ಗದ್ದೆಗಿಳಿದ ಹೈಸ್ಕೂಲ್ ವಿದ್ಯಾರ್ಥಿಗಳು

20sgr5a
ಭತ್ತ ನಾಟಿಯಲ್ಲಿ ತೊಡಗಿರುವ ಗಿಣಿವಾರ ಕೊಡಚಾದ್ರಿ ಶಾಲೆ ಮಕ್ಕಳು.
Published on

ಸಾಗರ: ತಾಲೂಕಿನ ಗಿಣಿವಾರ ಕೊಡಚಾದ್ರಿ ವಸತಿ ಶಾಲೆ ವಿದ್ಯಾರ್ಥಿಗಳು ಶನಿವಾರ ಹುಲಿದೇವರಬನ ಮತ್ತು ಜಡ್ಡಿನಕೊಪ್ಪ ಗ್ರಾಮದ ಗದ್ದೆಗೆ ಇಳಿದು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಗಮನ ಸೆಳೆದರು.
ಕೊಡಚಾದ್ರಿ ಶಾಲೆಯ 30ಕ್ಕೂ ಹೆಚ್ಚು ಮಕ್ಕಳು ಶನಿವಾರ ಮತ್ತು ಭಾನುವಾರ ಗದ್ದೆಗೆ ಇಳಿದು ಹಾಡಿ ಕುಣಿಯುವುದು, ಅಗೆ ಹಾಕುವುದು, ಕಳೆ ಕೀಳುವ ಜತೆಗೆ ಸಾವಯವ ಗೊಬ್ಬರವನ್ನು ಹಾಕಿ ಕೃಷಿ ಚಟುವಟಿಕೆಯಲ್ಲಿ ಸಂತೃಪ್ತಿ ಕಂಡುಕೊಂಡರು. ಐದು ವರ್ಷದಿಂದ ಮಕ್ಕಳಿಗೆ ನಾಲ್ಕು ಗೋಡೆಯ ನಡುವಿನ ಶಿಕ್ಷಣದ ಜತೆಗೆ ಕೃಷಿ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಕಲಿಸುವ ಕೆಲಸ ಕೊಡಚಾದ್ರಿ ಶಾಲಾ ಮುಖ್ಯಸ್ಥರು ಮತ್ತು ಶಿಕ್ಷಕರು ಮಾಡಿಕೊಂಡು ಬರುತ್ತಿದ್ದಾರೆ.
ಈ ಕುರಿತು ಮಾತನಾಡಿದ ಸಂಸ್ಥಾಪಕ ಎಚ್.ಪ್ರಕಾಶ್, ನಮ್ಮ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಎಂಟರಿಂದ ಹತ್ತನೇ ತರಗತಿ ಮಕ್ಕಳಿಗೆ ಐದು ವರ್ಷದಿಂದ ಕೃಷಿ ಕುರಿತು ಆಸಕ್ತಿ ಬೆಳೆಸುವ ಕೆಲಸ ಮಾಡಲಾಗುತ್ತಿದೆ. ನಾಲ್ಕು ಗೋಡೆಯ ನಡುವಿನ ಶಿಕ್ಷಣ ಪರಿಪೂರ್ಣವಲ್ಲ. ಬದಲಾಗಿ ಕೃಷಿಯ ಜತೆ ನಮ್ಮಲ್ಲಿ ಯಕ್ಷಗಾನ, ನಾಟಕ, ರಂಗ ತರಬೇತಿ, ಸಾಹಿತ್ಯಾಭ್ಯಾಸ ಇತರ ಕಾರ್ಯವನ್ನೂ ಮಾಡಿಸಲಾಗುತ್ತಿದೆ. ಈ ಬಾರಿ ವಿಶೇಷವಾಗಿ ಸಾವಯವ ಕೃಷಿ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಲಾಗಿದೆ ಎಂದು ಹೇಳಿದರು.
ಮುಖ್ಯ ಶಿಕ್ಷಕ ಬಸವರಾಜ್ ಮಾತನಾಡಿ, ಬದಲಾದ ದಿನಗಳಲ್ಲಿ ಮಕ್ಕಳಿಗೆ ಕೃಷಿ ಕುರಿತು ಸೂಕ್ತ ಮಾಹಿತಿ ಇಲ್ಲವಾಗಿದೆ. ಮಕ್ಕಳ ಮನೋವಿಕಾಸಕ್ಕೆ ಬೇಕಾದ ಶಿಕ್ಷಣ ನೀಡುವುದು ಶಿಕ್ಷಣ ಸಂಸ್ಥೆಯ ಪ್ರಮುಖ ಧ್ಯೇಯಗಳಲ್ಲಿ ಒಂದಾಗಿದ್ದು ಈ ಹಿನ್ನೆಲೆಯಲ್ಲಿ ಪ್ರತಿವರ್ಷ ಮಕ್ಕಳಿಗೆ ಕೃಷಿ ಬಗ್ಗೆ ಪ್ರಾಯೋಗಿಕ ಮಾಹಿತಿ ನೀಡಲಾಗುತ್ತಿದೆ. ಅನ್ನದಾತರ ಮಕ್ಕಳು ರೈತಾಪಿ ಕೆಲಸವನ್ನು ಮುಂದುವರಿಸಿಕೊಂಡು ಹೋಗಬೇಕು ಮತ್ತು ಅದರ ಮಹತ್ವ ಮಕ್ಕಳಿಗೆ ಚಿಕ್ಕಂದಿನಿಂದಲೇ ಮನವರಿಕೆ ಆಗಬೇಕು ಎಂಬುದು ನಮ್ಮ ಅಭಿಲಾಷೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net