

ಮಾಲಂಬಿ ದಿನೇಶ್ ಶನಿವಾರಸಂತೆ
ಶಾಲೆಯಲ್ಲಿ ಪಾಠ ಮಾಡಿಕೊಂಡಿರುವ ಚಿಕ್ಕನಹಳ್ಳಿ ಗ್ರಾಮದ ಡಿ.ಪಿ.ಯತೀಶ್ ಬಿಡುವಿನ ಸಮಯ ಹಾಗೂ ರಜಾ ದಿನಗಳಲ್ಲಿ ಜಮೀನಿನಲ್ಲಿ ಕಾಫಿ, ಮೆಣಸು, ಅಡಕೆ ಕೃಷಿ ಮಾಡಿ ಯಶಸ್ಸು ಕಂಡಿದ್ದಾರೆ.
ಚಿಕ್ಕನಹಳ್ಳಿ ಗ್ರಾಮದ ದಿವಂಗತ ಪುಟ್ಟಸ್ವಾಮಿಗೌಡ ಹಾಗೂ ಜಾನಕಿ ಅವರ ಪುತ್ರ ಡಿ.ಪಿ.ಯತೀಶ್ 25 ವರ್ಷದಿಂದ ವೃತ್ತಿಯಲ್ಲಿ ಶಿಕ್ಷಕರಾಗಿದ್ದರೂ ಪ್ರವೃತ್ತಿಯಲ್ಲಿ ಕೃಷಿಕರಾಗಿ ಯಶಸ್ವಿ ಬೇಸಾಯ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ. ಹಿರಿಯರಿಂದ ಬಳುವಳಿಯಾಗಿ ಬಂದ 10 ಎಕರೆ ಜಮೀನಿನಲ್ಲಿ ಕಾಫಿ, ಕಾಳು ಮೆಣಸು, ಅಡಕೆ, ವೆನಿಲ್ಲಾ, ಬಾಳೆ, ಬಟರ್ ಫ್ರೂಟ್ ಸೇರಿದಂತೆ ಸಮಗ್ರ ಕೃಷಿ ಅಳವಡಿಸಿಕೊಂಡು ವಾರ್ಷಿಕ ಲಕ್ಷಾಂತರ ರೂ. ಆದಾಯ ಗಳಿಸುತ್ತಿದ್ದಾರೆ.
8 ಎಕರೆ ಜಾಗದಲ್ಲಿ ರೊಬಸ್ಟಾ ತಳಿಯ ಕಾಫಿ ಬೆಳೆದಿದ್ದು, ಎಕರೆಗೆ 35 ರಿಂದ 40 ಚೀಲ ಕಾಫಿ ಉತ್ಪಾದಿಸುತ್ತಿದ್ದಾರೆ. ರೊಬಸ್ಟಾ 50 ಕೆಜಿಯ ಒಂದು ಬ್ಯಾಗಿಗೆ 12ರಿಂದ 15 ಸಾವಿರ ರೂ. ಇದೆ. ಇದರಿಂದ ವಾರ್ಷಿಕ 35 ಲಕ್ಷ ರೂ.ಗೂ ಅಧಿಕ ಲಾಭ ಗಳಿಸುತ್ತಿದ್ದಾರೆ. 2 ಎಕರೆ ಜಾಗದಲ್ಲಿ ಅಡಕೆ, ವೆನಿಲ್ಲಾ, ಅರೆಬಿಕಾ ಕಾಫಿ, ಬಟರ್ ಫ್ರೂಟ್, ಮಾವು, ಸಪೋಟ ಸೇರಿದಂತೆ ಇತರ ಬೇಸಾಯ ಮಾಡುತ್ತಿದ್ದಾರೆ. ತೋಟದಲ್ಲಿರುವ ಕಾಡು ಮರಗಳಿಗೆ ಕಾಳು ಮೆಣಸಿನ ಬಳ್ಳಿಗಳನ್ನು ಹಬ್ಬಿಸಿದ್ದು, 40 ಕ್ವಿಂಟಾಲ್‌ಗೂ ಅಧಿಕ ಮೆಣಸು ಉತ್ಪಾದಿಸಲಾಗುತ್ತಿದೆ.
ಹಸುಗಳ ಸಾಕಣೆ: ಬಾಲ್ಯದಿಂದಲೇ ಕೃಷಿಯಲ್ಲಿ ಆಸಕ್ತಿ ಹೊಂದಿದದ ಯತೀಶ್ ಹಸು ಸಾಕಣೆಯಲ್ಲೂ ತೊಡಗಿಸಿಕೊಂಡಿದ್ದಾರೆ. ದಿನಕ್ಕೆ 6 ಲೀಟರ್ ಹಾಲು ಉತ್ಪಾದನೆ ಮಾಡುತ್ತಿದ್ದು, ಮನೆ ಬಳಕೆ ಜತೆಗೆ ತೋಟದ ಕಾರ್ಮಿಕರಿಗೂ ಹಾಲು ಪೂರೈಕೆ ಮಾಡುತ್ತಿದ್ದಾರೆ. ಜತೆಗೆ ಹಸುಗಳಿಂದ ಉತ್ಪಾದನೆಯಾಗುವ ಗೊಬ್ಬರವನ್ನು ಜಮೀನಿಗೆ ಉಪಯೋಗಿಸುವ ಮೂಲಕ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಲಾಗುತ್ತಿದೆ.
ನೀರಿನ ವ್ಯವಸ್ಥೆ: ಜಮೀನಿನ ಬಳಕೆಗೆ ಒಂದು ಕೊಳವೆ ಬಾವಿ ಹಾಗೂ ಕೆರೆಯನ್ನು ಹೊಂದಿದ್ದಾರೆ. ಬೇಸಿಗೆಯಲ್ಲಿ ತೋಟಕ್ಕೆ ಸ್ಪ್ರಿಕ್ಲರ್ ಮೂಲಕ ನೀರು ಹಾಯಿಸಲಾಗುತ್ತದೆ. ಕೊಳವೆಬಾವಿ ಮಕ್ಕದಲ್ಲೇ ಇಂಗು ಗುಂಡಿ ನಿರ್ಮಿಸಲಾಗಿದ್ದು, ಮಳೆಗಾಲದಲ್ಲಿ ನೀರು ಶೇಖರಣೆಯಾಗುವಂತೆ ಮಾಡಿ ಅಂತರ್ಜಲ ಕಾಪಾಡಿಕೊಳ್ಳಲಾಗುತ್ತದೆ.
ಸೊಪ್ಪಿನ ಮರಗಳಿಗೆ ಆದ್ಯತೆ: ತೋಟದಲ್ಲಿ ಹೆಚ್ಚು ಸೊಪ್ಪನ್ನು ನೀಡುವ ಹಲಸು, ನೇರಳೆ ಮರಗಳಿಗೆ ಆದ್ಯತೆ ನೀಡಲಾಗುತ್ತದೆ. ಮಣ್ಣಿಗೆ ಹೆಚ್ಚು ಸೊಪ್ಪು ಬಿದ್ದಷ್ಟು ಫಲವತ್ತತೆ ಹೆಚ್ಚಾಗುತ್ತದೆ. ಮಣ್ಣಿನ ಆರೋಗ್ಯದ ದೃಷ್ಟಿಯಿಂದ ಕಳೆನಾಶಕ ಹಾಗೂ ಔಷಧಗಳನ್ನು ಕಡಿಮೆ ಬಳಕೆಮಾಡಬೇಕು ಎಂದು ಯತೀಶ್ ಹೇಳುತ್ತಾರೆ.
ನರ್ಸರಿ: ತೋಟಕ್ಕೆ ಬೇಕಾದ ಸಸಿಗಳನ್ನು ನರ್ಸರಿ ಮೂಲಕ ಮನೆಯಲ್ಲೇ ಉತ್ಪಾದನೆ ಮಾಡಿಕೊಳ್ಳಲಾಗುತ್ತಿದೆ. ಕಾಫಿ, ಮೆಣಸು, ಬಟರ್ ಫ್ರೂಟ್ ಇತರ ಸಸಿಗಳನ್ನು ಮನೆಯಲ್ಲೇ ನರ್ಸರಿ ಮೂಲಕ ಬೆಳೆಸಲಾಗುತ್ತಿದೆ. ಈ ಬಾರಿ ವಿನೂತನ ಮಾದರಿಯಲ್ಲಿ ಸಸಿಗಳನ್ನು ಬೆಳೆಯಲಾಗುತ್ತಿದೆ. ಕಂಬ ಚಿಗುರುಗಳನ್ನು ಕತ್ತರಿಗೆ ಅವುಗಳನ್ನು ನರ್ಸರಿ ಮೂಲಕ ಬೆಳೆಸಲಾಗುತ್ತಿದೆ. ಇವರ ಕೃಷಿ ಕಾಯಕಕ್ಕೆ ಪತ್ನಿ ಮಮತಾ ಹಾಗೂ ತಾಯಿ ಜಾನಕಿ ಸಹಕಾರ ನೀಡುತ್ತಿದ್ದಾರೆ.