

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಹೊಸಕೋಟೆ ತಾಲೂಕಿನ ದೇವಸ್ಥಾನವೊಂದರ ಸ್ಥಳಾಂತರ ಕಾರಣದಿಂದ 400 ಮೀ ಉದ್ದದ ಮಾರ್ಗದ ಕಾಮಗಾರಿ ಬಾಕಿ ಉಳಿದು ವಿಳಂಭವಾಗಿದ್ದ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ ತಿಂಗಳಲ್ಲೇ ವಾಹನ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಹೆದ್ದಾರಿ ಪ್ರಾಧಿಕಾರ ತಿಳಿಸಿದೆ.
ಎರಡು ಮಹಾನಗರಗಳ ನಡುವೆ ಪ್ರಯಾಣದ ದೂರ ಹಾಗೂ ಸಮಯವನ್ನು ಗಣನೀಯವಾಗಿ ತಗ್ಗಿಸುವ ಸಲುವಾಗಿ ಆರಂಭವಾಗಿದ್ದ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ ರಾಜ್ಯದ ಭಾಗದ 71 ಕಿ.ಮೀ ಉದ್ದದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು ವಾಹನ ಸಂಚಾರಕ್ಕೆ ಮುಕ್ತಗೊಳ್ಳಲು ದಿನಗಣನೆ ಆರಂಭವಾಗಿದೆ. ಹೊಸಕೋಟೆ ಸಮೀಪದಲ್ಲಿ ಕಾಮಗಾರಿಗೆ ತಡೆಯಾಗಿದ್ದ ದೇವಸ್ಥಾನವನ್ನು ಇತ್ತೀಚಿಗೆ ಸ್ಥಳಾಂತರಗೊಳಿಸಿದ್ದು, ತಿಂಗಳ ಅವಧಿಯಲ್ಲಿ ಕಾಮಗಾರಿ ಸಂಪೂರ್ಣಗೊಳ್ಳಲಿದೆ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಭರವಸೆ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹೊಸಕೋಟೆಯಿಂದ ಕೆಜಿಎ್ ತಾಲೂಕಿನ ಆಂದ್ರಪ್ರದೇಶ-ಕರ್ನಾಟಕ ಗಡಿಯನ್ನು ಕೇವಲ 45 ನಿಮಿಷಗಳಲ್ಲಿ ತಲುಪಬಹುದಾಗಿದೆ.
ಸ್ಯಾಟಲೈಲ್‌ನಿಂದ ರಿಂಗ್ ರಸ್ತೆ: ಹೊಸಕೋಟೆ ಬಳಿಯ ಸೆಟಲೈಟ್ ರಿಂಗ್ ರಸ್ತೆ ಸೇರುವ ಸ್ಥಳದಿಂದ ಎಕ್ಸ್‌ಪ್ರೆಸ್ ವೇ ಆರಂಭವಾಗಲಿದೆ, ಬಂಗಾರಪೇಟೆ, ಮಾಲೂರು ಹಾಗೂ ಕೆಜಿಎ್ ಬಳಿ ಇಂಟರ್‌ಚೇಂಜ್ ಇರಲಿದೆ, ಪ್ರಸ್ತುತ ಇರುವ ರಸ್ತೆಯಲ್ಲಿ ಸಾಗಿದರೆ ಈ ಮಾರ್ಗ ಕ್ರಮಿಸಲು ಸುಮಾರು ಒಂದುವರೆಯಿಂದ 2 ತಾಸು ಬೇಕಾಗುತ್ತದೆ ಆದರೆ ಈ ಎಕ್ಸ್‌ಪ್ರೆಸ್ ವೇನಲ್ಲಿ ಸಾಗಿದರೆ ಕೇವಲ ಮುಕ್ಕಾಲು ಗಂಟೆ ಸಾಕಾಗುತ್ತದೆ ಎನ್ನಲಾಗಿದೆ.
ಮಾಲೂರು, ಬಂಗಾರಪೇಟೆಗೆ ಅನುಕೂಲ: ಹೆದ್ದಾರಿ ಕಾಮಗಾರಿ ಪೂರ್ಣಗೊಂಡ ಬಳಿಕ ಬೆಂಗಳೂರಿನಿಂದ ಹೊಸಕೋಟೆ ಮಾರ್ಗವಾಗಿ ಮಾಲೂರು, ಬಂಗಾರಪೇಟೆ,ಕೆಜಿಎ್ ಕಡೆ ಸಾಗುವ ಪ್ರಯಾಣಿಕರು ಈ ಎಕ್ಸ್‌ಪ್ರೆಸ್ ವೇ ಬಳಸಬಹುದಾಗಿದೆ. ಆಂದ್ರ ಹಾಗೂ ತಮಿಳುನಾಡು ಭಾಗದ ಕಾಮಗಾರಿ ಪೂರ್ಣಗೊಂಡರೆ ವಾಹನಗಳ ಸವಾರರಿಗೆ ಶೀಘ್ರ ಹೆದ್ದಾರಿ ಪ್ರಯಾಣದ ಅನುಭವ ಲಭ್ಯವಾಗಲಿದೆ, ಪ್ರಸ್ತುತ ಈ ಮಾರ್ಗದ ಟೋಲ್ ದರ ನಿಗಧಿ ಬಗ್ಗೆ ಚರ್ಚೆ ನಡೆಯುತ್ತಿದ್ದು ಇನ್ನು ಅಂತಿಮವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಾಹನ ವೇಗದ ಮಿತಿ ಇದೆಯೇ? ಪ್ರತಿ ಗಂಟೆಗೆ ಸುಮಾರು 120 ಕಿ.ಮೀ ವೇಗದಲ್ಲಿ ವಾಹನಗಳು ಸಂಚರಿಸಲು ಅನುಕೂಲವಾಗುವಂತೆ ಹೆದ್ದಾರಿಯನ್ನು ವಿನ್ಯಾಸ ಮಾಡಲಾಗಿದೆ. ಆದರೆ ಇಷ್ಟು ಕಿ.ಮೀ ವೇಗದಲ್ಲಿ ವಾಹನ ಸಂಚಾರಕ್ಕೆ ಅನುಮತಿ ಸಿಗುವುದೇ ಎಂಬ ಆನುಮಾನವೂ ಇದೆ. ಈಗಾಗಲೇ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಅಪಘಾತ ಪ್ರಕರಣಗಳ ಹೆಚ್ಚಳದ ಹಿನ್ನೆಲೆಯಲ್ಲಿ ವೇಗಮಿತಿ ನಿಗಧಿಪಡಿಸಲಾಗಿದೆ. ಅದೇ ರೀತಿ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇನಲ್ಲೂ ವೇಗಮಿತಿ ನಿಗಧಿಪಡಿಸುವ ಬಗ್ಗೆ ಅಧಿಕಾರಿ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಎಕ್ಸ್‌ಪ್ರೆಸ್‌ವೇ ನಿರ್ಮಾಣ ಮಾಡಿ ವೇಗಮಿತಿ ನಿಗಧಿ ಮಾಡಿದರೆ ಹೇಗೆ ಎಂಬ ವಾದ ಒಂದು ಕಡೆಯಾದರೆ ವೇಗ ಮಿತಿ ನಿಗಧಿ ಮಾಡುವುದರಿಂದ ಅಪಘಾತ ಪ್ರಕರಣಗಳು ತಪ್ಪುತ್ತವೆ ಎಂಬ ವಾದವೂ ಕೇಳಿಬರುತ್ತಿದೆ. ಸಾರ್ವಜನಿಕ ವಲಯದಲ್ಲಿ ಈ ಬಗ್ಗೆ ಪರ ವಿರೋಧ ಚರ್ಚೆಗಳು ನಡೆಯುತ್ತಿದ್ದು ಅಧಿಕಾರಿಗಳು ಈ ಬಗ್ಗೆ ಅವಲೋಕನ ನಡೆಸುತ್ತಿದ್ದಾರೆ.
ಹೊಸಕೋಟೆಯಿಂದ ಆರಂಭ:
ಬಹುನಿರೀಕ್ಷೆಯ ಹೆದ್ದಾರಿ ಆರಂಭದ ಪಾಯಿಂಟ್ ಹೊಸಕೋಟೆಯಿಂದಲೇ ಚಾಲನೆಗೊಳ್ಳಲಿದೆ, ಮಾಲೂರು, ಬಂಗಾರಪೇಟೆ ಹಾಗೂ ಕೆಜಿಎ್ ತಾಲೂಕಿನ ಸುಂದರಪಾಳ್ಯ ರಾಜ್ಯದ ಇಂಟರ್‌ಚೆಂಜ್‌ಗಳಾಗಲಿವೆ, ಆಂದ್ರ ಹಾಗೂ ರಾಜ್ಯದ ಗಡಿ ತಲುಪಲು 45 ನಿಮಿಷ ಸಾಕಾಗುತ್ತದೆ, ಪ್ರಸ್ತುತ ಇರುವ ಹೆದ್ದಾರಿಯಲ್ಲಿ ಸಾಗಿದರೆ ಎರಡೂ ನಗರಗಳ ನಡುವೆ ಕ್ರಮಿಸಲು ಸುಮಾರು 6 ಗಂಟೆ ಬೇಕಾಗುತ್ತದೆ, ಎಕ್ಸ್‌ಪ್ರೆಸ್ ವೇನಲ್ಲಿ ಸಾಗಿದರೆ ಮೂರುವರೆ ಗಂಟೆ ಸಾಕಾಗುತ್ತದೆ.
ಹೊಸಕೋಟೆ ಸಮೀಪದಲ್ಲಿ ದೇವಸ್ಥಾನವೊಂದರ ಸ್ಥಳಾಂತರದಿಂದಾಗಿ ತಡವಾಗಿದ್ದ ಕಾಮಗಾರಿ ಈಗ ಪೂರ್ಣಗೊಂಡಿದೆ. ರಾಜ್ಯ ವ್ಯಾಪ್ತಿಯ 71 ಕಿ.ಮೀ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ, ಇನ್ನೊಂದು ತಿಂಗಳಲ್ಲಿ ವಾಹನ ಸಂಚಾರಕ್ಕೆ ರಸ್ತೆ ಮುಕ್ತಗೊಳ್ಳಲಿದೆ. ಹೊಸಕೋಟೆಯಿಂದ ಕೆಜಿಎ್ ತಾಲೂಕಿನ ಆಂದ್ರ ಹಾಗೂ ಕರ್ನಾಟಕ ಗಡಿಯನ್ನು ಕೇವಲ 45 ನಿಮಿಷಗಳಲ್ಲಿ ಕ್ರಮಿಸಬಹುದಾಗಿದೆ.
ವಿಲಾಸ್ ಪಿ.ಬ್ರಹ್ಮಂಕರ್, ಹೆದ್ದಾರಿ ಪ್ರಾಧಿಕಾರದ ಅಧಿಕಾರಿ