

ಹಿರೇಕೆರೂರ: ಕೇಂದ್ರ ಸರ್ಕಾರ ರಸ್ತೆ ಅಭಿವೃದ್ಧಿಗೆ ಮಹತ್ವ ನೀಡಿದ್ದು, ಈಗಾಗಲೇ ಚತುಷ್ಟಥ ಹೆದ್ದಾರಿ ಸೇರಿ ಪ್ರಮುಖ ಹೆದ್ದಾರಿಗಳ ನಿರ್ವಣಕ್ಕಾಗಿ ಹೆಚ್ಚಿನ ಅನುದಾನ ನೀಡಿ ವಾಹನಗಳು ಹಾಗೂ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಟ್ಟಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ತಾಲೂಕಿನ ಹೊಲಬಿಕೊಂಡ ಗ್ರಾಮದಲ್ಲಿ ಹಾವೇರಿ -ಸಾಗರ ರಾಜ್ಯ ಹೆದ್ದಾರಿ 62 ರಸ್ತೆ ಸುಧಾರಣೆ ಕಾಮಗಾರಿಗೆ ಶನಿವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ರಸ್ತೆ ಸಂಚಾರ ಸುಗುಮವಾಗಿದ್ದರೆ ಎಲ್ಲರಿಗೂ ಹೆಚ್ಚಿನ ಅನುಕೂಲವಾಗಲಿದೆ. ಇದರಿಂದ ಸಮಯದ ಜತೆಗೆ, ಇಂಧನ ಉಳಿತಾಯ, ವಾಹನಗಳಿಗೆ ಯಾವುದೆ ಧಕ್ಕೆಯಾಗುವುದಿಲ್ಲ ಹಾಗೂ ವಾಹನಗಳು ಸೇರಿ ಪ್ರಯಾಣಿಕರು ಸುಗಮವಾಗಿ ತಮ್ಮ ಊರುಗಳಿಗೆ ಸುರಕ್ಷಿತವಾಗಿ ತೆರಳಬಹುದಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು 3ನೇ ಬಾರಿ ಕೇಂದ್ರದಲ್ಲಿ ಆಡಳಿತ ನಡೆಸುತ್ತಿದ್ದು, ಅವರ ಆಡಳಿತದಲ್ಲಿ ದೇಶದ ಬಹುತೇಕ ರಸ್ತೆಗಳು ಸೇರಿ ಅನೇಕ ಮಹತ್ವದ ಅಭಿವೃದ್ಧಿ ಕಾರ್ಯಗಳು ನಡೆದಿವೆ ಎಂದರು.
ಶಾಸಕ ಯು.ಬಿ. ಬಣಕಾರ ಮಾತನಾಡಿ, ಸಾರ್ವಜನಿಕರಿಗೆ ಎಲ್ಲ ಮೂಲಸೌಕರ್ಯಗಳಲ್ಲಿ ರಸ್ತೆ ಸೌಲಭ್ಯ ಅತ್ಯಂತ ಮಹತ್ವದ್ದಾಗಿದೆ. ರಸ್ತೆಗಳು ಉತ್ತಮವಾಗಿದ್ದರೆ ಆ ಭಾಗದ ಗ್ರಾಮಗಳು, ಊರುಗಳು ಅಭಿವೃದ್ಧಿಯಾದಂತೆ, ಮುಂದಿನ ದಿನಮಾನಗಳಲ್ಲಿ ತಾಲೂಕಿನ ಎಲ್ಲ ರಸ್ತೆಗಳನ್ನು ಹಂತ ಹಂತವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದರು.
ಮಾಜಿ ಸಚಿವ ಬಿ.ಸಿ. ಪಾಟೀಲ, ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಜಿ. ಶಿವನಗೌಡ್ರ, ಧಾರವಾಡ ಕೆಎಂಎಫ್ ನಿರ್ದೇಶಕ ಹನುಮಂತಗೌಡ ಭರಮಣ್ಣನವರ, ಗ್ರಾಪಂ ಅಧ್ಯಕ್ಷ ರಮೇಶ ಮೇಗಳಮನಿ, ಉಪಾಧ್ಯಕ್ಷೆ ಪುಷ್ಪಾ ಶಿರಿಗೌಡ್ರ, ಕುಮಾರ ಶಿರಸಂಗಿ, ಸಿದ್ದನಗೌಡ ಗವಿಯಪ್ಪನವರ, ಹನುಮಗೌಡ ಗವಿಯಪ್ಪನವರ, ಸಿದ್ದನಗೌಡ ನರೇಗೌಡ್ರ ಹಾಗೂ ಗ್ರಾಪಂ ಸದಸ್ಯರು, ಗ್ರಾಮಸ್ಥರು ಇದ್ದರು.