

ಹಳೇಬೀಡು: ಭೂಮಿಯ ಫಲವತ್ತತೆಯನ್ನು ಕಾಪಾಡಿಕೊಂಡರೆ ಮಾತ್ರ ಪಾರಂಪರಿಕ ಕೃಷಿಯನ್ನು ಉಳಿಸಿಕೊಳ್ಳಲು ಸಾಧ್ಯ ಎಂದು ನಂಬಿರುವ ಹೋಬಳಿಯ ರೈತ ಸಿದ್ದಮಲ್ಲೇಗೌಡ (ಸಿದ್ದೇಶ್), ಅಲ್ಪ ಪ್ರಮಾಣದ ಭೂಮಿಯಲ್ಲಿ ಉತ್ತಮ ಬೆಳೆ ತೆಗೆಯುವ ಮೂಲಕ ಮಾದರಿಯಾಗಿದ್ದಾರೆ.
ಹಳೇಬೀಡು ಹೋಬಳಿಯ ಹುಲಿಕೆರೆ ಗ್ರಾಮದ ರೈತ ಸಿದ್ದೇಶ್, ತಮ್ಮ ಎರಡು ಎಕರೆ ಜಮೀನಿನಲ್ಲಿ ತೆಂಗಿನ ಜತೆಗೆ ಅಡಕೆ ಬೆಳೆಯುವುದಲ್ಲದೆ, ಆಗಾಗ್ಗೆ ಸಣ್ಣ ಪ್ರಮಾಣದ ತರಕಾರಿ ಕೃಷಿಯನ್ನೂ ಮಾಡಿಕೊಂಡು ತಮ್ಮ ಕುಟುಂಬದಲ್ಲಿ ರೈತ ಕಾಯಕವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.
ಹೋಬಳಿಯ ಬಹಳಷ್ಟು ಕೃಷಿ ಪ್ರದೇಶವು ನೀರಾವರಿಯಿಂದ ವಂಚಿತವಾಗಿರುವುದರಿಂದ ರೈತರು ಮಳೆಯನ್ನೇ ನೆಚ್ಚಿಕೊಂಡು ಬೆಳೆ ಮಾಡಬೇಕಿದೆ. ಕೊಳವೆ ಬಾವಿಯ ಸೌಲಭ್ಯದಿಂದ ತರಕಾರಿ ಬೆಳೆಯನ್ನು ಅಭಿವೃದ್ಧಿಪಡಿಸಿಕೊಳ್ಳಲು ಸಾಧ್ಯವಾದರೂ ಹಾಕಿದ ಬಂಡವಾಳಕ್ಕೆ ತಕ್ಕ ಲಾಭ ಗಳಿಸುವುದು ಕಷ್ಟಕರವಾಗಿದೆ. ಇಂತಹ ಸಂಕಷ್ಟದ ಸ್ಥಿತಿಯಲ್ಲೂ ವ್ಯವಸಾಯವನ್ನು ಬಿಡದೆ ಭೂಮಿಯ ಫಲವತ್ತತೆಯನ್ನೂ ಕಾಪಾಡಿಕೊಂಡಿರುವ ಸಿದ್ದೇಶ್ ಕೃಷಿಯಲ್ಲಿ ಮುನ್ನಡೆಯುತ್ತಿದ್ದಾರೆ.
ವರ್ಷಕ್ಕೆರಡು ವಾಣಿಜ್ಯ ಬೆಳೆ: ರೈತ ಸಿದ್ದೇಶ್ ತಮ್ಮ ಎರಡು ಎಕರೆ ಪ್ರದೇಶದ ಕೃಷಿ ಭೂಮಿಯಲ್ಲಿ 70 ತೆಂಗಿನ ಮರಗಳು ಇದ್ದು, ಉತ್ತಮ ಇಳುವರಿ ನೀಡುತ್ತಿದೆ. ಅಡಕೆ ಮರಗಳು ಫಲ ನೀಡುವ ಹಂತಕ್ಕೆ ಬಂದಿವೆ. ರಾಸಾಯನಿಕ ಗೊಬ್ಬರವನ್ನು ಬಳಸದೆ, ಸಾವಯವ ಮಾದರಿಯಲ್ಲಿ ತೆಂಗನ್ನು ಕಾಪಾಡಿಕೊಂಡು ಬಂದಿದ್ದಾರೆ. ಬಲಿತ ತೆಂಗಿನಕಾಯಿ, ಸೋಗೆ ಮುಂತಾದವು ಆಗಾಗ್ಗೆ ಮರದಿಂದ ಬೀಳುವ ಕಾರಣ ತರಕಾರಿ ಬೆಳೆಗಳು ನಾಶವಾಗುತ್ತವೆ. ಆದ್ದರಿಂದ ತಮ್ಮ ಹೊಲದಲ್ಲಿ ತರಕಾರಿಗೆ ಪ್ರತ್ಯೇಕ ಜಾಗ ಮಾಡಿಕೊಂಡು ಬೆಳೆಯುತ್ತಿದ್ದಾರೆ.
ಇದರ ಹೊರತಾಗಿ ಸಾಮಾನ್ಯ ಮಳೆಯ ಹಂಗಾಮಿನಲ್ಲಿ ದ್ವಿದಳ ಧಾನ್ಯಗಳ ಕೃಷಿಗೆ ಆದ್ಯತೆ ನೀಡುತ್ತಿದ್ದಾರೆ. ಒಂದೂವರೆ ತಿಂಗಳ ಹಿಂದೆ ಬಿತ್ತನೆ ಮಾಡಿದ್ದ ಚಪ್ಪರದ ಅವರೆಕಾಯಿ ಕಟಾವಿಗೆ ಬಂದಿದ್ದು ಉತ್ತಮ ಇಳುವರಿ ಹಾಗೂ ಬೆಲೆ ಸಿಗುವ ನಿರೀಕ್ಷೆಯಲ್ಲಿದ್ದಾರೆ. ಅತಿವೃಷ್ಟಿ, ಅನಾವೃಷ್ಟಿಯಂತಹ ವೈಪರೀತ್ಯದಿಂದ ಬೆಳೆಯು ನಷ್ಟವಾದರೆ, ತೆಂಗಿನಕಾಯಿ, ಕೊಬ್ಬರಿ ಮತ್ತು ಎಳನೀರು ಮಾರಾಟದಿಂದ ಹಾಕಿದ್ದ ಬಂಡವಾಳವನ್ನು ಪಡೆದುಕೊಳ್ಳುತ್ತಿದ್ದಾರೆ. ಯಾವುದೇ ಆದರೂ ವರ್ಷಕ್ಕೆ ಎರಡೇ ಬೆಳೆ ತೆಗೆಯುವ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ.
ನೀರಾವರಿ ಸೌಲಭ್ಯ ಬೇಕು
ಹೋಬಳಿಯು ಕೃಷಿ ಪ್ರಧಾನವಾದ ಪ್ರದೇಶವಾಗಿರುವುದರಿಂದ ಮಳೆಯನ್ನೇ ನೆಚ್ಚಿಕೊಂಡು ರೈತರು ವ್ಯವಸಾಯ ಮಾಡುವುದು ದಿನದಿಂದ ದಿನಕ್ಕೆ ದುಸ್ತರವಾಗುತ್ತಿದೆ. ಇಂತಹ ಸಂಕಟದ ಸ್ಥಿತಿಯಲ್ಲೂ ಸಿದ್ದೇಶ್, ಕಡಿಮೆ ನೀರನ್ನು ಬೇಡುವ ತರಕಾರಿಗಳನ್ನು ಪರ್ಯಾಯ ಕೃಷಿ ಮಾದರಿಯಲ್ಲಿ ಬೆಳೆಯುತ್ತಿದ್ದಾರೆ. ಎರಡು ಎಕರೆ ಪ್ರದೇಶದಲ್ಲಿ ಹತ್ತಿಬೀಜ ಬಿತ್ತನೆ ಮಾಡಿದರೆ ಇಳುವರಿಗೆ ಒಂದು ವರ್ಷ ಕಾಯಬೇಕು. ಅಲ್ಲಿಯವರೆಗೆ ಯಾವ ಆದಾಯವೂ ಇರುವುದಿಲ್ಲ. ತರಕಾರಿಗಳೂ ಎರಡರಿಂದ ಮೂರು ತಿಂಗಳಿನ ಸಮಯವನ್ನು ಬೇಡುತ್ತವೆ. ಹಾಗಾಗಿ ಹೊಲದ ಬದಿಯಲ್ಲಿ ಚೆಂಡು ಹೂ, ಸೇವಂತಿಗೆ ಗಿಡಗಳನ್ನು ಬೆಳೆಸಿ ಪೋಷಿಸಿದ್ದಾರೆ. ಆಗಾಗ್ಗೆ ಇದನ್ನು ಕೊಯ್ದು, ಹಾರ, ಮಾಲಿಕೆಯ ರೀತಿ ಕಟ್ಟಿ ಮಾರಾಟ ಮಾಡುತ್ತಾರೆ. ಒಬ್ಬ ಮಗ ವಿದ್ಯಾಭ್ಯಾಸದಲ್ಲಿ ತೊಡಗಿರುವುದರಿಂದ ಕೃಷಿ ಕಾಯಕಕ್ಕೆ ಪತ್ನಿ ಪುಷ್ಪಾವತಿ ಜತೆಯಾಗಿ ಸಹಕರಿಸುತ್ತಾರೆ.
ಧಾನ್ಯಗಳನ್ನು ಬೆಳೆಯುವುದು ಫಲವತ್ತತೆಗೆ ಪೂರಕ
ತರಕಾರಿಗಳನ್ನು ಬೆಳೆಯುವ ಸಂದರ್ಭದಲ್ಲಿ ಅನ್ಯ ಬೆಳೆಗೆ ಅವಕಾಶ ಇರುವುದಿಲ್ಲ. ಟೊಮ್ಯಾಟೊ, ಬೀನ್ಸ್, ಕೋಸು ಮುಂತಾದ ತರಕಾರಿ ಕೃಷಿಯಲ್ಲಿ ದಿಢೀರ್ ಲಾಭ ಗಳಿಸುವ ಸಾಧ್ಯತೆ ಇರುತ್ತದೆ, ಕೆಲವೊಮ್ಮೆ ವಿಪರೀತ ನಷ್ಟವೂ ಆಗುತ್ತದೆ. ಇಂಥ ಸಂದರ್ಭದಲ್ಲಿ ತರಕಾರಿಗಿಂತಲೂ ಬೇಳೆ ಕಾಳುಗಳನ್ನು ಬೆಳೆದು ಆದಾಯ ಪಡೆದುಕೊಳ್ಳುವ ಮಾರ್ಗವನ್ನು ಸಿದ್ದೇಶ್ ಅನುಸರಿಸುತ್ತಿದ್ದಾರೆ. ಪ್ರಸ್ತುತ ಜಮೀನಿನಲ್ಲಿ ಬಿತ್ತಿರುವ ಚಪ್ಪರದ ಅವರೆಯು ನೆಲದಲ್ಲಿ ಹರಡಿಕೊಂಡು ಬೆಳೆಯುವುದರಿಂದ ಅದರ ಬಳ್ಳಿ, ಎಲೆಗಳು ಭೂಮಿಗೆ ಸೇರಿ ಸ್ವಾಭಾವಿಕ ಪೋಷಕಾಂಶ ಉತ್ಪತ್ತಿಯಾಗುತ್ತದೆ.
ಅವರೆಕಾಯಿ ಕಟಾವಾದ ಬಳಿಕವೂ ಬಳ್ಳಿಯು ಭೂಮಿಯಲ್ಲೇ ಕರಗುವಂತೆ ನೋಡಿಕೊಳ್ಳುತ್ತಿದ್ದಾರೆ. ಇದು ಮುಂದಿನ ಬೆಳೆಗೆ ಗೊಬ್ಬರದ ರೀತಿಯಲ್ಲಿ ಸಹಾಯಕವಾಗುತ್ತಿದೆ. ವಾತಾವರಣ ಹಾಗೂ ಭೂಮಿಯಲ್ಲಿ ತೇವಾಂಶ ಕಡಿಮೆ ಇರುವ ತಿಂಗಳಲ್ಲಿ ಎಳ್ಳು, ಹುರುಳಿ, ಅಲಸಂದೆ ಮತ್ತು ತೊಗರಿಕಾಳು ಬೆಳೆಯುವ ಕೃಷಿಯಿಂದಲೂ ತಕ್ಕ ಮಟ್ಟಿಗೆ ಲಾಭ ಗಳಿಸುತ್ತಿದ್ದಾರೆ. ಮುಸುಕಿನ ಜೋಳವನ್ನು ಬಿತ್ತನೆ ಮಾಡಿದ ಬಳಿಕ ಕಟಾವು ಮಾಡುವುದಕ್ಕೆ ನಾಲ್ಕು ತಿಂಗಳು ಬೇಕಾಗುತ್ತದೆ. ಎಕರೆಗೆ 25 ರಿಂದ 30 ಸಾವಿರ ರೂ. ಖರ್ಚಾಗುತ್ತದೆ. ಕನಿಷ್ಠ 25 ಕ್ವಿಂಟಾಲ್ ಇಳುವರಿ ಬಂದರೆ ಈಗಿನ ದರದಂತೆ 50 ಸಾವಿರ ರೂ. ಗಳಿಸಬಹುದು. ದುರಾಸೆಗೆ ಬಿದ್ದು ವರ್ಷಕ್ಕೆ ಮೂರು ಬಾರಿ ಜೋಳ ಬೆಳೆಯುತ್ತೇವೆಂದು ಪ್ರಯತ್ನಿಸಿದರೆ ಇಳುವರಿ ಕಡಿಮೆಯಾಗಿ ಮುಂದಿನ ದಿನಗಳಲ್ಲಿ ತಮ್ಮ ಜಮೀನಿನಲ್ಲಿ ತರಕಾರಿಯನ್ನು ಬೆಳೆಯುವುದೂ ಕಷ್ಟವಾಗುತ್ತದೆ ಎನ್ನುತ್ತಾರೆ ಸಿದ್ದೇಶ್.
ಮಣ್ಣಿನ ಸಾರ ಉತ್ತಮಪಡಿಸಲು ನೇಗಿಲಿನಿಂದ ಉಳುಮೆ ಮಾಡಿಸಬೇಕು. ಇದೇ ಸಂದರ್ಭದಲ್ಲಿ ಮಳೆ ಬಂದರೆ, ಭೂಮಿಯು ನೀರನ್ನು ಹೀರಿಕೊಳ್ಳಲು ಸಮಯ ಕೊಡಬೇಕು. ಕಳೆನಾಶಕ ಸಿಂಪಡಿಸುವ ಬದಲು ಟ್ರಾೃಕ್ಟರ್‌ನಿಂದ ಬೇಸಾಯ ಮಾಡಿಸಬೇಕು. ಎರಡು ತಿಂಗಳ ಬಳಿಕ ಬಿತ್ತನೆಯನ್ನು ಮಾಡಿದಲ್ಲಿ ಉತ್ತಮ ಇಳುವರಿ ಪಡೆಯಲು ಸಾಧ್ಯ ಎಂಬ ಸಲಹೆಯನ್ನೂ ನೀಡುತ್ತಾರೆ. ವೈವಿಧ್ಯಮಯ ಕೃಷಿಯನ್ನು ಅನುಸರಿಸಿದರೂ ಒಂದು ಬೆಳೆಯಿಂದ ಇನ್ನೊಂದು ಬೆಳೆಗೆ ಕನಿಷ್ಠ ಒಂದರಿಂದ ಎರಡು ತಿಂಗಳು ವಿರಾಮ ನೀಡುವ ಪದ್ಧತಿ ಮೂಲಕ ವೈಜ್ಞಾನಿಕ ಕೃಷಿ ಪದ್ಧತಿಯನ್ನು ಅನುಸರಿಸಲು ಸಿದ್ದೇಶ್ ಪ್ರಯತ್ನ ಮಾಡುತ್ತಿದ್ದಾರೆ.
ವಾರ್ಷಿಕ 2 ಲಕ್ಷ ರೂ. ಆದಾಯವನ್ನು ಕೃಷಿಯಿಂದ ನಿರೀಕ್ಷೆ ಮಾಡುತ್ತೇವೆ. ಆದರೆ ಬಹಳಷ್ಟು ಬಾರಿ ನಷ್ಟವೇ ಆಗಿದೆ. ಬಂಡವಾಳ ಕಳೆದು ವರ್ಷಕ್ಕೆ 50 ಸಾವಿರ ರೂ. ಉಳಿತಾಯ ಮಾಡುವಷ್ಟರಲ್ಲಿ ಸುಸ್ತಾಗಿರುತ್ತೇವೆ. ಕೃಷಿಯಲ್ಲಿ ಆದಾಯವನ್ನು ಗಳಿಸುವುದು ಲಾಟರಿ ಹೊಡೆದಷ್ಟೇ ಅನಿರೀಕ್ಷಿತವಾಗಿರುತ್ತದೆ. ಭೂಮಿ ತಾಯಿ ಎಂದಿಗೂ ಕೈ ಬಿಡುವುದಿಲ್ಲ ಎಂಬ ನಂಬಿಕೆಯಿಂದ ವ್ಯವಸಾಯ ಮಾಡುತ್ತಿದ್ದೇನೆ. ಸಿದ್ದಮಲ್ಲೇಗೌಡ(ಸಿದ್ದೇಶ್) ರೈತ, ಹುಲಿಕೆರೆ ಗ್ರಾಮ, ಹಳೇಬೀಡು ಹೋಬಳಿ ವಿದ್ಯಾಭ್ಯಾಸ ಹಾಗೂ ಕೃಷಿ ಕಾಯಕಕ್ಕೆ ನಾವು ಒಂದೇ ಸಮಯಕ್ಕೆ ಕಾಲಿಟ್ಟೆವು. ಸಿದ್ದೇಶ್ ಅವರ ವ್ಯವಸಾಯ ಪದ್ಧತಿಯನ್ನು ಕೆಲವೊಮ್ಮೆ ನಾನು ಅನುಸರಿಸಿದ್ದೇನೆ. ಕೃಷಿ ಕೆಲಸಕ್ಕೆ ಆಳುಗಳ ಸಹಾಯ ಪಡೆದರೂ, ಪತ್ನಿಯೊಂದಿಗೆ ಸಿದ್ದೇಶ್ ದುಡಿಯುತ್ತಾರೆ. ಅವರ ಅವಿರತ ಶ್ರಮವೇ ಅಭಿವೃದ್ಧಿಗೆ ಕಾರಣವಾಗಿದೆ. ಕೃಷ್ಣೇಗೌಡ ರೈತ ಹಳೇಬೀಡು