

ಆನೇಕಲ್ : ತಾನು ಓದಿದ ಸರ್ಕಾರಿ ಶಾಲೆ ಶಿಥಿಲಾವಸ್ಥೆ ತಲುಪಿರುವುದನ್ನು ಮನಗಂಡ ಸಚಿವ ರಾಮಲಿಂಗಾ ರೆಡ್ಡಿ ಬರೊಬ್ಬರಿ 1 ಕೋಟಿ ರೂಪಾಯಿ ವೆಚ್ಚದಲ್ಲಿ ಮೂರು ಅಂತಸ್ತಿನ ಶಾಲಾ ಕಟ್ಟಡ ನಿರ್ಮಿಸಿದ್ದು, ಉದ್ಘಾಟನೆಗೆ ಸಜ್ಜುಗೊಂಡಿದೆ.
ತಾಲೂಕಿನ ಶೆಟ್ಟಿಹಳ್ಳಿಯಲ್ಲಿ ವ್ಯಾಸಂಗ ಮಾಡಿದ್ದ ಸಚಿವ ರಾಮಲಿಂಗಾರೆಡ್ಡಿ ಸ್ವಂತ ಖರ್ಚಿನಲ್ಲಿ ಶಾಲೆ ನಿರ್ಮಿಸಿದ್ದು, ಕಟ್ಟಡದಲ್ಲಿ ಒಂದರಿಂದ ಐದನೇ ತರಗತಿವರೆಗೆ ಇಂಗ್ಲಿಷ್ ಹಾಗೂ ಕನ್ನಡ ಮಾಧ್ಯಮವನ್ನು ಪ್ರಾರಂಭಿಸಲು ಸಿದ್ಧತೆಗಳು ಆಗಿದೆ. ಮೇ 30ರಂದು ಶಾಲೆ ಅಧಿಕೃತವಾಗಿ ಪ್ರಾರಂಭ ಆಗಲಿದೆ. ಸ್ವಂತ ಹಣ ಹಾಗೂ ಸ್ನೇಹಿತರಿಂದ ಹಣ ಕ್ರೋಡಿಕರಿಸಿ ಉತ್ತಮ ಕಟ್ಟಡ ನಿಮಾರ್ಣ ಮಾಡಿದ್ದು, ಕಟ್ಟಡದ ಮೂರನೇ ಮಹಡಿ ಮೇಲೆ ಮಕ್ಕಳು ಆಟವಾಡಲು ವ್ಯವಸ್ಥೆ ಮಾಡಲಾಗಿದೆ.
ಶಾಲೆಗೆ ಬೇಕಾದ ಚೇರ್ ಹಾಗೂ ಟೇಬಲ್ ತರಲಾಗಿದ್ದು, ಮಕ್ಕಳ ಕಲಿಕೆಗೆ ಪೂರಕವಾದ ವಾತಾವರಣ ನಿರ್ಮಿಸಲಾಗಿದೆ. ಶಾಲೆಯಲ್ಲಿ ಶಿಕ್ಷಕರ ಕೊರತೆ ಆಗದಂತೆ ನೋಡಿಕೊಳ್ಳಲು ಶಿಕ್ಷಕರನ್ನೂ ನೇಮಿಸಲು ಸಚಿವರು ಮುಂದಾಗಿದ್ದಾರೆ.
ರಾಮಲಿಂಗಾರೆಡ್ಡಿ ಭೇಟಿ : ಮೇ 30 ರಂದು ಶಾಲೆ ಉದ್ಘಾಟನೆ ಹಿನ್ನೆಲೆಯಲ್ಲಿ ಸಚಿವ ರಾಮಲಿಂಗಾರೆಡ್ಡಿ ಪರಿಶೀಲನೆ ನಡೆಸಿದರು. "1958ರಲ್ಲಿ ನಾನು ಓದಿದ ಶಾಲೆಯಲ್ಲಿ ಶಿಕ್ಷಕರ ಕೊರತೆಯಿಂದ ಶಾಲೆ ಮುಚ್ಚಿತ್ತು, ನಾನು ಓದಿದ ಶಾಲೆ ಉಳಿಯಬೇಕು ಎನ್ನುವ ನಿಟ್ಟಿನಲ್ಲಿ ಸುಸಜ್ಜಿತ ಶಾಲಾ ಕಟ್ಟಡ ನಿಮಾರ್ಣ ಮಾಡಲಾಗಿದೆ, ಪ್ಲೇ ಹೋಂ ಕೂಡ ಮಾಡಿ ಮಕ್ಕಳಿಗೆ ಅನುಕೂಲ ಆಗುವಂತೆ ನಿಮಾರ್ಣ ಮಾಡಿದ್ದೇವೆ. ಕೀ ಎಜುಕೇಷನ್ ಫೌಂಡೇಷನ್ ನವರು ಎಲ್ಕೆಜಿ ಹಾಗೂ ಯುಕೆಜಿ ಆರಂಭಿಸಿ ಉಚಿತವಾಗಿ ಶಿಕ್ಷಣ ನೀಡಲಿದ್ದಾರೆ. ಒಂದರಿಂದ ಐದನೇ ತರಗತಿವರೆಗೆ ಶಾಲೆ ಮರು ಪ್ರಾರಂಭ ಆಗಲಿದೆ' ಎಂದು ಸಚಿವರು ವಿವರಿಸಿದರು.
ತಾಲೂಕಿನಲ್ಲಿ 20 ಶಾಲೆಗಳಲ್ಲಿ ಸಂಸ್ಥೆ ಕೆಲಸ ಮಾಡುತ್ತಿದ್ದು, ಈ ಶಾಲೆಗೆ ಪ್ಲೇ ಮಟೀರಿಯಲ್, ಶಾಲಾ ಶಿಕ್ಷಕರಿಗೆ ತರಬೇತಿ ನೀಡಿ, ಸಂಸ್ಥೆಯಿಂದ ಒಬ್ಬರು ಶಿಕ್ಷಕರು ಹಾಗೂ ಸಹಾಯಕಿ ನೀಡುತ್ತೇವೆ. | ಶ್ವೇತ ಗುಹನ್ ಕೀ ಎಜುಕೇಷನ್ ಸಂಸ್ಥಾಪಕಿ ಗ್ರಾಮ ಪಂಚಾಯಿತಿಯಿಂದ ಕಟ್ಟಡ ಮಾಡಬೇಕು ಎಂದುಕೊಂಡಿದ್ದೆವು. ಆಗ 2023ರಲ್ಲಿ ರಾಮಲಿಂಗಾರೆಡ್ಡಿ ಅವರು ನಾನೇ ಮಾಡುತ್ತೇನೆ ಅಂದರು. ಆಗ ಜಾಗದ ಲೆಕ್ಕಪತ್ರ ಕೂಡ ಸರಿಯಾಗಿ ಇರಲಿಲ್ಲ, ಕಚೇರಿ ಅಲೆದು ಖಾತೆ ಮಾಡಿಸಿದ ಬಳಿಕ, ಸಚಿವರೇ ಮುಂದೆ ನಿಂತು ಪ್ಲಾ$್ಯನ್ ಮಾಡಿಸಿ ಕಟ್ಟಡ ನಿಮಾರ್ಣ ಮಾಡಿಸಿದ್ದಾರೆ. | ಪ್ರಭಾಕರ ರೆಡ್ಡಿ ಕಟ್ಟಡ ನಿಮಾರ್ಣಕ್ಕೆ ಸಹಕರಿಸಿದವರು ಸಚಿವರು ನಮ್ಮ ಊರಿನವರು. ನಾವಿಬ್ಬರೂ ಒಟ್ಟಿಗೆ ಓದಿದ್ದೆವು, ಶಾಲೆ ಉಳಿಯಬೇಕು ಎನ್ನುವ ಕಾರಣದಿಂದ ನಾವೆಲ್ಲರೂ ಸೇರಿ ಮಾತನಾಡಿದಾಗ ಅವರು ಒಪ್ಪಿಗೆ ಕೊಟ್ಟು ಉತ್ತಮ ಕಟ್ಟಡ ನಿಮಾರ್ಣ ಮಾಡಿದ್ದಾರೆ, ಊರಿನ ಬಗ್ಗೆ ಸಚಿವರಿಗೆ ಇರುವ ಕಾಳಜಿ ಅಪಾರ. | ಬಸವರಾಜು, ರಾಮಲಿಂಗರೆಡ್ಡಿ ಸ್ನೇಹಿತರು