ಮಣ್ಣು ಫಲವತ್ತಾಗಿದ್ದರೆ ಅಧಿಕ ಇಳುವರಿ

2 ckm 4
ಕಡೂರು ತಾಲೂಕು ಪಿಳ್ಳೆನಹಳ್ಳಿ ಗ್ರಾಮದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಮೂಡಿಗೆರೆ ತೋಟಗಾರಿಕಾ ಮಹಾವಿದ್ಯಾಲಯದಿಂದ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮ ನಡೆಸಿ ರೈತರಿಗೆ ಮಾಹಿತಿ ನೀಡಲಾಯಿತು. ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಧನಂಜಯ ಸ್ವಾಮಿ, ತರಕಾರಿ ವಿಭಾಗದ ವಿಜ್ಞಾನಿ ಡಾ. ದೇವರಾಜು ಉಪಸ್ಥಿತರಿದ್ದರು.
Published on

ಚಿಕ್ಕಮಗಳೂರು: ಮಣ್ಣು ಫಲವತ್ತಾಗಿದ್ದಾಗ ಮಾತ್ರ ಯಾವುದೇ ಬೆಳೆಯಲ್ಲಾದರೂ ಅಧಿಕ ಇಳುವರಿ ಪಡೆಯಲು ಸಾಧ್ಯ. ಹೀಗಾಗಿ ರೈತರು ತಮ್ಮ ಜಮೀನಿನಲ್ಲಿ ಮಣ್ಣಿನ ಫಲವತ್ತತೆ ಹೆಚ್ಚಿಸಲು ಮುಂದಾಗಬೇಕು. ಜೊತೆಗೆ ರಾಸಾಯನಿಕ ಗೊಬ್ಬರ ಬಳಕೆಯನ್ನು ಬಿಟ್ಟು ಜೈವಿಕ ಹಾಗೂ ಸಾವಯವ ಗೊಬ್ಬರ ಬಳಕೆಗೆ ಮುಂದಾಗಬೇಕು ಎಂದು ಮೂಡಿಗೆರೆ ತೋಟಗಾರಿಕಾ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಧನಂಜಯ ಸ್ವಾಮಿ ತಿಳಿಸಿದರು.

ಕಡೂರು ತಾಲೂಕು ಪಿಳ್ಳೆನಹಳ್ಳಿ ಗ್ರಾಮದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಮೂಡಿಗೆರೆ ತೋಟಗಾರಿಕಾ ಮಹಾವಿದ್ಯಾಲಯದಿಂದ ಆಯೋಜಿಸಲಾಗಿದ್ದ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗುಣಮಟ್ಟದ ಆಹಾರ ಬೆಳೆ ಉತ್ಪಾದನೆಗೆ ಮಣ್ಣಿನ ಫಲವತ್ತತೆ ಹಾಗೂ ನೀರಿನ ಲಭ್ಯತೆ ಮುಖ್ಯ ಎನ್ನುವುದನ್ನು ಅರಿಯಬೇಕು ಎಂದು ಹೇಳಿದರು.
ಉತ್ತಮ ಆಹಾರ ಸೇವನೆಯಿಂದ ಆರೋಗ್ಯ ವೃದ್ಧಿ ಸಾಧ್ಯ. ಉತ್ತಮ ಆಹಾರ ಬೆಳೆ ಉತ್ಪಾದನೆಗೆ ಮಣ್ಣು ಫಲವತ್ತತೆಯಿಂದಿರುವ ಜೊತೆಗೆ ಬೆಳೆ ಬೆಳೆಯಲು ಕಲುಷಿತ ನೀರು ಬಳಸಬಾರದು. ಬೆಳೆ ಬೆಳೆಯಲು ರಾಸಾಯನಿಕ ಗೊಬ್ಬರ ಬಳಸಿದಾಗ ಅದರ ಅಂಶಗಳು ಬೆಳೆಯಲ್ಲಿಯೂ ಸೇರಿಕೊಂಡಿರುತ್ತವೆ. ಹೀಗಾಗಿ ಸಾವಯವ ಹಾಗೂ ಜೈವಿಕ ಗೊಬ್ಬರ ಬಳಕೆಗೆ ಒಲವು ತೋರಬೇಕು ಎಂದು ತಿಳಿಸಿದರು.
ರಾಸಾಯನಿಕ ಮುಕ್ತ ಬೆಳೆ ಬೆಳೆಯುವ ವಾತಾವರಣ ನಿರ್ಮಾಣವಾಗಬೇಕು. ಆಗ ಮಾತ್ರ ಅಪೌಷ್ಟಿಕತೆ ಹಾಗೂ ಮನುಷ್ಯರ ಆರೋಗ್ಯ ಹದಗೆಡುವುದನ್ನು ತಪ್ಪಿಸಲು ಸಾಧ್ಯ. ನಮ್ಮ ಆರೋಗ್ಯ ನಾವು ಸೇವಿಸುವ ಆಹಾರದ ಮೇಲೆ ನಿರ್ಧಾರವಾಗುತ್ತದೆ ಎಂಬುದನ್ನು ಅರಿಯಬೇಕು ಎಂದರು.
ಇದೇ ವೇಳೆ ರೈತರಿಗೆ ಮಣ್ಣಿನ ಮಾದರಿ ಸಂಗ್ರಹಿಸುವ ಸರಿಯಾದ ವಿಧಾನ, ಮಣ್ಣು ಪರೀಕ್ಷೆಯ ಸರಿಯಾದ ಫಲಿತಾಂಶ ಪಡೆಯಲು ಅನುಸರಿಸಬೇಕಾದ ಮಾದರಿ ಸಂಗ್ರಹಣ ಕ್ರಮ, ಮಣ್ಣಿನ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಮಣ್ಣು ಪರೀಕ್ಷೆಯ ಮಹತ್ವ ಹಾಗೂ ಅದರಿಂದಾಗುವ ಉಪಯೋಗಗಳು, ಉತ್ತಮ ಇಳುವರಿ ಪಡೆಯುವಲ್ಲಿ ಮಣ್ಣಿನ ಪಾತ್ರ ,ಮಣ್ಣಿನ ಸಂರಕ್ಷಣೆಯ ಪ್ರಾಮುಖ್ಯತೆ ಬಗ್ಗೆ ತರಕಾರಿ ವಿಭಾಗದ ವಿಜ್ಞಾನಿ ಡಾ. ದೇವರಾಜು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಪಿಳ್ಳೆನಹಳ್ಳಿ ಗ್ರಾಮದ ರೈತರು ಹಾಗೂ ಮೂಡಿಗೆರೆ ತೋಟಗಾರಿಕಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net