ಏರಿದ ತೆಂಗಿನಕಾಯಿ, ಇಳಿಯದ ಎಳನೀರು

coco
Published on

 ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ

ಕಳೆದೊಂದು ವರ್ಷದಿಂದ ಏರಿಕೆ ಕಂಡ ಎಳನೀರು ದರ ಇಳಿಯುತ್ತಿಲ್ಲ, ಏತನ್ಮಧ್ಯೆ ತೆಂಗಿನ ಕಾಯಿ ದರ ದಾಖಲೆ ಮಟ್ಟದಲ್ಲಿ ಏರಿಕೆಯಾಗುತ್ತಿರುವುದು ಗ್ರಾಹಕರ ಜೇಬಿಗೆ ಕತ್ತರಿ ಬೀಳುವಂತಾಗಿದೆ.

ತೆಂಗಿನತುರಿ ಬೀಳದೆ ಯಾವುದೇ ಅಡುಗೆ ರುಚಿಸುವುದಿಲ್ಲ ಎಂಬ ಮಾತಿದೆ ಆದರೆ ಏರುತ್ತಿರುವ ತೆಂಗಿನ ಕಾಯಿ ದರ ಊಟವೂ ರುಚಿಸದಂತೆ ಮಾಡಿದೆ. ಗುಣಮಟ್ಟದ ಎಳನೀರು 60 ರೂಪಾಯಿ ಮಾರಾಟವಾಗುತ್ತಿದ್ದರೆ 1 ಕೆ.ಜಿ ತೆಂಗಿನ ಕಾಯಿ 90 ರೂ.ವರೆಗೆ ಏರಿಕೆ ಕಂಡಿದೆ.

ಒಂದೆಡೆ ಆರೋಗ್ಯ ಕಾಳಜಿಗಾಗಿ ಎಳನೀರು ಕುಡಿಯುವ ಗ್ರಾಹಕರು ಕೈಕೈ ಹಿಸುಕಿಕೊಳ್ಳುವಂತಾಗಿದ್ದರೆ, ಮನೆವಾರ್ತೆ ನೋಡಿಕೊಳ್ಳುವ ಮಹಿಳೆಯರು ತೆಂಗಿನಕಾಯಿ ತುರಿಯಲು ಮೀನಮೇಷ ಎಣಿಸುವಂತಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆ ಅತೀ ಅವಶ್ಯ ಎನಿಸುವ ತೆಂಗಿನ ದರ ದಾಖಲೆ ಮಟ್ಟದಲ್ಲಿ ಏರಿಕೆಯಾಗಿರುವುದು ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.

ಹೋಟೆಲ್ ಉದ್ಯಮಕ್ಕೆ ಬಿಸಿ: ಸಾಮಾನ್ಯವಾಗಿ ಪ್ರತಿ ಹೋಟೆಲ್‌ಗಳಲ್ಲೂ ಇಡ್ಲಿ ಚಟ್ನಿ, ದೋಸೆ ಚಟ್ನಿ, ಉಪ್ಪಿಟ್ಟು ಚಟ್ನಿ ಹೀಗೆ ಚಟ್ನಿ ಇಲ್ಲದೆ ಪ್ರಮುಖ ತಿಂಡಿಯೇ ಇರುವುದಿಲ್ಲ. ಅದರಲ್ಲೂ ಗ್ರಾಮೀಣ ಭಾಗಗಳಲ್ಲಿ ಕಾಯಿಚಟ್ನಿ ಚಪ್ಪರಿಸುವ ಗ್ರಾಹಕರ ಸಂಖ್ಯೆ ದೊಡ್ಡದಿದೆ. ಈಗಾಗಲೇ ಹಾಲಿನ ದರ ಏರಿಕೆಯಿಂದ ಕಾಫಿ, ಟೀ ದರ ಏರಿಸಿರುವ ಹೋಟೆಲ್‌ಗಳವರು ತಿಂಡಿಯ ದರಗಳನ್ನು ಏರಿಸಿದರೆ ಗ್ರಾಹಕರು ಹೋಟೆಲ್‌ಗೆ ಬರುವುದಕ್ಕೆ ಹಿಂದೇಟು ಹಾಕುವರೇ ಎಂಬ ಆತಂಕದಲ್ಲಿದ್ದಾರೆ. ಇದರಿಂದ ಹೋಟೆಲ್ ಉದ್ಯಮದವರಿಗೆ ಸಾಕಷ್ಟು ಆರ್ಥಿಕ ನಷ್ಟ ಎದುರಾಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ.

ಜಿಲ್ಲೆಯಲ್ಲಿ ಬೆಳೆಗಾರರ ಹರ್ಷ: ಗ್ರಾಮಾಂತರ ಜಿಲ್ಲೆಯ ತೋಟಗಾರಿಕೆ ಬೆಳೆಗಳ ಪೈಕಿ ತೆಂಗಿನ ಬೆಳೆಯೂ ಮುಂಚೂಣಿಯಲ್ಲಿದೆ. ಆದರೆ ಕಳೆದ ವರ್ಷ ಮಳೆಕೊರತೆ ಹಾಗೂ ತೆಂಗಿನ ಗಿಡಗಳಿಗೆ ಕಾಡುವ ಕೀಟಬಾಧೆಯಿಂದ ಇಳುವರಿಯಲ್ಲಿ ಭಾರಿ ಕಡಿತವಾಗಿತ್ತು. ಆದರೆ ದರ ಏರಿಕೆಯಿಂದಾಗಿ ಬೆಳೆಗಾರರಿಗೆ ಸ್ವಲ್ಪ ಮಟ್ಟದ ಆರ್ಥಿಕ ಚೇತರಿಕೆ ಕಂಡುಬರುತ್ತಿದೆ. ತೋಟಗಳಿಗೆ ಬಂದು ಎಳನೀರು ಖರೀದಿಸಲಾಗುತ್ತಿದೆ. ಆದರೆ ತೆಂಗಿನ ದರ ಗಗನಮುಖಿಯಾಗಿರುವುದರಿಂದ ಬೆಳೆಗಾರರು ಸಹ ತೆಂಗಿನ ಕಾಯಿ ಮಾರಾಟಕ್ಕೆ ಒಲವು ತೋರಿಸುತ್ತಿದ್ದಾರೆ. ಮಾರುಕಟ್ಟೆಗಳಲ್ಲಿ ಬೇಡಿಕೆಯಷ್ಟು ತೆಂಗು ಹಾಗೂ ಎಳನೀರು ಪೂರೈಕೆಯಾಗದೆ ದಿನೆ ದಿನೇ ದರ ಏರಿಕೆಯತ್ತ ಸಾಗಿದೆ. ಉತ್ತಮ ಗಾತ್ರದ ತೆಂಗಿನಕಾಯಿ 800 ಗ್ರಾಂ ನಿಂದ 1 ಕೆಜಿ ವರೆಗೆ ತೂಗುವುದರಿಂದ 1 ಕಾಯಿಗೆ 85 ರಿಂದ 90 ರೂಪಾಯಿ ನೀಡುವಂತಾಗಿದೆ.

ದೇವಸ್ಥಾನದ ವ್ಯಾಪಾರಿಗಳಿಗೆ ನಷ್ಟ: ಜಿಲ್ಲೆಯಲ್ಲಿನ ಘಾಟಿ ಸುಬ್ರಹ್ಮಣ್ಯ, ಸೋಂಪುರ ಹೋಬಳಿಯಲ್ಲಿನ ಶಿವಗಂಗೆ, ಮಧುರೆಯ ಶನಿಮಹತ್ಮಾ ದೇವಸ್ಥಾನ ಸೇರಿ ಹಲವು ಪ್ರಮುಖ ದೇಗುಲಗಳಲ್ಲಿ ಪೂಜೆಸಾಮಗ್ರಿ ಮಾರಾಟ ಮಾಡುವ ವ್ಯಾಪಾರಿಗಳಿಗೆ ಕಳೆದೆರಡು ತಿಂಗಳಿಂದ ಸರಿಯಾದ ವ್ಯಾಪಾರವಿಲ್ಲದಂತಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಪೂಜಾಸಾಮಗ್ರಿಗಳಲ್ಲಿ ಅಗ್ರಸ್ಥಾನಪಡೆಯುವ ತೆಂಗಿನ ಕಾಯಿ ದರ ಏರಿಕೆಯಿಂದ ದೇಗುಲಕ್ಕೆ ಬರುವ ಭಕ್ತರು ಕೇವಲ ಹೂ, ಕಡ್ಡಿ, ಕರ್ಪೂರಕ್ಕೆ ಸೀಮಿತವಾಗುತ್ತಿದ್ದಾರೆ. ಇದರಿಂದ ತೆಂಗಿನಕಾಯಿ ಸಹಿತ ಸಮಗ್ರ ಪೂಜಾ ಸಾಮಾಗ್ರಿ ಮಾರಾಟದ ಬದಲಿಗೆ ಬಿಡಿಬಿಡಿಯಾಗಿ ವ್ಯಾಪಾರ ಮಾಡಲಾಗುತ್ತಿದೆ.

ಚಿಪ್ಪಿಗೂ ಬೇಡಿಕೆ: ಕೊಬ್ಬರಿ, ತೆಂಗಿನಕಾಯಿ ಮತ್ತು ಎಳನೀರು ಬೆಲೆ ಏರಿಕೆಯಾಗುತ್ತಿದ್ದಂತೆ ತೆಂಗಿನಕಾಯಿ ಚಿಪ್ಪಿಗೂ ಬೇಡಿಕೆ ಕುದುರಿದೆ ಟನ್ ಚಿಪ್ಪು 28 ಸಾವಿರ ರೂಪಾಯಿ ಎನ್ನಲಾಗುತ್ತಿದೆ ಹಿಂದಿನ ವರ್ಷಗಳಲ್ಲಿ ಟನ್ ಗೆ ಏಳೆಂಟು ಸಾವಿರ ರೂಪಾಯಿ ಇರುತ್ತಿತ್ತು. ಕಳೆದ ಸಾಲಿನಲ್ಲಿ 18 ರೂಪಾಯಿ ಆಸುಪಾಸಿನಲ್ಲಿತ್ತು. ಈ ಬಾರಿ ಬರೋಬ್ಬರಿ 28 ಸಾವಿರ ರೂ ಗಳಿಗೆ ತಲುಪಿದೆ. ಚಿಪ್ಪಿನ ಉತ್ಪಾದನೆ ಇಳಿಮುಖವಾಗಿದ್ದು ಚಿಪ್ಪಿಗೆ ಭಾರಿ ಬೇಡಿಕೆ ಬಂದಿದೆ.

ಕಳೆದ ಬಾರಿಯ ಬರ, ಪ್ರಸ್ತುತ ಹೆಚ್ಚಿರುವ ತಾಪಮಾನ ಹಾಗೂ ತೆಂಗಿನ ಬೆಳೆಗೆ ಕಾಡುತ್ತಿರುವ ಕಪ್ಪುತಲೆ ಹುಳ ಕೀಟಬಾಧೆಯಿಂದ ತೆಂಗಿನ ಇಳುವರಿ ಗಣನೀಯವಾಗಿ ತಗ್ಗಿದೆ. ಮಳೆ ಕೊರತೆಯಿಂದ ಮರಗಳ ಆರೈಕೆ ಇಲ್ಲದಂತಾಗಿದೆ, ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೆಂಗು ಬೆಳೆ ಇಲ್ಲವಾದರೂ ಕಪ್ಪುತಲೆ ಹುಳು ಕೀಟದಿಂದ ಗರಿಗಳು ಒಣಗಿ ಲಕಚ್ಚುವುದಕ್ಕೆ ಅಡ್ಡಿಯಾಗಿದೆ. ಇದರಿಂದ ಇಳುವರಿ ಕಡಿಮೆಯಾಗಿ ದರದಲ್ಲಿ ಭಾರಿ ಏರಿಕೆ ಕಂಡುಬರುತ್ತಿದೆ.

ಗುಣವಂತ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಬೆಂ.ಗ್ರಾಮಾಂತರ

ಮರದಿಂದ ಎಳನೀರು ಇಳಿಸುವವ ಕೂಲಿಕಾರ್ಮಿಕರು ಸಿಗುತ್ತಿಲ್ಲ. ಸಿಕ್ಕರೂ ಅವರು ಎಳನೀರು ಇಳಿಸಲು ದುಬಾರಿ ದರ ಕೇಳುತ್ತಿದ್ದಾರೆ. ಒಂದು ಎಳನೀರಿಗೆ ಏನೆಲ್ಲವೆಂದರೂ ಏಳೆಂಟು ರೂಪಾಯಿ ನೀಡಬೇಕಾಗಿದೆ. ದೊಡ್ಡ ಮರವಾದರೆ ಇನ್ನು ಹೆಚ್ಚು ಕೇಳುತ್ತಾರೆ. ಎಳನೀರು ಇಳಿಸಲು ಕೂಲಿ ಸೇರಿ ಇನ್ನಿತರ ಖರ್ಚು ಭರಿಸುವಷ್ಟರಲ್ಲಿ ನಮಗೆ ಲಾಭದ ಪ್ರಮಾಣ ಕಡಿಮೆಯಾಗುತ್ತದೆ.

ಸಿದ್ದಪ್ಪ, ತೆಂಗು ಬೆಳೆಗಾರ ದೇವನಹಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net