

ಬೆಳ್ತಂಗಡಿ: ಎಸ್ಡಿಎಂ ಪಾಲಿಟೆಕ್ನಿಕ್ ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮ ಕಾಲೇಜಿನಲ್ಲಿ ಮಂಗಳವಾರ ನಡೆಯಿತು.
ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ.ಹಷೇರ್ಂದ್ರ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳ ಸಾಧನೆ ಗುರುತಿಸುವ ವೇದಿಕೆ ವಾರ್ಷಿಕೋತ್ಸವ. ವಿದ್ಯಾರ್ಥಿಗಳು ಶಿಸ್ತು, ಸಂಯಮಗಳಿಂದ ಕಲಿತು ಮುಂದೆ ಸಾಗಬೇಕು. ಉನ್ನತ ಗುರಿ, ಉನ್ನತ ಸ್ಥಾನ ಪಡೆಯಲು ಕಷ್ಟದ ನಡಿಗೆಯ ಜತೆ ಅನುಭವಗಳು ಅಗತ್ಯ. ಪಾಲಕರ ಸ್ಥಿತಿ ಅರಿತು ವಿದ್ಯಾರ್ಥಿಗಳಿಗೆ ಆಸೆ-ಆಕಾಂಕ್ಷೆಗಳ ಅರಿವಿರಬೇಕು. ಸಿಬ್ಬಂದಿಯ ಉತ್ಸಾಹ, ಉಲ್ಲಾಸ ಸಂಸ್ಥೆಯ ಉನ್ನತಿಗೆ ಕಾರಣವಾಗುತ್ತದೆ ಎಂದರು.
ಬೆಂಗಳೂರಿನ ಟ್ಯಾಲೆಂಟ್ರಿಯ ಸಿಇಒ ಜಗದೀಶ ಶೇಖರ್ ನಾಯ್ಕ ಮಾತನಾಡಿ, ಉದ್ಯಮಗಳನ್ನು ಆರಂಭಿಸುವಾಗ ಆಸಕ್ತಿ, ಛಲ, ಬಲ, ದೂರದೃಷ್ಟಿ ಇದ್ದರೆ ಯಶಸ್ಸು ಖಚಿತ. ದೇಶದಲ್ಲಿ ವಾರ್ಷಿಕವಾಗಿ 1.20 ಕೋಟಿ ವಿದ್ಯಾರ್ಥಿಗಳು ವ್ಯಾಸಂಗ ಪೂರೈಸುತ್ತಾರೆ. ಅದರಲ್ಲಿ ಉದ್ಯೋಗ ಅರ್ಹತೆ ಹೊಂದಿರುವವರು ಶೇ.4.17 ಮಾತ್ರ. ಈ ವಿಚಾರ ವಿಷಾದನೀಯವಾದುದು. ಸತ್ಯ, ಧನ್ಯತಾ ಭಾವ, ಕ್ಷಮಾಗುಣ, ಸಮಾಜಕ್ಕೆ ನೀಡುವ ಕೊಡುಗೆ ಜೀವನದಲ್ಲಿ ಸಂತುಷ್ಟತೆ ಪಡೆಯಲು ಪ್ರಮುಖ ಆಧಾರ ಸ್ತಂಭಗಳು ಎಂದರು.
ಆಟೋಟ, ಪ್ರಾಜೆಕ್ಟ್, ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್. ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಸಂತೋಷ್ ವರದಿ ವಾಚಿಸಿದರು. ಉಪನ್ಯಾಸಕ ಪ್ರವೀಣ ಗೌಡ ಸ್ವಾಗತಿಸಿದರು. ಸಂಪತ್ ಕುಮಾರ್ ಜೈನ್ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ನಿರ್ದೇಶಕ ನಿತಿನ್ ವಂದಿಸಿದರು.