

ನೇಸರಗಿ: ಮುಂಗಾರು ಹಂಗಾಮಿನಲ್ಲಿ ರೈತರು ಹೆಚ್ಚಿನ ಇಳುವರಿ ಪಡೆಯಲು ಅಗತ್ಯ ತಯಾರಿ ಮಾಡಿಕೊಳ್ಳಬೇಕು. ರೈತರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸರ್ಕಾರ ಬೀಜ-ರಸಗೊಬ್ಬರ ಪೂರೈಸುತ್ತಿದ್ದು, ಪ್ರಯೋಜನ ಪಡೆದು ಆರ್ಥಿಕ ಅಭಿವೃದ್ಧಿ ಹೊಂದಬೇಕು ಎಂದು ಶಾಸಕ ಮಹಾಂತೇಶ ದೊಡಗೌಡರ ಸಲಹೆ ನೀಡಿದ್ದಾರೆ.
ಸೋಮವಾರ ಸಮೀಪದ ನಾಗನೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಕಚೇರಿಯಲ್ಲಿ ರೈತರಿಗೆ ಸರ್ಕಾರದಿಂದ ನೀಡಲಾದ ಬೀಜ ವಿತರಿಸಿ ಮಾತನಾಡಿದರು. ಲಾಕ್‌ಡೌನ್ ಹಾಗೂ ಇನ್ನಿತರ ಸಮಸ್ಯೆಗಳಿಂದ ರೈತರು ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದಾರೆ. ಹಾಗಾಗಿ ಉತ್ತಮ ಇಳುವರಿ ಪಡೆಯಲು ವೈಜ್ಞಾನಿಕ ವಿಧಾನಗಳನ್ನು ಅನುಸರಿಸಿ ಕೃಷಿ ಕೈಗೊಳ್ಳಬೇಕು ಎಂದರು. ಅಧಿಕಾರಿಗಳು ರೈತರಿಗೆ ಬೀಜ ವಿತರಿಸುವಲ್ಲಿ ಸಮಸ್ಯೆ ಮಾಡಬಾರದು. ಉತ್ತಮ ಇಳುವರಿ ಬರುವಂತೆ ಗುಣಮಟ್ಟದ ಬೀಜ ವಿತರಿಸಬೇಕು. ಗುಣಮಟ್ಟದಲ್ಲಿ ಸಮಸ್ಯೆ ಕಂಡುಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಕೃಷಿ ಅಧಿಕಾರಿ ಆರ್.ಐ.ಕುಂಬಾರ ಮಾತನಾಡಿ, ಹವಾಮಾನ ಇಲಾಖೆ ಪ್ರಕಾರ ಮೇ ತಿಂಗಳ ಅಂತ್ಯದಲ್ಲಿ ಮಳೆಯಾಗಲಿದ್ದು, ಪೂರ್ಣ ಪ್ರಮಾಣದಲ್ಲಿ ಭೂಮಿ ಹಸಿಯಾಗಿ ಹದಗೊಂಡ ನಂತರವೇ ರೈತರು ಬಿತ್ತನೆ ಕಾರ್ಯ ಆರಂಭಿಸಬೇಕು ಎಂದು ತಿಳಿಸಿದರು.ಕೃಷಿ ಅಧಿಕಾರಿ ಬಿ.ಎಸ್.ಚಿಕ್ಕಮಠ, ಗ್ರಾಮ ಲೆಕ್ಕಾಧಿಕಾರಿ ಜಗದೀಶ ಗೌಡರ, ಪಿಕೆಪಿಎಸ್ ಅಧ್ಯಕ್ಷ ಅಶೋಕ ವಾಳದ, ಸಿ.ಬಿ.ಬಂದಕಣ್ಣವರ, ಕಾರ್ಯದರ್ಶಿ ದುಂಡಪ್ಪ ಕಂಡೋಜಿ, ಶಿವನಾಯ್ಕ ಇಂಚಲ ಹಾಗೂ ಪಿಕೆಪಿಎಸ್ ನಿರ್ದೇಶಕರು ಉಪಸ್ಥಿತರಿದ್ದರು.