ಹೈಸ್ಕೂಲ್‌ಗೆ ಕಿಡಿಗೇಡಿಗಳ ಕಾಟ - ಕಂಪ್ಲಿಯ ಪ್ರತಿಷ್ಠಿತ ಷಾ.ಮಿಯಾಚಂದ್ ಪ್ರೌಢಶಾಲೆ ಛಾವಣಿಗೆ ದುರಸ್ತಿ ಭಾಗ್ಯ

21 KAMPLI 02
ಕಂಪ್ಲಿಯ ಪ್ರತಿಷ್ಠಿತ ಷಾ.ಮಿಯಾಚಂದ್ ಸರ್ಕಾರಿ ಹೈಸ್ಕೂಲ್ ಛಾವಣಿ ಹಾಳಾಗಿರುವುದು.
Published on

ವಿಜಯವಾಣಿ ವಿಶೇಷ ಕಂಪ್ಲಿ

ಎಪ್ಪತ್ತೆಂಟು ವಸಂತಗಳನ್ನು ಕಂಡ ಪಟ್ಟಣದ ಪ್ರತಿಷ್ಠಿತ ಷಾ.ಮಿಯಾಚಂದ್ ಬಾಲಕರ ಸರ್ಕಾರಿ ಪ್ರೌಢಶಾಲೆ ಛಾವಣಿ ದುರಸ್ತಿಗೆ ಶಿಕ್ಷಣ ಇಲಾಖೆಯಿಂದ 15 ಲಕ್ಷ ರೂ. ಅನುದಾನ ದೊರೆತಿದ್ದು, ಶಾಲೆಯ ಕಿಟಕಿ, ಬಾಗಿಲು, ಸಿಸಿ ಕ್ಯಾಮರಾ ಹಾಳು ಮಾಡುವ ಕಿಡಿಗೇಡಿಗಳ ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕಿದೆ.

1945ರಲ್ಲಿ ಸ್ಥಾಪನೆಗೊಂಡ ಪ್ರೌಢಶಾಲೆ ತಾಲೂಕಿನಲ್ಲೇ ಪ್ರತಿಷ್ಠಿತ ಶಾಲೆಯಾಗಿದ್ದು, ಮೂಲಸೌಕರ್ಯಗಳಿಂದ ನರಳುತ್ತಿದೆ. 1980ಕ್ಕೂ ಮೊದಲು 6ರಿಂದ 10ನೇ ತರಗತಿವರೆಗೆ ನಡೆಯುತ್ತಿತ್ತು. 1980ರ ಶೈಕ್ಷಣಿಕ ವರ್ಷದಿಂದ ಈತನಕವೂ 8ನೇ ತರಗತಿಯಿಂದ ಹತ್ತನೇ ತರಗತಿವರೆಗೆ ಕಾರ್ಯನಿರ್ವಹಿಸುತ್ತಿದೆ. ಸದ್ಯ 319 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಕಿಡಿಗೇಡಿಗಳಿಂದ ಜಖಂ ಆದ ಷಾ.ಮಿಯಾಚಂದ್ ಸರ್ಕಾರಿ ಪ್ರೌಢಶಾಲೆ ಬಾಗಿಲು.
ಕಿಡಿಗೇಡಿಗಳಿಂದ ಜಖಂ ಆದ ಷಾ.ಮಿಯಾಚಂದ್ ಸರ್ಕಾರಿ ಪ್ರೌಢಶಾಲೆ ಬಾಗಿಲು.

ಹಳೇ ಶಾಲೆಯಾಗಿದ್ದು, ಹಲವರ ಭಾವನಾತ್ಮಕ ಮನೋಭಾವದಿಂದ ಶಾಲಾ ಕಟ್ಟಡ ಆಧುನೀಕರಣಗೊಂಡಿಲ್ಲ. ಛಾವಣಿಗೆ ಹಾಕಿದ ಕೆಂಪು ಹೆಂಚುಗಳು ಒಡೆದು ಹೋಗಿವೆ. ತೀರು, ಜಂತಿಗಳು ಶಿಥಿಲಗೊಂಡಿವೆ. ಮಳೆಗಾಲದಲ್ಲಿ ಸೋರುವುದರಿಂದ ದಾಖಲೆಗಳ ರಕ್ಷಣೆ ಸವಾಲಾಗಿದೆ.
ಪಾಠ-ಪ್ರವಚನಕ್ಕೂ ಸೋರುವ ಹಾಗೂ ಶಿಥಿಲ ಛಾವಣಿ ಅಡ್ಡಿಯಾಗಿದ್ದು, ಮಳೆಗಾಲದಲ್ಲಿ ಕಟ್ಟಡಕ್ಕೆ ವಿದ್ಯುತ್ ಸ್ಪರ್ಶವಾಗುವ ಸಂಭವವಿದೆ. ಪರೀಕ್ಷಾ ಸಂದರ್ಭದಲ್ಲೂ ತೊಂದರೆ ತಪ್ಪಿಲ್ಲ. ಅಡುಗೆ ಕೋಣೆಯೂ ಸೋರುವುದರಿಂದ ಆಹಾರ ತಯಾರಿಕೆಗೆ ಸಮಸ್ಯೆಯಾಗಿದೆ. ಕಟ್ಟಡ ಗಟ್ಟಿಮುಟ್ಟಾಗಿದ್ದು ಶಿಥಿಲ ಛಾವಣಿಯನ್ನು ತುರ್ತಾಗಿ ದುರಸ್ತಿಗೊಳಿಸಬೇಕಿದೆ.

ಕಿಡಿಗೇಡಿಗಳ ಕಾಟ:
ಪ್ರತಿಷ್ಠಿತ ಶಾಲೆಗೆ ಮದ್ಯವ್ಯಸನಿಗಳ ಕಾಟ ವಿಪರೀತವಾಗಿದೆ. ಶಾಲೆಯ ಕಿಟಕಿ ಮುರಿದು ಒಳನುಗ್ಗುವ ಕಿಡಿಗೇಡಿಗಳು, ಬಾಗಿಲು ಮುರಿಯುವುದು, ನೀರಿನ ಪೈಪ್‌ಗಳನ್ನು ಜಖಂಗೊಳಿಸುವುದು, ಸಿಸಿ ಕ್ಯಾಮರಾ ಇತರ ಸಾಮಗ್ರಿ ನಾಶಪಡಿಸುತ್ತಿದ್ದಾರೆ. ಮದ್ಯ ಸೇವಿಸಿ ಖಾಲಿ ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಿದ್ದು, ಈ ಕಿಡಿಗೇಡಿಗಳನ್ನು ಗುರುತಿಸಿ ತಕ್ಕ ಪಾಠ ಕಲಿಸುವ ಅಗತ್ಯವಿದೆ.

ಹಳೇ ವಿದ್ಯಾರ್ಥಿಗಳ ಸಂಘ ಅಗತ್ಯ
ಹಳೇ ಶಾಲೆಯ ಅಂದ ಚೆಂದ ಕಾಪಾಡಿಕೊಂಡು, ಅದರ ಪ್ರತಿಷ್ಠೆ ಹೆಚ್ಚಿಸಲು ಹಳೇ ವಿದ್ಯಾರ್ಥಿಗಳು ಸಂಘ ಸ್ಥಾಪನೆ ಮೂಲಕ ಶಾಲೆಗೆ ಮೂಲಸೌಕರ್ಯ ಒದಗಿಸಲು ಮುಂದಾಗಬೇಕಿದೆ. ಶಾಲೆಯ ಒಟ್ಟು ವಿಸ್ತೀರ್ಣ, ಒಡೆತನದ ಜಮೀನು, ಕಟ್ಟಡ ಹಾಗೂ ಆದಾಯ ಸಂಗ್ರಹಣೆ ಪ್ರಸ್ತುತ ಸ್ಥಿತಿಗತಿ ಸಂಗ್ರಹಿಸಲು, ಆದಾಯವನ್ನು ಶಾಲಾ ಆಡಳಿತ ಮಂಡಳಿಗೆ ಒದಗಿಸುವಲ್ಲಿ ಜಿಲ್ಲಾಧಿಕಾರಿ ವಿಶೇಷ ಅಧಿಕಾರಿಯನ್ನು ಗೊತ್ತುಪಡಿಸಬೇಕಿದೆ. ಮೇಲಾಗಿ ಶಾಲೆ ಆಸ್ತಿ ಸಂರಕ್ಷಿಸುವಲ್ಲಿ ಹಳೇ ವಿದ್ಯಾರ್ಥಿಗಳು ಟೊಂಕಕಟ್ಟಿ ಶ್ರಮಿಸಬೇಕಿದೆ.

ಪ್ರತ್ಯೇಕ ಅಡುಗೆ ಕೋಣೆ, ಪ್ರತಿ ತರಗತಿಗೂ ಸ್ಮಾರ್ಟ್‌ಕ್ಲಾಸ್, ಊಟದ ಕೋಣೆ (ಡೈನಿಂಗ್‌ಹಾಲ್) ಸೌಲಭ್ಯ ಬೇಕಿದೆ. ಹಾಳಾದ ಕಿಟಕಿ ದುರಸ್ತಿಗೊಳಿಸಬೇಕು. ಪ್ರತಿ ಕೋಣೆಗೂ ಬಾಗಿಲು ಅಳವಡಿಸಿ ಫ್ಯಾನ್ ಸೌಲಭ್ಯ ಕಲ್ಪಿಸಬೇಕು. ಎಲ್ಲ ಕೊಠಡಿಗೂ ಸಿಸಿ ಕ್ಯಾಮರಾ ಅಳವಡಿಕೆಯಾಗಬೇಕಿದೆ. ಕಟ್ಟಡಕ್ಕೆ ಸುಣ್ಣ, ಬಣ್ಣ ಬಳಿಸಬೇಕಿದ್ದು ಸರ್ಕಾರ ಅನುದಾನ ಒದಗಿಸಬೇಕು.ಎನ್.ನಾಗರಾಜಎಸ್ಡಿಎಂಸಿ ಅಧ್ಯಕ್ಷ, ಷಾ.ಮಿಯಾಚಂದ್ ಸರ್ಕಾರಿ ಹೈಸ್ಕೂಲ್, ಕಂಪ್ಲಿ

ಕಟ್ಟಡದ ಪಾರಂಪರಿಕ ಸೊಬಗು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಛಾವಣಿ ದುರಸ್ತಿ, ಶಿಥಿಲ ತೀರು, ಜಂತಿ, ಮರದ ಪಟ್ಟಿಗಳ ಬದಲಾವಣೆಗೆ ಉದ್ದೇಶಿಸಲಾಗಿದೆ. ಹೊಸದಾಗಿ ಜೋಡಿಸಿದ ಹೆಂಚುಗಳ ಮೇಲೆ ಡಾಂಬರೀಕರಣ ಅಥವಾ ಸಿಮೆಂಟ್ ಮಾಡಿಸಿ ನೀರು ಸೋರದಂತೆ ದುರಸ್ತಿಗೊಳಿಸಲಾಗುವುದು.ಟಿ.ಎಂ.ಬಸವರಾಜ್ಉಪ ಪ್ರಾಚಾರ್ಯ, ಷಾ.ಮಿಯಾಚಂದ್ ಸರ್ಕಾರಿ ಹೈಸ್ಕೂಲ್, ಕಂಪ್ಲಿ

ಷಾ.ಮಿಯಾಚಂದ್ ಸರ್ಕಾರಿ ಪ್ರೌಢಶಾಲೆ ಛಾವಣಿ ದುರಸ್ತಿಗೆ ಉಳಿಕೆ ಅನುದಾನದಡಿ 15 ಲಕ್ಷ ರೂ. ಒದಗಿಸಲಾಗಿದೆ. ಶಾಲೆಗೆ ಅಗತ್ಯ ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು.ಅಂದಾನಪ್ಪ ಎಂ.ವಡಿಗೇರಿಡಿಡಿಪಿಐ, ಬಳ್ಳಾರಿ

ಶಾಲಾ ಕಟ್ಟಡದ ಪಾರಂಪರಿಕ ಸ್ವರೂಪಕ್ಕೆ ಧಕ್ಕೆಯಾಗದಂತೆ ದುರಸ್ತಿಗೊಳಿಸಬೇಕು. ಕಟ್ಟಡ ಬಿಗಿಯಾಗಿದ್ದು ಛಾವಣಿ ಮಾತ್ರ ಭದ್ರಪಡಿಸಬೇಕು. ಮೂಲಸೌಕರ್ಯ ಒದಗಿಸಲು ಜಿಲ್ಲಾಡಳಿತ ಮುತುವರ್ಜಿ ತೋರಬೇಕು. ಶಾಲೆಯ ಆಸ್ತಿಗಳ ಹದ್ದುಬಸ್ತು, ನಿರ್ವಹಣೆಗೆ ವಿಶೇಷ ಅಧಿಕಾರಿಯನ್ನು ಗೊತ್ತುಪಡಿಸಬೇಕು.ಅಯೋದಿ ವೆಂಕಟೇಶ್ಹಳೇ ವಿದ್ಯಾರ್ಥಿ ಮತ್ತು ಪುರಸಭೆ ಮಾಜಿ ಅಧ್ಯಕ್ಷ, ಕಂಪ್ಲಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net