕೊಳ್ಳದ ಹಿನ್ನೆಲೆಯಲ್ಲಿ ಅಂತಿಮವಾಗಿ ಜಿಲ್ಲಾಧಿಕಾರಿಗಳಿಗೆ ನಿದಿಷ್ಟ ಕಾಲಮಿತಿಯೊಳಗೆ ಯೋಜಿತ ಕಾಮಗಾರಿಗಳನ್ನು ಪೂರ್ಣಗೊಳಿಸಲು ಮನವಿ ಸಲ್ಲಿಸಲು ಸಭೆ ಸರ್ವಾನುಮತದಿಂದ ನಿರ್ಧರಿಸಿದೆ.ಆತರುವಾಯ ಮುಂದಿನ ದಿನಗಳಲ್ಲಿ ಗ್ರಾಮಸ್ಥರ ನಿರ್ಧಾರದಂತೆ ಹೆದ್ದಾರಿ ಬಂದ್,ಪ್ರತಿಭಟನೆ ಇತ್ಯಾದಿ ಪ್ರತಿರೋಧ ಕ್ರಮಗಳಿಗೆ ಮುಂದಾಗಲಾಗುವುದು ಎಂದರು.
ಗ್ರಾಮಸ್ಥರ ಈ ಸಭೆಗೆ ಆಗಮಿಸಿ ಸಮಸ್ಯೆ ಬಗೆಹರಿಸಲು ಸಹಕರಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಮುಂಚಿತವಾಗಿ ಮನವಿ ಮಾಡಿದ್ದರೂ ಸಭೆಗೆ ಅವರು ಗೈರಾದ ಬಗ್ಗೆ ಸಭೆ ಖೇದ ವ್ಯಕ್ತ ಪಡಿಸಿತು
ಸಭೆಯಲ್ಲಿ ಗ್ರಾಪಂ ಉಪಾಧ್ಯಕ್ಷೆ ವೆಂಕಮ್ಮ ಹರಿಕಂತ್ರ,ಪಿಡಿಒ ವಿನಯಕುಮಾರ,ಸ್ಥಳೀಯ ಕಾಲೇಜ್ ಪ್ರಾಚಾರ್ಯ ರಾಜು ನಾಯ್ಕ,ಗ್ರಾಪಂ ಸದಸ್ಯರಾದ ನಾಗರತ್ನಾ ಗಾಂವಕರ,ರಮಾಕಾಂತ ಹರಿಕಂತ್ರ,ಇನಾಸ್ ಫರ್ನಾಂಡಿಸ್,ಮಂಗಲಾ ಹಳ್ಳೇರ,ಮಹೇಶ ನಾಯಕ,ಸವಿತಾ ಹಳ್ಳೇರ,ಬಾಲಚಂದ್ರ ನಾಯಕ,ಬೊಮ್ಮಯ್ಯ ನಾಯಕ,ಗೋಕರ್ಣ ಗ್ರಾಪಂ ಮಾಜಿ ಅಧ್ಯಕ್ಷ ನಾಗರಾಜ ಹಿತ್ತಲಮಕ್ಕಿ ಹಾಗೂ ವಿವಿಧ ಸಂಘಟನೆಗಳ ಸದಸ್ಯರು ಮುಂತಾದವರಿದ್ದರು.