

ವಿಜಯವಾಣಿ ಸುದ್ದಿಜಾಲ ಧಾರವಾಡ
ಪ್ರತಿಯೊಬ್ಬ ವಿದ್ಯಾರ್ಥಿ ಒಂದಲ್ಲ ಒಂದು ಉನ್ನತ ಗುರಿ ಇಟ್ಟುಕೊಂಡಾಗಲೇ ಸಾಧನೆ ಮಾಡಲು ಸಾಧ್ಯ. ಸಾಧನೆಗೆ ನಿರಂತರ ಪರಿಶ್ರಮದ ಅಗತ್ಯವಿದೆ. ವಿದ್ಯಾರ್ಥಿಗಳು ಪರಿಶ್ರಮದಿಂದ ಮುಂದೆ ಬರಲು ಪ್ರಯತ್ನಿಸಬೇಕು ಎಂದು ಕರ್ನಾಟಕ ಹಿಸ್ಟಾರಿಕಲ್ ಸೊಸೈಟಿ ಚೇರ್ಮನ್ ಡಾ. ಗಿರಿಧರ ಕಿನ್ಹಾಳ ಹೇಳಿದರು.
ನಗರದ ಮಾಳಮಡ್ಡಿ ಕೆ.ಇ. ಬೋರ್ಡ ಪ್ರೌಢ ಶಾಲೆಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳ ಸತ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿ ಸಮೂಹದಲ್ಲಿ ಸಂಸ್ಕೃತಿ-ಸಂಸ್ಕಾರಗಳ ಕೊರತೆ ಇದೆ ಎಂಬುದು ಬಹುತೇಕರ ಅಭಿಪ್ರಾಯ. ಆದರೆ ಕೆ.ಇ.ಬೋರ್ಡ ಶಿಕ್ಷಣ ಸಂಸ್ಥೆಯಲ್ಲಿ ಇಂದಿಗೂ ಹೆಮ್ಮೆ ಪಡುವ ಸಂಸ್ಕೃತಿ ಕಾಣಬಹುದು. ವಿದ್ಯಾರ್ಥಿಗಳು ಚರಿತ್ರೆ, ಚೈತನ್ಯ, ಚಾತುರ್ಯ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸುಸಂಸ್ಕೃತರಾಗಿ ಬಾಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ಡಾ. ಕೃಷ್ಣ ಕುಲಕರ್ಣಿ ಮಾತಮಾಡಿ, ನಮ್ಮ ಶಾಲೆ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಸಹಾಯಧನ ನೀಡಲಾಗತ್ತದೆ. ಇದರ ಸದುಪಯೋಗವನ್ನು ಅರ್ಹ ವಿದ್ಯಾರ್ಥಿಗಳು ಪಡೆದು ಯಶಸ್ವಿಯಾಗುವಂತೆ ಸಲಹೆ ನೀಡಿದರು.
ಪ್ರಾಂಶುಪಾಲೆ ಸುನೀತಾ ಕಡಪಟ್ಟಿ, ಸಂಚಾಲಕಿ ಸುಚೇತಾ ಜಹಗೀರದಾರ, ವಿದ್ಯಾರ್ಥಿಗಳು, ಇತರರು ಇದ್ದರು. ಉಪಪ್ರಾಂಶುಪಾಲ ಎನ್.ಎಸ್.ಗೋವಿಂದರಡ್ಡಿ ಸ್ವಾಗತಿಸಿದರು. ಬಸವರಾಜ ಪಾಟೀಲ ಮತ್ತು ಸೋನಮ್ ಮಹಾಲೆ ನಿರೂಪಿಸಿದರು. ಪಿ. ನಾಗೇಂದ್ರಪ್ಪ ವಂದಿಸಿದರು.