ಹೈಟೆಕ್ ಆಕಾಂಕ್ಷಿಗಳನ್ನು ಕಾರ್ಯಕರ್ತರೇ ತಿರಸ್ಕರಿಸಲಿದ್ದಾರೆ: ಈರಪ್ಪ

SOODHANA S IRAPPA
Published on

ಮಡಿಕೇರಿ: ಕೇವಲ ಚುನಾವಣೆ ಸಂದರ್ಭ ಮಾತ್ರ ಜೆಡಿಎಸ್ ಪಕ್ಷದಲ್ಲಿ ಕಾಣಿಸಿಕೊಳ್ಳುವ ಹೈಟೆಕ್ ಸ್ಪರ್ಧಾ ಆಕಾಂಕ್ಷಿಗಳನ್ನು ಕಾರ್ಯಕರ್ತರೇ ತಿರಸ್ಕರಿಸಲಿದ್ದಾರೆ ಎಂದು ಜಾತ್ಯತೀತ ಜನತಾದಳದ ಜಿಲ್ಲಾ ವಕ್ತಾರ ಸೂದನ ಎಸ್.ಈರಪ್ಪ ತಿಳಿಸಿದ್ದಾರೆ.


ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಕಷ್ಟದಲ್ಲಿದ್ದಾಗ ಮತ್ತೆ ಅದಕ್ಕೆ ಜೀವ ತುಂಬಿದ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಅವರೇ ಮಡಿಕೇರಿ ಕ್ಷೇತ್ರದ ಅಭ್ಯರ್ಥಿ ಸ್ಥಾನಕ್ಕೆ ಸೂಕ್ತ ವ್ಯಕ್ತಿ. ಕಾರ್ಯಕರ್ತರ ಅಭಿಪ್ರಾಯ ಕ್ರೋಢೀಕರಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಗಣೇಶ್ ಅವರಿಗೆ ಟಿಕೆಟ್ ನೀಡಲೇಬೇಕೆಂದು ವರಿಷ್ಠರಿಗೆ ಶಿಫಾರಸ್ಸು ಮಾಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.


ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾರ್ಯಕರ್ತರ ಕಡೆಗಣನೆ ಪಕ್ಷದ ಹಿನ್ನಡೆಗೆ ಕಾರಣವಾಗಿದೆ. ಚುನಾವಣೆ ಹತ್ತಿರ ಬರುವಾಗ ಪಕ್ಷವನ್ನು ಉಪಯೋಗಿಸಿಕೊಳ್ಳುವ ಅವಕಾಶವಾದಿಗಳನ್ನು ಸಾಮಾನ್ಯ ಕಾರ್ಯಕರ್ತರು ಒಪ್ಪಿಕೊಳ್ಳುವುದಿಲ್ಲ. ಪಕ್ಷದ ಕಾರ್ಯಕರ್ತರೊಂದಿಗೆ ಒಡನಾಟ ಹೊಂದದೆ ಕೇವಲ ವರಿಷ್ಠರೊಂದಿಗೆ ಮಾತ್ರ ನಿಕಟ ಸಂಪರ್ಕ ಹೊಂದಿರುವ "ಹೈಟೆಕ್" ವ್ಯಕ್ತಿಗಳನ್ನು ಕಾರ್ಯಕರ್ತರೇ ತಿರಸ್ಕರಿಸಲಿದ್ದಾರೆ. ಜೆಡಿಎಸ್‌ನಲ್ಲಿ ಅಸಂಖ್ಯಾತ ನಿಷ್ಠಾವಂತ ಕಾರ್ಯಕರ್ತರಿದ್ದು, ಅವರುಗಳನ್ನು ಸಂಘಟಿಸುವ ಕಾರ್ಯ ನಡೆಯುತ್ತಿದೆ. ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸದೆ ಎರಡೂ ಕ್ಷೇತ್ರಗಳ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಶ್ನೆಯೇ ಇಲ್ಲವೆಂದು ತಿಳಿಸಿದ್ದಾರೆ.


ಆಡಳಿತ ಪಕ್ಷದ ಮೇಲೆ ಜನಸಾಮಾನ್ಯರಿಗೆ ತೀವ್ರ ಅಸಮಾಧಾನವಿದ್ದು, ಈ ಅವಕಾಶವನ್ನು ಜೆಡಿಎಸ್ ಸದುಪಯೋಗ ಪಡಿಸಿಕೊಳ್ಳಲಿದೆ. ೨೦೧೮ ರಲ್ಲಿ ಮಹಾಮಳೆಯಿಂದ ಮನೆ ಕಳೆದುಕೊಂಡ ೮೫೦ ಬಡ ಕುಟುಂಬಗಳಿಗೆ ಮನೆ ನಿರ್ಮಿಸಿಕೊಟ್ಟ ಹೆಗ್ಗಳಿಕೆ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸಲ್ಲುತ್ತದೆ. ಮನೆ ಹಂಚಿಕೆಗೆ ಒತ್ತಾಯಿಸಿ ಜೆಡಿಎಸ್ ನಡೆಸಿದ ಪ್ರತಿಭಟನೆಯ ಫಲವಾಗಿ ಜಿಲ್ಲಾಡಳಿತ ಕೆ.ನಿಡುಗಣೆಯಲ್ಲಿ ಸಂತ್ರಸ್ತರಿಗೆ ಮನೆಗಳನ್ನು ಹಸ್ತಾಂತರಿಸಿದೆ. ಇದೊಂದು ಜಡ್ಡುಗಟ್ಟಿದ ಸರ್ಕಾರವಾಗಿದೆ ಎಂದು ಟೀಕಿಸಿರುವ ಸೂದನ ಈರಪ್ಪ, ಈ ಬಾರಿ ಕೊಡಗಿನಲ್ಲಿ ಜೆಡಿಎಸ್ ಪರ ಅಲೆ ಇದೆ ಎಂದು ಸೂದನ ಈರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net