

ಮೂಡುಬಿದಿರೆ: ಗೋದಲಿಯಲ್ಲಿ ಬಾಲ ಯೇಸು ಜನನದ ದರ್ಶನ, ಕ್ಯಾರೆಲ್ ಹಾಡಿದ ವಿದ್ಯಾರ್ಥಿಗಳ ಗುಂಪು, ನಡುವೆ ಬಂದ ಸಂತ ಕ್ಲಾಸ್, ವಿದ್ಯುದ್ದೀಪಾಲಂಕಾರದಿಂದ ಕಂಗೊಳಿಸಿದ ಕ್ರಿಸ್‌ಮಸ್ ಮರ ಸಭಾಂಗಣ, ಏಂಜೆಲ್ಸ್, ಜಿಂಗಲ್ ಬೆಲ್ ಸಂಗೀತ, ಪುಟಾಣಿಗಳ ಬಾಯಿ ಸಿಹಿ ವಾಡಿದ ಕೇಕ್...
ಕರುಣಾಮಯಿ ಬಾಲಯೇಸು ಜನನದ ಕ್ರಿಸ್‌ಮಸ್ ಸಂಭ್ರಮ, ಭಕ್ತಿ ಭಾವ, ಆರಾಧನೆಯ ಸಂಪ್ರೀತಿಯು ಆಳ್ವಾಸ್ ಕಾಲೇಜಿನ ನುಡಿಸಿರಿ ಸಭಾಂಗಣದಲ್ಲಿ ಗುರುವಾರ ಸಂಜೆ ಮೂಡಿತು. ಅದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಮ್ಮಿಕೊಂಡ ಆಳ್ವಾಸ್ ಕ್ರಿಸ್‌ಮಸ್ ಸಂಭ್ರವಾಚರಣೆ.
ಸಂದೇಶ ನೀಡಿದ ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯಾಧ್ಯಕ್ಷ ಡಾ.ಪೀಟರ್ ಪಾವ್ಲ್ ಸಲ್ಡಾನಾ, ಭರವಸೆ ನಿರಾಶೆ ಮೂಡಿಸುವುದಿಲ್ಲ. ಬದುಕು ಪ್ರೀತಿಯ ಪಥ. ಜೀವನದಲ್ಲಿ ಉನ್ನತ ಭರವಸೆಯೇ ಕ್ರಿಸ್‌ಮಸ್ ಸಂದೇಶ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ವಾತನಾಡಿ, ಭಾರತವು ಒಂದು ಜಾತಿ ಅಥವಾ ಧರ್ಮದ ದೇಶ ಆಗಲು ಸಾಧ್ಯ ಇಲ್ಲ. ಸಾಮರಸ್ಯ, ಸೌಹಾರ್ದತೆಯೇ ದೇಶದ ಭವಿಷ್ಯ. ದೇಶದ ಸಹಿಷ್ಣುತೆಗೆ ಕ್ರೈಸ್ತರು ನೀಡಿದ ಕೊಡುಗೆ ಅಪಾರ. ಶಿಕ್ಷಣ, ಆರೋಗ್ಯ, ಬಡತನ ನಿರ್ಮೂಲನೆಗೆ ಮೇಲ್ಪಂಕ್ತಿಯ ಕೊಡುಗೆ ನೀಡಿದ ಕ್ರೈಸ್ತರು, ಅಸ್ಪೃಶ್ಯತೆಯ ಅಂತರಗಳನ್ನು ದೂರ ವಾಡಿದರು ಎಂದರು.
ಮೂಡುಬಿದಿರೆ ಕೊರ್ಪುಸ್ ಕ್ರೈಸ್ತ ಚರ್ಚ್ ಧರ್ಮಗುರು ಒನಿಲ್ ಡಿಸೋಜ ಪ್ರಾರ್ಥಿಸಿದರು. ವಾಜಿ ಸಚಿವ ಅಭಯಚಂದ್ರ ಜೈನ್ ಉಪಸ್ಥಿತರಿದ್ದರು.
ಆಳ್ವಾಸ್ ಹೋಮಿಯೋಪಥಿ ಕಾಲೇಜಿನ ಪ್ರಾಂಶುಪಾಲ ರೋಶನ್ ಪಿಂಟೊ ಸ್ವಾಗತಿಸಿದರು. ಉಪನ್ಯಾಸಕ ರಾಜೇಶ್ ಡಿಸೋಜ ನಿರೂಪಿಸಿದರು.
ವಿದ್ಯಾರ್ಥಿಗಳಿಂದ ಸಮೂಹ ಗಾಯನ
ಬೆಳ್ತಂಗಡಿ ಸಿಯೋನ್ ಆಶ್ರಮ ಟ್ರಸ್ಟ್‌ನ ಡಾ.ಯು.ಸಿ.ಪೌಲೋಸ್ ಹಾಗೂ ಪತ್ನಿ ಮೇರಿ ಪೌಲೋಸ್ ಅವರನ್ನು 25 ಸಾವಿರ ರೂ. ನಗದು ಸಹಿತ ಹಾರ, ಶಾಲು, ಫಲಕ, ಪ್ರವಾಣ ಪತ್ರ ಪ್ರದಾನ ವಾಡಿ ಸನ್ಮಾನಿಸಲಾಯಿತು. 500ಕ್ಕೂ ಹೆಚ್ಚಿನ ವಿದ್ಯಾರ್ಥಿಗಳ ಸಮೂಹ ತುಳು, ಕನ್ನಡ, ಕೊಂಕಣಿ, ಮಲೆಯಾಳ, ಹಿಂದಿ ಸಹಿತ ಹಲವು ಭಾಷೆಗಳಲ್ಲಿ ಕ್ಯಾರೆಲ್ ಹಾಡಿದರೆ, ಏಂಜೆಲ್ಸ್, ಸಂತ ಕ್ಲಾಸ್, ಬಿಳಿ ಕೆಂಪು ಧಿರಿಸು ತೊಟ್ಟ ನೂರಾರು ವಿದ್ಯಾರ್ಥಿಗಳು ಸಂಭ್ರಮಕ್ಕೆ ಮೆರುಗು ನೀಡಿದರು. ಕಲಾಂಗಣ್ ವಾಂಡ್ ಸೋಭಾಣೆ ತಂಡದ ಸದಸ್ಯರು ಗಾಯನ ನಡೆಸಿಕೊಟ್ಟರು.