

ಘಟಪ್ರಭಾ: ಎರಡು ತಿಂಗಳಿಂದ ರಸಗೊಬ್ಬರ ಇಲ್ಲದೆ ರೈತರು ಪರದಾಡುತ್ತಿದ್ದಾಗ ಕೆಲವು ಖಾಸಗಿ ಅಂಗಡಿಯವರು ರಸಗೊಬ್ಬರವನ್ನು ಇಟ್ಟುಕೊಂಡು ಸರ್ಕಾರ ನಿಗದಿ ಪಡಿಸಿದ ದರಕ್ಕಿಂತ ಹೆಚ್ಚು ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ಇದನ್ನು ಖಂಡಿಸಿ ಗೋಕಾಕ ಹಾಗೂ ಮೂಡಲಗಿ ತಾಲೂಕಿನ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಅರಬಾವಿಯಲ್ಲಿರುವ ಕೃಷಿ ಇಲಾಖೆಯ ಮುಂದೆ ರೈತರು ಪ್ರತಿಭಟಿಸಿ ಅಧಿಕಾರಿಗಳನ್ನು ತರಟೆಗೆ ತೆಗೆದುಕೊಂಡು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರೈತರ ಪ್ರತಿಭಟನೆಗೆ ಮಣಿದ ಕೃಷಿ ಅಧಿಕಾರಿಗಳು ಗೋಕಾಕ ಹಾಗೂ ಮೂಡಲಗಿ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರಾದ ಎಂ.ಎಂ. ನದಾಫ್ ನೇತೃತ್ವದಲ್ಲಿ ರಸಗೊಬ್ಬರ ಅಂಗಡಿಗಳ ತಪಾಸಣೆ ನಡೆಸಿದಾಗ ಕಾನೂನು ಉಲ್ಲಂಘನೆ ಮಾಡಿದ ತುಕ್ಕಾನಟ್ಟಿ ಗ್ರಾಮದ ಹುಲಕುಂದ ಬ್ರದರ್ಸ್ ಕೃಷಿ ಪರಿಕರ ಮಾರಾಟ ಕೇಂದ್ರದ ಪರವಾನಗಿಯನ್ನು ರದ್ದು ಮಾಡಿದ್ದಾರೆ.
ರೈತ ಮುಖಂಡ ಚೂನಪ್ಪ ಪೂಜೇರಿ ಮಾತನಾಡಿ, ಹೆಚ್ಚಿನ ದರಕ್ಕೆ ರಸಗೊಬ್ಬರ ಮಾರಾಟ ಮಾಡುತ್ತಿರುವ ಖಾಸಗಿ ರಸಗೊಬ್ಬರ ಅಂಗಡಿಯವರ ಮೇಲೆ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು. ಅಧಿಕಾರಿಗಳು ನಿರ್ಲಕ್ಷೃ ಮಾಡಿದ್ದರಿಂದ ಅನಿರ್ವಾಯವಾಗಿ ನಾವು ಪ್ರತಿಭಟನೆ ಮಾಡುವಂತಾಗಿದೆ. ಅಧಿಕಾರಿಗಳು ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಇನ್ನೂ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಗುರುನಾಥ ಹುಕ್ಕೇರಿ, ಕುಮಾರ ಮರ್ದಿ, ಪದ್ಮಣ್ಣ ಉಂದ್ರಿ, ಮಂಜು ಗದಾಡಿ, ಪಾಂಡು ಬೀರನಗಡ್ಡಿ ಇತರರು ಇದ್ದರು.
ಈಗ ಒಂದು ಅಂಗಡಿಯ ಪರವಾನಗಿಯನ್ನು ರದ್ದು ಮಾಡಲಾಗಿದ್ದು ಇನ್ನು ಕೆಲವರಿಗೆ ನೋಟಿಸ್ ನೀಡಲಾಗಿದೆ. ಶನಿವಾರ ಗೋಕಾಕ ಹಾಗೂ ಮೂಡಲಗಿ ತಾಲೂಕಿನ ಎಲ್ಲ ಡೀಲರ್ಸ್‌ಗಳ ಸಭೆ ಕರೆಯಲಾಗಿದೆ. ಕಾನೂನನ್ನು ಪಾಲನೆ ಮಾಡದ ಹಾಗೂ ರೇಟ್ ಬೋರ್ಡ್ ಹಾಕದವರ ಮೇಲೆ ಕ್ರಮ ಕೈಗೊಳ್ಳಲಾಗುವುದು.| ಎಂ.ಎಂ. ನದಾಫ್ ತಾಲೂಕು ಸಹಾಯಕ ಕೃಷಿ ನಿರ್ದೇಶಕ